ನಿಯಮ-ಕ್ರೀಡಾ ಸ್ಫೂರ್ತಿ ನಡುವೆ ತಿಕ್ಕಾಟ

7
ಮೈಮೇಲೆ ಎರಗಿಬಂದ ಚೆಂಡು; ತಪ್ಪಿಸಿಕೊಳ್ಳಲು ಹೋಗಿ ಕುಕ್ ರನ್‌ಔಟ್

ನಿಯಮ-ಕ್ರೀಡಾ ಸ್ಫೂರ್ತಿ ನಡುವೆ ತಿಕ್ಕಾಟ

Published:
Updated:

ಕೋಲ್ಕತ್ತ: ಕ್ರಿಕೆಟ್‌ನಲ್ಲಿ ನಿಯಮ ಮುಖ್ಯವೇ ಅಥವಾ ಕ್ರೀಡಾ ಸ್ಫೂರ್ತಿ ಮುಖ್ಯವೇ ಎಂಬ ಜಿಜ್ಞಾಸೆಗೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಘಟನೆಯೊಂದು ಸಾಕ್ಷಿಯಾಯಿತು.ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಜಹೀರ್ ಎಸೆತವನ್ನು ಸ್ಕ್ವೇರ್ ಲೆಗ್‌ನತ್ತ ಅಟ್ಟಿದ ಪೀಟರ್ಸನ್ ರನ್‌ಗಾಗಿ ಓಡಲು ಒಂದು ಹೆಜ್ಜೆ ಮುಂದಿಟ್ಟರು. ಆಗ ನಾನ್-ಸ್ಟ್ರೈಕ್ ತುದಿಯಲ್ಲಿದ್ದ ನಾಯಕ ಕುಕ್ ಕೂಡ ಓಡಲು ಮುಂದಾದರು.ಆದರೆ ಆ ಪ್ರದೇಶದಲ್ಲಿ ಫೀಲ್ಡ್ ಮಾಡುತ್ತಿದ್ದ ಕೊಹ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದು ವಿಕೆಟ್‌ನತ್ತ ಎಸೆದರು. ಕ್ರೀಸ್‌ನೊಳಗೆ ವಾಪಸ್ ಬ್ಯಾಟ್ ಇಡಲು ಯತ್ನಿಸಿದ ಕುಕ್ ಚೆಂಡು ತಮ್ಮ ಮೇಲೆ ಬೀಳಬಹುದು ಎಂಬ ಆತಂಕದಿಂದ ಹಿಂದೆ ಸರಿದರು. ಆದರೆ ಅವರ ದುರದೃಷ್ಟ. ಚೆಂಡು ನೇರವಾಗಿ ವಿಕೆಟ್‌ಗೆ ಅಪ್ಪಳಿಸಿತು. ಅಷ್ಟರಲ್ಲಿ ಅಲಸ್ಟೇರ್ ಕ್ರೀಸ್‌ನೊಳಗೆ ಬ್ಯಾಟ್ ಇಟ್ಟಿರಲಿಲ್ಲ. ತಕ್ಷಣ ಭಾರತದ ಆಟಗಾರರು ಸಂಭ್ರಮಿಸಲು ಶುರು ಮಾಡಿದರು.ಇದು ಕೆಲಕಾಲ ಗೊಂದಲಕ್ಕೆ ಕಾರಣವಾಯಿತು. ರನ್‌ಔಟ್ ಮನವಿ ಹಿಂಪಡೆಯುವ ಸಂಬಂಧ ಅಂಪೈರ್‌ಗಳಾದ ಕುಮಾರ ಧರ್ಮಸೇನಾ ಹಾಗೂ ರಾಡ್ ಟಕ್ಕರ್ ನಾಯಕ ದೋನಿಯೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.ಅದಕ್ಕೆ ದೋನಿ ಒಪ್ಪಲಿಲ್ಲವೆನಿಸುತ್ತದೆ. ಹಾಗಾಗಿ ರನ್‌ಔಟ್ ಆಗಿದ್ದನ್ನು ಸ್ಪಷ್ಟಪಡಿಸಿಕೊಳ್ಳಲು ಮೂರನೇ ಅಂಪೈರ್‌ಗೆ ವರ್ಗಾಯಿಸಿದರು. ಚೆಂಡು ವಿಕೆಟ್‌ಗೆ ಅಪ್ಪಳಿಸಿದಾಗ ಕುಕ್ ಬ್ಯಾಟ್ ಎತ್ತಿದ್ದು ಸ್ಪಷ್ಟವಾಯಿತು. ಹಾಗಾಗಿ ಅವರು ತಮ್ಮ ಕ್ರಿಕೆಟ್ ಜೀವನದಲ್ಲಿ ಇದೇ ಮೊದಲ ಬಾರಿ ರನ್‌ಔಟ್ ಆದರು. ದ್ವಿಶತಕ ಗಳಿಸಲು ಆಗ ಅವರಿಗೆ ಕೇವಲ 10 ರನ್‌ಗಳ ಅಗತ್ಯವಿತ್ತು.