ನಿಯಮ ಮೀರಿ ಕಲ್ಲು ಗಣಿಗಾರಿಕೆ

7

ನಿಯಮ ಮೀರಿ ಕಲ್ಲು ಗಣಿಗಾರಿಕೆ

Published:
Updated:

ಕೊಪ್ಪ: ತಾಲ್ಲೂಕಿನ ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಡೆಕಟ್ಟೆ ಗ್ರಾಮದ ಬಾಳೆಗುಡ್ಡದಲ್ಲಿ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸುತ್ತಲ ಅರಣ್ಯ, ಕೃಷಿಗೆ ಆಸರೆಯಾದ ಜಲಮೂಲಗಳಿಗೆ ಹಾನಿಯಾಗುತ್ತಿದೆ ಎಂಬ ದೂರು ಕೇಳಿಬಂದಿವೆ.ಒಂದು ಪಾರ್ಶ್ವದಲ್ಲಿ ತುಂಗಾ ನದಿ, ಶಕಟಪುರ ಮಠ, ಇನ್ನೊಂದು ಪಾರ್ಶ್ವದಲ್ಲಿ ಕುವೆಂಪು ಜೈವಿಕಧಾಮವಿದ್ದು, ನಡುವಿನ ಸರ್ವೆ ನಂ. 324ರಲ್ಲಿ ಖಾಸಗಿ ಭೂಮಿಯಲ್ಲಿ ಷರತ್ತುಬದ್ಧ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ.ಆದರೆ, ಎಲ್ಲಾ ಷರತ್ತು ಗಾಳಿಗೆ ತೂರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಪರಿಸರ ಸಂರಕ್ಷಣೆಯ ನಿಯಮಗಳನ್ನೂ ಉಲ್ಲಂಘಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಶಬ್ದ-ವಾಯು ಮಾಲಿನ್ಯದಿಂದಾಗಿ ಇಲ್ಲಿ ಬದುಕುವುದೇ ಕಷ್ಟವಾಗಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಸ್ಪಂದಿಸದೆ ಕಿವುಡಾಗಿವೆ ಎಂದು ಗಣಿಯಿಂದ 400 ಮೀಟರ್ ದೂರದಲ್ಲಿ ವಾಸವಿರುವ ವೆಂಕಟಗಿರಿ ಭಟ್ಟ ಅವರ ಕುಟುಂಬ ಅಳಲು ತೋಡಿಕೊಂಡಿದೆ.ಬಾಳೆಗುಡ್ಡದ ತಪ್ಪಲಿನಲ್ಲಿ ಹರಿಯುವ ಹಳ್ಳ ಮುಚ್ಚಿಹೋಗುತ್ತಿದ್ದು, 20ಕ್ಕೂ ಹೆಚ್ಚು ಕೃಷಿಕರ ಭೂಮಿ ಬರುಡಾಗುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂಬ ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದ್ದರೂ ರಾಜಕೀಯ ಪ್ರಭಾವಕ್ಕೆ ಮಣಿದು ಗಣಿ, ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗಣಿಗಾರಿಕೆಗೆ ಮುಕ್ತ ಅವಕಾಶ ನೀಡಿದ್ದಾರೆ ಎಂದು ಗ್ರಾಮಸ್ಥರು ಆಕ್ಷೇಪಿಸಿದ್ದಾರೆ.ಈ ಗಣಿ ಪ್ರದೇಶಕ್ಕೆ ತೆರಳಲು ಅರಣ್ಯ ಇಲಾಖೆಯ ನೆಡುತೋಪಿನಲ್ಲಿಯೇ ರಸ್ತೆ ನಿರ್ಮಿಸಲಾಗಿದೆ. ಆದರೆ, ಯಾವುದೇ ರಸ್ತೆ ನಿರ್ಮಿಸಿಲ್ಲ ಎಂದು  ಅರಣ್ಯ ಇಲಾಖೆ ಹೇಳುತ್ತಿದೆ.5 ವರ್ಷಕ್ಕೆಂದು 1 ಎಕರೆಗಷ್ಟೇ ಗುತ್ತಿಗೆ ನೀಡಿದ್ದರೂ, 10 ಎಕರೆಗೂ ಮೀರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಕ್ರಷರ್, ಹಿಟಾಚಿ, ಡ್ರಿಲ್ಲರ್ ನಿರಂತರ ಕಾರ್ಯನಿರ್ವಹಿಸುತ್ತಿವೆ. ಈ ಕುರಿತು ತೇಜಪ್ರಕಾಶ್ ಎಂಬವರು ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry