ನಿರಾಶ್ರಿತರಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ

7

ನಿರಾಶ್ರಿತರಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ

Published:
Updated:

ಚಾಮರಾಜನಗರ: ‘ಜಿಲ್ಲೆಯಲ್ಲಿ ಮಳೆಯಿಂದ ಸಂತ್ರಸ್ತರಾಗಿರುವ ಜನರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು. ಜತೆಗೆ, ನಿರಾಶ್ರಿತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ರಾಜ್ಯ ಘಟಕದ ಅಧ್ಯ್ಯಕ್ಷ ಎ.ಆರ್. ಕೃಷ್ಣಮೂರ್ತಿ ಒತ್ತಾಯಿಸಿದರು.ಮಳೆಯಿಂದ ಹಾನಿಗೀಡಾಗಿರುವ ನಗರದ ರೈಲ್ವೆ ಬಡಾವಣೆ, ರಾಮಸಮುದ್ರ ಸೇರಿದಂತೆ ವಿವಿಧ ಬಡಾವಣೆಗಳಿಗೆ ಮಂಗಳವಾರ ಭೇಟಿ ನೀಡಿ ನೊಂದ ಜನರಿಗೆ ಅವರು ಸಾಂತ್ವನ ಹೇಳಿದರು.ಮಳೆರಾಯನ ಆರ್ಭಟಕ್ಕೆ ಹಲವು ಮಂದಿ ಮನೆ ಕಳೆದುಕೊಂಡಿದ್ದಾರೆ. ಸಾಂಕೇತಿಕವಾಗಿ 8ರಿಂದ 10 ಜನರಿಗೆ ₨ 2ರಿಂದ 3 ಸಾವಿರ ಪರಿಹಾರ ಧನದ ಚೆಕ್‌ ನೀಡಲಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಇದು ಕೇವಲ ಊಟಕ್ಕೆ ಉಪ್ಪಿನಕಾಯಿ ನೀಡಿದಂತಾಗಿದೆ. ಹೆಚ್ಚಿನ ಪರಿಹಾರ ನೀಡಲು ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ರಾಮಸಮುದ್ರದಲ್ಲಿ ತೆರೆದಿರುವ ಗಂಜಿ ಕೇಂದ್ರ ಅವ್ಯವಸ್ಥೆಯಿಂದ ಕೂಡಿದೆ. ಚಿಕ್ಕ ಅಂಗನವಾಡಿ ಕೊಠಡಿಯಲ್ಲಿ 150ಕ್ಕೂ ಹೆಚ್ಚು ಜನರಿದ್ದಾರೆ. ಅವರೇ ಆಹಾರ ಬೇಯಿಸಿ ತಿನ್ನುವ ಪರಿಸ್ಥಿತಿ ಇದೆ. ಇದು ಶೋಚನೀಯ ಸಂಗತಿ. ಕೂಡಲೇ, ಜಿಲ್ಲಾಡಳಿತ ವ್ಯವಸ್ಥಿತ ರೀತಿಯಲ್ಲಿ ಊಟೋಪಚಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ತಿಬ್ಬಳ್ಳಿಕಟ್ಟೆಯಿಂದ ಸುಭೇದಾರ್‌ ಕಟ್ಟೆವರೆಗೆ ದೊಡ್ಡ ಚರಂಡಿ ನಿರ್ಮಿಸಬೇಕು. ರಾಮಸಮುದ್ರದಲ್ಲಿ ವಾಸವಾಗಿರುವ ಪೌರ ಕಾರ್ಮಿಕರಿಗೆ ಸೂಕ್ತ ನಿವೇಶನ ನೀಡಿ ಮನೆ ಕಟ್ಟಿಸಿಕೊಡಬೇಕು. ರಾಮಸಮುದ್ರದ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದ ಸರ್ಕಾರಿ ಜಾಗದಲ್ಲಿ ನಿವೇಶನ ನೀಡಬೇಬೇಕು. ನಿರ್ಲಕ್ಷ್ಯವಹಿಸಿದರೆ ಸಂತ್ರಸ್ತರು ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನಾಗರಾಜಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ.ಎಸ್. ನಿತ್ಯಾ, ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ  ಸುಂದರ್, ಕಂದಹಳ್ಳಿ ನಂಜುಂಡಸ್ವಾಮಿ, ಆರ್. ಮಹದೇವು, ಎಸ್. ಸೋಮನಾಯಕ, ರೇವಣ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry