ಬುಧವಾರ, ನವೆಂಬರ್ 13, 2019
23 °C

ನಿರಾಣಿ ನಡೆ; ಕಾರ್ಯಕರ್ತರು ಕಂಗಾಲು

Published:
Updated:

ಬಾಗಲಕೋಟೆ: ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಕ್ಷಣಕ್ಕೊಂದು ಹೇಳಿಕೆ, ದಿನಕ್ಕೊಂದು ರಾಜಕೀಯ ನಡೆಯಿಂದ ಅವರ ಹಿಂಬಾಲಕರು ಮತ್ತು ಪಕ್ಷದ ಕಾರ್ಯಕರ್ತರು ಅಕ್ಷರಶಃ ಕಂಗಾಲಾಗಿದ್ದಾರೆ.ಜಮಖಂಡಿಯಲ್ಲಿ ಬುಧವಾರ ನಡೆದ ಕೆಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಜಮಖಂಡಿಯಿಂದ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದ ಸಚಿವ ನಿರಾಣಿ ಅವರು ಗುರುವಾರ ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳದೇ ಗೈರು ಹಾಜರಾಗುವ ಮೂಲಕ ಕೆಜೆಪಿ ಸೇರ್ಪಡೆ ಖಚಿತಪಡಿಸಿದ್ದರು.ಆದರೆ, ಕ್ಷಣ ಹೊತ್ತಿನಲ್ಲೇ ಗುರುವಾರ ಮಧ್ಯಾಹ್ನ ಮುಖ್ಯಮಂತ್ರಿ ಅವರೊಂದಿಗೆ ಬಾಗಲಕೋಟೆಯಿಂದ ಬೆಳಗಾವಿಗೆ ಹೆಲಕಾಪ್ಟರ್ ಮೂಲಕ ಪ್ರಯಾಣಿಸಿದರು. ಅಲ್ಲದೇ ಈ ಸಂದರ್ಭದಲ್ಲಿ  ಮಾಧ್ಯಮಗಳ ಜೊತೆ ಮಾತನಾಡಿ, `ಬೀಳಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ' ಎಂಬ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಆದರೆ, ಸಚಿವ ನಿರಾಣಿ ಅವರ ಹೇಳಿಕೆ ಸುಳ್ಳು, ಅವರ ಕೆಜೆಪಿ ಸೇರ್ಪಡೆ ವಿಷಯದಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದು ಅವರ ಆಪ್ತರ ಬಲವಾದ ನಂಬಿಕೆ.ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಚಿವರ ಆಪ್ತ ಜಿ.ಪಂ. ಸದಸ್ಯ ಹೂವಪ್ಪ ರಾಠೋಡ, `ಜಮಖಂಡಿಯಲ್ಲಿ ಇದೇ 6ರಂದು ನಡೆಯುವ ಕೆಜೆಪಿ ಸಮಾವೇಶದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರಾಣಿ  ಅಧಿಕೃತವಾಗಿ ಕೆಜೆಪಿ ಸೇರುವುದು ನೂರಕ್ಕೆ ನೂರು ಸತ್ಯ. ಅನಗತ್ಯ ಗೊಂದಲ ನಿರ್ಮಾಣವಾಗುತ್ತಿದೆ' ಎಂದರು.`ಸಚಿವ ನಿರಾಣಿ ಕೆಜೆಪಿಯಿಂದ ಜಮಖಂಡಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಅವರ ಸಹೋದರ ಜಿ.ಪಂ. ಸದಸ್ಯ ಹನುಮಂತ ನಿರಾಣಿ ಬಿಜೆಪಿ ಟಿಕೆಟ್ ಸಿಕ್ಕರೆ ಬೀಳಗಿಯಿಂದ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಅನುಮಾನವಿಲ್ಲ' ಎಂದರು.`ಕೆಜೆಪಿ ಹೋಗುವ ವಿಷಯಕ್ಕೆ ಸಂಬಂಧಿಸಿ ನಿರಾಣಿ ಅವರಲ್ಲಿ ಗೊಂದಲವಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯ ಘಟಕದ ಅಧ್ಯಕ್ಷರಿಗೆ ಸ್ಪಷ್ಟಪಡಿಸಿದ್ದಾರೆ' ಎಂದರು.`ಒಂದು ವೇಳೆ ನಿರಾಣಿ ಅವರು ಬೀಳಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಅವರಿಗೆ ಕಾರ್ಯಕರ್ತರು ಅವಕಾಶ ನೀಡುವುದಿಲ್ಲ, ಅವರು ಜಮಖಂಡಿಯಿಂದಲೇ ಸ್ಪರ್ಧಿಸಿ ಜಯಗಳಿಸಲಿ' ಎಂದರು.`ದಿನಕ್ಕೊಂದು, ಕ್ಷಣಕ್ಕೊಂದು ಹೇಳಿಕೆ ನೀಡುವ ಮೂಲಕ ಕಾರ್ಯಕರ್ತರನ್ನು ಗೊಂದಲಕ್ಕೆ ಸಿಕ್ಕಿಸಬಾರದು, ತಕ್ಷಣ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣಾ ಪ್ರಚಾರದಲ್ಲಿ ತೊಡಗಬೇಕು ಎಂದು ಸಚಿವರಿಗೆ ಮನವರಿಕೆ ಮಾಡಲಾಗಿದೆ. ಅವರೂ ಗೊಂದಲಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ' ಎಂದರು.`ಬಾಗಲಕೋಟೆಗೆ ಸಿ.ಎಂ. ಭೇಟಿ ನೀಡಿದ್ದರಿಂದ ಸಚಿವ ನಿರಾಣಿ ಅವರು ಮುಖ್ಯಮಂತ್ರಿಗಳನ್ನು ಸೌಜನ್ಯಕ್ಕಾಗಿ ಮಾತನಾಡಿಸಲು ಹೆಲಿಪ್ಯಾಡ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರು, ವಿಜಯ ಸಂಕಲ್ಪ ಯಾತ್ರೆಗೆ ಏಕೆ ಆಗಮಿಸಲಿಲ್ಲ ಎಂದು ನಿರಾಣಿ ಅವರನ್ನು ಪ್ರಶ್ನಿಸಿದರು. ಕೆಲ ಹೊತ್ತು ವಾಗ್ವಾದ ನಡೆಯಿತು. ಬಳಿಕ ಸಿ.ಎಂ. ಶೆಟ್ಟರ್ ಮದ್ಯ ಪ್ರವೇಶಿಸಿ ವಾಗ್ವಾದಕ್ಕೆ ತೆರೆ ಎಳೆದರು. ತಮ್ಮ ಜೊತೆ ಬೆಳಗಾವಿಗೆ ಬರುವಂತೆ ಒತ್ತಾಯಿಸಿದರು. ಸಿ.ಎಂ. ಒತ್ತಡಕ್ಕೆ ಮಣಿದು ಬೆಳಗಾವಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದರೇ ವಿನಃ ಕೆಜೆಪಿ ಸೇರುವ ವಿಷಯದಲ್ಲಿ ನಿರಾಣಿ ಅವರಿಗೆ ಸ್ಪಷ್ಟ ನಿಲುವಿದೆ' ಎಂದು ಹೇಳಿದರು.ಟಿಕೆಟ್‌ಗೆ ಮನವಿ

ಸಚಿವ ಮುರುಗೇಶ ನಿರಾಣಿ ಅವರ ಸಹೋದರ, ಜಿ.ಪಂ.ಸದಸ್ಯ ಹನುಮಂತ ನಿರಾಣಿ  ಬೀಳಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಗುರುವಾರ ಜಗದೀಶ ಶೆಟ್ಟರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿಗೆ ಕೋರಿದರು. ಅವರ ಬೆಂಬಲಿಗರು ಹಾಜರಿದ್ದು,  ಟಿಕೆಟ್ ನೀಡಲು ಒತ್ತಾಯ ಪಡಿಸಿದರು.

ಪ್ರತಿಕ್ರಿಯಿಸಿ (+)