5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ನಿರಾಶಾದಾಯಕ ಚಿತ್ರಣ

Published:
Updated:

ಇತ್ತೀಚಿನ ದಿನಗಳಲ್ಲಿ ದೇಶಿ ಅರ್ಥ ವ್ಯವಸ್ಥೆಯು ಕ್ರಮೇಣ ಸುಧಾರಣೆಯ ಹಾದಿಗೆ ಮರಳುತ್ತಿದೆ ಎಂದು ಆಶಿಸಿರು­ವಾಗಲೇ, ಹಣಕಾಸು ಸಾಧನೆಯ ಕೆಲ ಮಾನದಂಡಗಳು ಬೇರೆಯೇ ಆದ ಚಿತ್ರಣ ನೀಡುತ್ತಿರುವುದು ಕಳವಳಕ್ಕೆ  ಎಡೆಮಾಡಿಕೊಟ್ಟಿದೆ. ಆರ್ಥಿಕತೆಯ ಪ್ರಮುಖ ಚಾಲನಾ ಶಕ್ತಿಯಾಗಿರುವ ಕೈಗಾರಿಕಾ ರಂಗದ ಬೆಳವಣಿಗೆಯು ಫೆಬ್ರು­ವರಿ ತಿಂಗಳಲ್ಲಿ ಶೇ 1.9ರಷ್ಟು ಕುಸಿದಿ­ರುವುದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಸ್ಎಂಇ) ಸಾಲದ ಬಿಕ್ಕಟ್ಟು ಎದುರಿಸುತ್ತಿರುವುದು, ಅರ್ಥ ವ್ಯವಸ್ಥೆಯು ಇನ್ನೂ ಬಿಕ್ಕಟ್ಟಿನಿಂದ ಸಂಪೂರ್ಣ­­ವಾಗಿ ಹೊರ ಬಂದಿಲ್ಲ ಎನ್ನುವ ಆತಂಕ ಮೂಡಿಸಿದೆ.ವಾರ್ಷಿಕ ವರಮಾನ ರೂ. 300 ಕೋಟಿಗಳಿಗಿಂತ ಕಡಿಮೆ ಇರುವ ದೇಶದ ಶೇ 46ರಷ್ಟು ಎಸ್ಎಂಇ ಗಳ ಪೈಕಿ ನಾಲ್ಕರಲ್ಲಿ ಒಂದು ಉದ್ದಿಮೆಯು, ಬ್ಯಾಂಕ್ ಸಾಲದ ಬಡ್ಡಿ ಪಾವತಿಸಲೂ  ಪರದಾಡುವಂತಹ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಇಂಡಿಯಾ ರೇಟಿಂಗ್ ಸಂಸ್ಥೆಯ ಅಧ್ಯಯನ ತಿಳಿಸಿದೆ. ಕೃಷಿ ಹೊರತುಪಡಿಸಿದರೆ ಅತಿ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ಸಂಘಟಿತ ಮತ್ತು ಅಸಂಘಟಿತ ವಲಯ­ದಲ್ಲಿನ ಸಣ್ಣ ಕೈಗಾರಿಕಾ ವಲಯ ರಾಜ್ಯದಲ್ಲಿಯೂ ಬಿಕ್ಕಟ್ಟು ಎದುರಿ­ಸುತ್ತಿದೆ.  ವಸೂಲಾಗದ ಸಾಲದ ಪ್ರಮಾಣ ಹೆಚ್ಚಳದ ಕಾರಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ವಲಯಕ್ಕೆ ಸಾಲ ನೀಡಲು ಹಿಂದೇಟು ಹಾಕುತ್ತಿರು­ವುದು ಮತ್ತು ‘ಆರ್‌ಬಿಐ’ ಗರಿಷ್ಠ ಮಟ್ಟದ ಬಡ್ಡಿ ದರ ನಿಗದಿ ಮಾಡಿರು­ವುದು ಈ ವಲಯಕ್ಕೆ ಮಾರಕವಾಗಿ ಪರಿಣಮಿಸಿದೆ. ನೆರೆಹೊರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ­ದಲ್ಲಿ ದುಬಾರಿ ತೆರಿಗೆಗಳಿರುವುದು ಹೆಚ್ಚುವರಿ ಹೊರೆಯಾಗಿದೆ. ರಾಜ್ಯ ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿ­ಯಲ್ಲಿ ಸಣ್ಣ ಕೈಗಾರಿಕೆ­ಗಳಿಗೆ ಅಗತ್ಯವಾದ ನೆರವಿನ ಹಸ್ತ ಚಾಚುವ ಮೂಲಕ ಅವುಗಳ ನೆರವಿಗೆ ತುರ್ತಾಗಿ ಧಾವಿಸಬೇಕಾಗಿದೆ.ದೇಶಿ ಕೈಗಾರಿಕಾ ಬೆಳವಣಿಗೆ ದರವು 9 ತಿಂಗಳ ಹಿಂದಿನ ಮಟ್ಟಕ್ಕೆ ಇಳಿದಿರು­ವುದು, ಕೈಗಾರಿಕಾ ಉತ್ಪಾದನೆ ಸೂಚ್ಯಂಕವು ಸತತ 5ನೇ ತಿಂಗಳೂ ಕುಸಿದಿರುವುದು, ಕೆಲ ಸಮಯದವರೆಗೆ ಹೆಚ್ಚಳ ದಾಖಲಿಸಿದ್ದ ರಫ್ತು ಪ್ರಮಾಣವು ಮಾರ್ಚ್ ತಿಂಗಳಲ್ಲಿ ಮತ್ತೆ ಕುಸಿತ ಕಂಡಿರುವುದು ನಿರಾಶೆ ಮೂಡಿಸುವ ಇತರ ವಿದ್ಯಮಾನಗಳಾಗಿವೆ.   ಅರ್ಥ ವ್ಯವಸ್ಥೆಯ ಆರೋಗ್ಯಕ್ಕೆ ಕನ್ನಡಿ ಹಿಡಿ­ಯುವ ಕಾರುಗಳ ಮಾರಾಟವೂ ಕುಸಿದಿದೆ. ಉದ್ಯೋಗ ಸೃಷ್ಟಿ ಪ್ರಮಾ­ಣವೂ 6 ತ್ರೈಮಾಸಿಕಗಳ ಅವಧಿ­ಯಲ್ಲಿ ಅತಿ ಕಡಿಮೆ ಮಟ್ಟದಲ್ಲಿದೆ.ಜವಳಿ ಮತ್ತು ಆಟೊಮೊಬೈಲ್ ರಂಗದಲ್ಲಿ ಹೊಸ ಉದ್ಯೋಗ ಅವಕಾಶ­ಗಳು ಸೃಷ್ಟಿಯಾಗುತ್ತಿಲ್ಲ. ಅರ್ಥ ವ್ಯವ­ಸ್ಥೆಯ ಬಗ್ಗೆ ಭರವಸೆ ಮೂಡಿಸುವ ವಿಶ್ವಾಸಾ­ರ್ಹತೆಯ ಸಂಕೇತಗಳೇ  ಕಂಡು ಬರು­ತ್ತಿಲ್ಲ. ದೇಶಿ ಅರ್ಥ ವ್ಯವಸ್ಥೆಯ  ಚಿತ್ರಣ ಆಮೂಲಾಗ್ರ­ವಾಗಿ ಬದಲಾ­ಗಲು ಆರ್‌ಬಿಐ ನ ಕಠಿಣ ಹಣಕಾಸು ನೀತಿ ಬದಲಾಗಬೇಕು.ಎಸ್ಎಂಇ ಗಳೂ ಸೇರಿದಂತೆ ಕೈಗಾರಿಕಾ ರಂಗಕ್ಕೆ ಸುಲಭ­ವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆ­ಯುವಂತಾ­ಗಬೇಕು. ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಲು, ಕೈಗಾರಿಕೆ ಉತ್ಪಾದನೆ ವೃದ್ಧಿಯಾಗಲು ಅಗ್ಗದ ಸಾಲವು ಹೆಚ್ಚು ಉತ್ತೇಜನ ನೀಡುವುದು. ಹಣದುಬ್ಬರ ನಿಯಂತ್ರಿ­ಸುವುದಕ್ಕೆ ಆದ್ಯತೆ ನೀಡುವುದರ ಜತೆಗೆ ಕೈಗಾರಿಕೆಗಳ ಬೆಳವಣಿಗೆಗೂ ಅಗತ್ಯ­ವಾದ ಸುಲಭ ಸಾಲ ಸೌಲಭ್ಯ ಒದಗಿ­ಸುವಂತಾದರೆ ಕಳವಳಕ್ಕೆ ಎಡೆ­ಮಾಡಿ­ಕೊಟ್ಟಿರುವ ಕಾರ್ಮೋಡಗಳು ಚೆದುರಿ­ಯಾವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry