ಭಾನುವಾರ, ಏಪ್ರಿಲ್ 18, 2021
24 °C

ನಿಯಮ ಉಲ್ಲಂಘಿಸಿದ ಕೆಐಎಡಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕೇಂದ್ರ ಸರ್ಕಾರದ ಅಧಿಸೂಚನೆ ಉಲ್ಲಂಘಿಸಿ ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸಾವಿರಾರು ಎಕರೆ ಭೂಸ್ವಾಧೀನ ನಡೆಯುತ್ತಿದೆ ಎಂದು ಸಂಸದ ಆರ್. ಧ್ರುವನಾರಾಯಣ ದೂರಿದ್ದಾರೆ.ಸಂಸತ್ ಅಧಿವೇಶನದಲ್ಲಿ ರೂಲ್-377ರ ಅಡಿ ಮಾತನಾಡಿದ ಅವರು, ಕೇಂದ್ರದ ಮಾರ್ಗಸೂಚಿಗೆ ವಿರುದ್ಧವಾಗಿ ಕೆಐಎಡಿಬಿಯಿಂದ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ. ಈಚೆಗೆ ಬೆಂಗಳೂರಿನಲ್ಲಿ ನೂತನ ವಿಮಾನ ನಿಲ್ದಾಣಕ್ಕೆ 2,100 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಐಟಿ ಬಂಡವಾಳ ವಿಭಾಗಕ್ಕೆ(ಐಟಿಐಆರ್) ರಾಜ್ಯ ಸರ್ಕಾರದಿಂದಲೂ ಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು ಆಪಾದಿಸಿದರು.ಕೇಂದ್ರ ಸರ್ಕಾರ 2008ರ ಮೇ 28ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ ಐಟಿ ಬಂಡವಾಳ ವಿಭಾಗದ ಯೋಜನೆಗಳಿಗೆ ಕೃಷಿಯೇತರ ಭೂಮಿ ಮಾತ್ರ ವಶಪಡಿಸಿಕೊಳ್ಳಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆದರೆ, ಕೆಐಎಡಿಬಿಯಿಂದ ಬಳ್ಳಾರಿಯಲ್ಲಿ ಸಮಗ್ರ ಸ್ಟೀಲ್ ಸ್ಥಾವರ ಸ್ಥಾಪನೆಗೆ 17,571 ಎಕರೆ ಹಾಗೂ ಮೈಸೂರು ಜಿಲ್ಲೆಯಲ್ಲಿ 25 ಸಾವಿರ ಎಕರೆ ಕೃಷಿ ಯೋಗ್ಯ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದೂರಿದರು.ಪ್ರಸ್ತುತ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇದರಿಂದ ಕೆಲವರು ಕರ್ನಾಟಕ ಪ್ರಧಾನ ಕೈಗಾರಿಕಾ ಪ್ರದೇಶದ ಭೂಮಿಯ ಕಬಳಿಕೆಗೆ ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಭೂಸ್ವಾಧೀನ ಅಧಿನಿಯಮದ ಉಲ್ಲಂಘನೆ ನಡೆಯುತ್ತಿದೆ ಎಂದು ಕೇಂದ್ರದ ಗಮನ ಸೆಳೆದರು.ದೇಶ ಪ್ರಗತಿಯತ್ತ ಸಾಗುತ್ತಿದೆ. ಸಮಗ್ರ ಪ್ರಗತಿಯ ದೃಷ್ಟಿಯಿಂದ ರಸ್ತೆ, ಬಂದರು, ವಿಮಾನ ನಿಲ್ದಾಣ, ವಸತಿ ಇತ್ಯಾದಿ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಬೇಕಿದೆ. ಆದರೆ, ಎಸ್‌ಇಜೆಡ್ ಅಧಿನಿಯಮ-2005 ಮತ್ತು 2006ರಲ್ಲಿ ಜಾರಿಯಾದ ಅಧಿಸೂಚನೆ ಅನ್ವಯ ಭೂಸ್ವಾಧೀನದ ಎಲ್ಲೆ ಮೀರಿದೆ. ಕೆಐಎಡಿಬಿಯಿಂದ ನಿಯಮಗಳ ಉಲ್ಲಂಘನೆಯಾಗುತ್ತಿದೆ. ಕೃಷಿ ಯೋಗ್ಯ ಭೂಮಿಯ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳ್ಳಬೇಕು ಎಂದು ಸಂಸದರು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.