ಕ್ರೀಸ್‌ನೊಳಗೆ ಅವರು ಸುಲಭವಾಗಿ ಬ್ಯಾಟ್ ಇಡಬಹುದಾಗಿತ್ತು. ಆದರೆ ಮೈಮೇಲೆ ಚೆಂಡು ಬೀಳಬಹುದು ಎಂಬ ಏಕೈಕ ಕಾರಣದಿಂದ ಅವರು ಹಿಂದೆ ಸರಿದರು. ಈ ಹಿಂದೆ ಹಲವು ಬಾರಿ ಕ್ರೀಡಾ ಸ್ಫೂರ್ತಿ ಮೆರೆದಿದ್ದ ನಾಯಕ ದೋನಿ ಈ ಬಾರಿ ಅಂಥ ಕೆಲಸಕ್ಕೆ ಮುಂದಾಗಲಿಲ್ಲ.ಕ್ರಿಕೆಟ್ ನಿಯಮಗಳ ಪ್ರಕಾರ ಇದು ರನ್‌ಔಟ್. ಆದರೆ ಈ ಹಿಂದೆ ರನ್‌ಔಟ್ ಸಂಬಂಧ ಬೇರೆ ರೀತಿಯ ಘಟನೆಗಳಲ್ಲಿ ಕೆಲ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆದ ಉದಾಹರಣೆ ಇದೆ. 1987ರ ವಿಶ್ವಕಪ್‌ನ ಪಂದ್ಯವೊಂದರಲ್ಲಿ ಕರ್ಟ್ನಿ ವಾಲ್ಷ್ ಹಾಗೂ ಸಲೀಮ್ ಜಾಫರ್ ನಡುವೆ ನಡೆದ ಘಟನೆಯೂ ಒಂದು. ಜಾಫರ್ ಅವರನ್ನು ರನ್‌ಔಟ್ ಮಾಡುವ ಅವಕಾಶವಿದ್ದರೂ ವಾಲ್ಷ್ ಸುಮ್ಮನಾಗಿದ್ದರು. ಆ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು. ವಿಂಡೀಸ್‌ನ ವಾಲ್ಷ್ ಹೀರೊ ಆಗಿದ್ದರು.ಕ್ರಿಕೆಟ್ ನಿಯಮ 38.2ರ ಪ್ರಕಾರ ಬ್ಯಾಟ್ಸ್‌ಮನ್ ಒಮ್ಮೆ ಕ್ರೀಸ್ ತಲುಪಿ ಚೆಂಡು ಮೈಮೇಲೆ ಬೀಳುವುದನ್ನು ತಪ್ಪಿಸಿಕೊಳ್ಳಲು ಹೊರಬರಬಹುದು. ಈ ಸಂದರ್ಭದಲ್ಲಿ ಚೆಂಡು ವಿಕೆಟ್‌ಗೆ ಅಪ್ಪಳಿಸಿದರೂ ಅದು ರನ್‌ಔಟ್ ಅಲ್ಲ. ಆದರೆ ಈ ಪಂದ್ಯದಲ್ಲಿ ಕುಕ್ ಕ್ರೀಸ್ ಮುಟ್ಟಿಯೇ ಇರಲಿಲ್ಲ.`ಔಟ್ ಆದ ರೀತಿ ಬಗ್ಗೆ ಕುಕ್‌ಗೆ ತುಂಬಾ ಅಸಮಾಧಾನವಾಗಿದೆ. ಅವರು ದ್ವಿಶತಕದ ಅವಕಾಶವನ್ನು ತಪ್ಪಿಸಿಕೊಂಡರು' ಎಂದಷ್ಟೇ ಜೊನಾಥನ್ ಟ್ರಾಟ್ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.ನೂತನ ನಿಯಮದ ಪ್ರಕಾರ ರನ್‌ಗಾಗಿ ಓಡುವಾಗ ಉದ್ದೇಶಪೂರ್ವಕವಾಗಿ ಚೆಂಡಿಗೆ ಅಡ್ಡಬಂದರೆ ಅದನ್ನು ರನ್‌ಔಟ್ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಅಂಪೈರ್‌ಗಳಿಗಿರುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry