ನಿರಂತರ ಜ್ಯೋತಿ: ಇಂದು ಚಾಲನೆ

7

ನಿರಂತರ ಜ್ಯೋತಿ: ಇಂದು ಚಾಲನೆ

Published:
Updated:

ಔರಾದ್: ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ ಒಂದಾಗಿರುವ ಔರಾದ್ ತಾಲ್ಲೂಕಿನ ಜನತೆಗೆ ದಿನದ 24 ಗಂಟೆಗಳ ಕಾಲ ಬೆಳಕು ಪಡೆಯುವ ಅವಕಾಶ ಒದಗಿ ಬಂದಿದೆ. ಗುಜರಾತ್ ಮಾದರಿಯಲ್ಲಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ನಿರಂತರ ಜ್ಯೋತಿ ಯೋಜನೆಯಡಿ ಔರಾದ್ ತಾಲ್ಲೂಕು ಪ್ರಥಮ ಹಂತದಲ್ಲಿ ಆಯ್ಕೆಯಾಗಿದೆ. 10 ಕೋಟಿ ರೂಪಾಯಿ ಈ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ ಬರುವ ಜನೆವರಿ 2012ರಲ್ಲಿ ತಾಲ್ಲೂಕಿನ ಎಲ್ಲ 131 ಗ್ರಾಮಗಳಿಗೆ 24 ಗಂಟೆಗಳ ಕಾಲ ವಿದ್ಯುತ್ ಸೌಲಭ್ಯ ಸಿಗಲಿದೆ.|



2010-11ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಯೋಜನೆ ಜಾರಿಗೆ ಕಾರ್ಯಕ್ರಮ ರೂಪಿಸಿದ್ದರು. ಪ್ರಥಮ ಹಂತದಲ್ಲಿ 126 ತಾಲ್ಲೂಕಿನಲ್ಲಿ ಜಾರಿಗೊಳಿಸಲು 2122 ಕೋಟಿ ರೂಪಾಯಿ ಯೋಜನೆ ಸಿದ್ಧಪಡಿಸಲಾಯಿತು. ಇದರಿಂದಾಗಿ ರಾಜ್ಯದ 20 ಸಾವಿರ ಗ್ರಾಮಗಳಿಗೆ ನಿರಂತರ ವಿದ್ಯುತ್ ಪೂರೈಸುವ ಗುರಿ ಹೊಂದಲಾಗಿದೆ. ಪ್ರಥಮ ಹಂತದಲ್ಲಿ ಆಯ್ಕೆಯಾದ ಔರಾದ್ ತಾಲ್ಲೂಕಿಗೆ 10 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಚಿಮೆಗಾಂವ್, ಕರಂಜಿ, ದಾಬಕಾ, ಕಾಳಗಾಪುರ, ಚಂದೋರಿ, ಕೌಠಾ ಸೇರಿದಂತೆ ಆರು ಕಡೆ ಫೀಡರ್ ಅಳವಡಿಸಲಾಗುತ್ತದೆ.



ಈ ಫೀಡರ್ ಮೂಲಕ ತಾಲ್ಲೂಕಿನ ಮನೆಗಳು, ಬೀದಿ ದೀಪ ಮತ್ತು ಕೈಗಾರಿಕೆಗಳಿಗೆ ದಿನದ 24 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಸಿಗಲಿದೆ. ಒಟ್ಟು 323 ಕಿ.ಮೀ. ಹೊಸದಾಗಿ ವಿದ್ಯುತ್ ತಂತಿ ಹಾಕಲಾಗುತಿದೆ. 25ಕೆವಿ ಸಾಮಥ್ಯದ 94 ಮತ್ತು 63 ಕೆವಿ ಸಾಮರ್ಥ್ಯದ 82 ಸೇರಿ ಒಟ್ಟು 176 ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗುತ್ತಿದೆ. ಇನ್ನು ಮುಂದೆ ಹಳೆಯ ವಿದ್ಯುತ್ ತಂತಿ ಮತ್ತು ಟ್ರಾನ್ಸ್‌ಫಾರ್ಮರ್‌ನಿಂದ ನೀರಾವರಿ ಪಂಪಸೆಟ್‌ಗಳಿಗೆ ಮಾತ್ರ ವಿದ್ಯುತ್ ಪೂರೈಕೆಯಾಗಲಿದೆ. ಹೀಗಾಗಿ ಇದರಿಂದ ರೈತರಿಗೂ ಅನುಕೂಲವಾಗಲಿದೆ.



ಶಂಕುಸ್ಥಾಪನೆ: ಶಾಸಕ ಪ್ರಭು ಚವ್ಹಾಣ ಅವರ ಪ್ರಯತ್ನದಿಂದ ಈ ಯೋಜನೆಗೆ ಬೇಗ ಹಸಿರು ನಿಶಾನೆ ಸಿಕ್ಕಿದೆ. ಇದರ ಖುಷಿಯಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮ ಅದ್ದೂರಿಯಿಂದ ನಡೆಸಲು ಎಲ್ಲ ತಯಾರಿ ನಡೆಸಲಾಗುತ್ತಿದೆ. ಪಟ್ಟಣದ ಪ್ರವಾಸಿ ಮಂದಿರದ ಬಳಿ ಮಧ್ಯಾಹ್ನ 12 ಗಂಟೆಗೆ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ, ಸಂಸದ ಧರಮಸಿಂಗ್, ಶಾಸಕ ಪ್ರಭು ಚವ್ಹಾಣ ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ನಡೆಯುವ ಪಟ್ಟಣದ ಪ್ರವಾಸಿ ಮಂದಿರದ ಬಳಿ ಸಾವಿರಾರು ಜನ ಕೂಡಲು ಬೃಹತ್ ಪೆಂಡಾಲ್ ಹಾಕಲಾಗಿದೆ.  ಆದರೆ ಇವುಗಳಿಗೆ ಪಟ್ಟಣ ಪಂಚಾಯ್ತಿಯಿಂದ ಅಧಿಕೃತ ಅನುಮತಿ ಪಡೆದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry