ಮಂಗಳವಾರ, ಮೇ 18, 2021
28 °C

ನಿರಾಶ್ರಿತರಿಗೆ ಇನ್ನೂ ದೊರಕದ ಆಸರೆ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ತಾಲ್ಲೂಕಿನಲ್ಲಿ ಭೀಮಾ ಪ್ರವಾಹಕ್ಕೆ ಒಳಗಾಗುವ 14 ಗ್ರಾಮಗಳಲ್ಲಿ ಸರ್ಕಾರ ಕಳೆದ ಒಂದು ವರ್ಷದಿಂದ ನಿರಾಶ್ರಿತರಿಗಾಗಿ ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದು, ಹೆಚ್ಚು ಕಡಿಮೆ ಎಲ್ಲ ಗ್ರಾಮಗಳಲ್ಲಿ ಮನೆಗಳು ಮುಗಿದಿದೆ. ಆದರೆ ಮನೆಗಳು ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದರಿಂದ ನಿರಾಶ್ರಿತರಿಗೆ ಸರ್ಕಾರ ಮನೆ ಕಟ್ಟಿಸಿ ಕೊಟ್ಟರು ಅದರ ಪ್ರಯೋಜನವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.ತಾಲ್ಲೂಕಿನ 14 ಗ್ರಾಮಗಳಲ್ಲಿ ಭೂ ಸೇನೆ ನಿಗಮ ಮತ್ತು ಇನ್ಫೋಸಿಸ್ ಸಂಸ್ಥೆಯವರು 800 ಮನೆ ನಿರ್ಮಾಣ ಮಾಡಿದ್ದಾರೆ. ಮನೆಗಳು ಕಳಪೆ ಮಟ್ಟದ್ದಾಗಿದ್ದು, ವಾಸವಾಗುವ ಮೊದಲೆ ಅಲ್ಲಲ್ಲಿ ಬಿರುಕು ಬಿಡುತ್ತಿವೆ. ಕೂಡಿಗನೂರ ಗ್ರಾಮದಲ್ಲಿ ಮನೆಗೆ ಹಾಕಿರುವ ಛಾವಣಿ ಕೆಳಗೆ ಬೀಳುತ್ತಿದೆ. ಇಂಥ ಮನೆಗಳಲ್ಲಿ ವಾಸ ಮಾಡುವುದು ಹೇಗೆ? ಎಂಬ ಪ್ರಶ್ನೆ ನಿರಾಶ್ರಿತರಲ್ಲಿ ಕೇಳಿ ಬರುತ್ತಿದೆ.ಪ್ರತಿ ಮನೆಗೆ ಸುಮಾರು ರೂ. 1.20 ಲಕ್ಷ ವೆಚ್ಚ ಮಾಡಿದೆ. ಪ್ರತಿ ವರ್ಷ ಭೀಮಾ ನದಿಗೆ ್ರವಾಹ ಬಂದಾಗೊಮ್ಮೆ ಜನರು ಗುಳೆ ಹೋಗುತ್ತಿದ್ದರು. ಆದರೆ ಸರ್ಕಾರ ಮನೆ ಮಂಜೂರು ಮಾಡಿದ್ದರಿಂದ, ನಿರಾಶ್ರಿತರ ಆತಂಕ ದೂರಾಗಿರುತ್ತವೆ ಎಂದು ಭಾವಿಸಿದರೆ ಆದರೆ ಅದು ಸುಳ್ಳಾಗಿದೆ ಎಂದು ಹೇಳಲಾಗುತ್ತಿದೆ.ನಿರಾಶ್ರಿತರ ಮನೆಗಳಿಗೆ ನಿರ್ಮಾಣ ಮಾಡಿರುವ ರಸ್ತೆ, ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿ ನೀರು ಹರಿದು ಹೋಗುವ ಯಾವ ಯೋಜನೆಯೂ ಇಲ್ಲ. ಕೊಳಚೆ ನೀರು ಅಲ್ಲೇ ಇದ್ದರೆ ಪರಿಸರ ಹಾಳಾಗುತ್ತದೆ. ಸರ್ಕಾರ ಇದಕ್ಕಾಗಿ ಉದ್ಯೋಗ ಖಾತ್ರಿಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ.

ಸರ್ಕಾರ ಮನೆ ನಿರ್ಮಾಣಕ್ಕೆ ಹಣ ಖರ್ಚು ಮಾಡಿದರೂ ಅದು ಯಾವ ರೀತಿ ಕೆಲಸ ನಡೆದಿದೆ ಎಂಬುದರ ಬಗ್ಗೆ ಸಮರ್ಪಕವಾದ ಮೇಲ್ವಿಚಾರಣೆ ಮಾಡದೇ ಇರುವುದರಿಂದ ಮನೆಗಳ ಕಾಮಗಾರಿ ಕಳಪೆ ನಿರ್ಮಾಣವಾಗಲಿಕ್ಕೆ ಕಾರಣ ಎಂದು ನಿರಾಶ್ರಿತರು ಆರೋಪಿಸುತ್ತಾರೆ.ಈ ವರ್ಷ ಭೀಮಾ ನದಿಗೆ ಪ್ರವಾಹ ಬಂದಿದೆ. ಆದರೂ ಸರ್ಕಾರ ಮನೆ ಪೂರ್ಣಗೊಳಿಸಿಲ್ಲ. ಈ ಮನೆಗಳಿಗೆ ವಿದ್ಯುತ್, ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಗಳನ್ನು ಬೇಗನೆ ಕಲ್ಪಿಸಿ ಹಸ್ತಾಂತರ ಮಾಡೀತೇ ಎಂದು ನಿರಾಶ್ರಿತರು ಚಾತಕ ಪಕ್ಷಿಯಂತೆ ನೋಡುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.