ಬುಧವಾರ, ನವೆಂಬರ್ 20, 2019
21 °C

ನಿರಂತರ ವಿದ್ಯುತ್‌ಗೆ ಅಹೋರಾತ್ರಿ ಪ್ರತಿಭಟನೆ

Published:
Updated:

ಹಗರಿಬೊಮ್ಮನಹಳ್ಳಿ: ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಸಮರ್ಪಕ ಮತ್ತು ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸುತ್ತಲಿನ ಗ್ರಾಮಗಳ ರೈತರು ಕ್ರಿಮಿನಾಶಕ ಸೀಸೆಗಳ ಸಮೇತ ಶನಿವಾರ ರಾತ್ರಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಪ್ರತಿಭಟನೆಯ ಸ್ಥಳಕ್ಕೆ ಗೆಸ್ಕಾಂ ಅಧಿಕಾರಿಗಳು ಆಗಮಿಸುವುದು ತಡವಾದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದ ನಡೆದಿದ್ದ ಪ್ರತಿಭಟನೆ ಭಾನುವಾರವೂ ಮುಂದುವರೆಯಿತು. ಧರಣಿನಿರತ ರೈತ ಪ್ರತಿಭಟನೆಕಾರರು ಸ್ಥಳದಲ್ಲಿಯೇ ಅಡಿಗೆ ಮಾಡಿ ಊಟ ಮಾಡಿದ ಪ್ರಸಂಗವೂ ನಡೆಯಿತು. ಕೇಂದ್ರದ ದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ಅಂಗಡಿ ಗವಿಸಿದ್ದಪ್ಪ ಮಾತನಾಡಿ, ಹಗಲು ಹಾಗೂ ರಾತ್ರಿ ನಿರಂತರ 3ಗಂಟೆ ತ್ರಿಫೇಸ್ ಮತ್ತು 5 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಬೇಕೆಂಬ ಸರಕಾರದ ಅದೇಶವನ್ನು ಗೆಸ್ಕಾಂ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.

ಪರಿಣಾಮವಾಗಿ ಕೊಳವೆ ಬಾವಿ ಮತ್ತು ಏತ ನೀರಾವರಿ ಯೋಜನೆಗಳ ರೈತರ ಕೃಷಿ ಚಟುವಟಿಕೆಗಳು ಅಸ್ಥಿರಗೊಂಡಿವೆ. ಪೈರುಗಳು ನೀರಿಲ್ಲದೆ ಒಣಗುತ್ತಿವೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ ಎಂದು ಕಿಡಿ ಕಾರಿದರು.ನಿಗದಿತ ವೇಳೆಗೆ ವಿದ್ಯುತ್ ನಿಲುಗಡೆ ಮಾಡುವ ಬದಲಾಗಿ ಅನಿಯಮಿತವಾಗಿ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತ ಮಾಡುವ ಮೂಲಕ ಅಧಿಕಾರಿಗಳು ಜನ ವಿರೋಧಿ ನೀತಿ ಅನುಸರಿಸಿ ವಿದ್ಯಾರ್ಥಿಗಳು ಸೇರಿದಂತೆ ರೈತರ ಮತ್ತು ಸಾರ್ವಜನಿಕರ ನೆಮ್ಮದಿ ಕಸಿದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ವಕ್ತಾರ ಅಕ್ಕಿ ತೋಟೇಶ್ ದೂರಿದರು.ಪ್ರತಿಭಟನಾ ಸ್ಥಳಕ್ಕೆ ಗೆಸ್ಕಾಂ ಎಇಇ ಎಸ್. ಮೋಟ್ಲಾನಾಯ್ಕ ಮತ್ತು ಶಾಖಾಧಿಕಾರಿ ಆಗಮಿಸಿ ಪ್ರತಿಭಟನೆ ವಾಪಸ್ ಪಡೆಯುವಂತೆ ರೈತರ ಮನ ಒಲಿಸಲು ನಡೆಸಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಅಧಿಕಾರಿಗಳೊಂದಿಗೆ ಪ್ರತಿಭಟನೆಕಾರರ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆಯಿತು. ಮೇಲಾಧಿಕಾರಿಗಳನ್ನು ಕರೆಸುವಂತೆ ಪಟ್ಟು ಹಿಡಿದರು.ವಿಭಾಗೀಯ ಇಇ ಜಗದೀಶ್ ಮತ್ತು ಕೆಪಿಟಿಸಿಎಲ್ ಇಇ ರಾಘವೇಂದ್ರ ಭಾನುವಾರ ಬೆಳಿಗ್ಗೆ ಆಗಮಿಸಿ, ಈಗಾಗಲೇ ನಿಗದಿಪಡಿಸಲಾಗಿರುವ ಪ್ರತಿ ಬ್ಯಾಚ್‌ಗೆ ನಿರಂತರವಾಗಿ ಹಗಲು ಮತ್ತು ರಾತ್ರಿ 3 ಗಂಟೆ ತ್ರೀಫೇಸ್ ಹಾಗೂ 5 ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡುವ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆಯನ್ನು ವಾಪಸ್ ಪಡೆದರು.ರೈತ ಮುಖಂಡರಾದ ಮೂಲಿಮನಿ ರವಿಪ್ರಸಾದ್, ಹ್ಯಾಟಿ ಆನಂದರೆಡ್ಡಿ, ಸುರೇಶ್ ಪಟ್ಟಣಶೆಟ್ಟಿ, ಬಣಕಾರ್ ಕೊಟ್ರೇಶ್, ಸಂಡೂರು ಭಾಷಾ, ದೊಡ್ಡಬಸಪ್ಪ, ಬಸವರೆಡ್ಡಿ, ಗೌರಜ್ಜನವರ ತೋಟಪ್ಪ, ಖಾದರಭಾಷಾ, ಉಪ್ಪಾರ ರುದ್ರೇಶ್, ಬಣಕಾರ ತೋಟಪ್ಪ, ಜಿ.ಬಸಪ್ಪಹಾಗೂ ಬಾಚಿನಳ್ಳಿ ಬಸವರಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಚಿಲಗೋಡು, ಮುತ್ಕೂರು, ಕಿತ್ತನೂರು, ಬನ್ನಿಗೋಳ, ಕೃಷ್ಣಾಪುರ, ಶೀಗನಹಳ್ಳಿ, ಬಸರಕೋಡು, ಬಸರಕೋಡು ತಾಂಡ, ರಾಮೇಶ್ವರಬಂಡಿ, ಸೀಗನಹಳ್ಳಿ ಮತ್ತು ಬನ್ನಿಕಲ್ಲು ಗ್ರಾಮಗಳ ರೈತರು ಟ್ರ್ಯಾಕ್ಟರ್, ಎತ್ತಿನಬಂಡಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)