ನಿರಾಸೆ ದೂರ ಮಾಡುವುದೇ ಆರ್ಸಿಬಿ?

ಬೆಂಗಳೂರು: ಗೆಲ್ಲುವಾಗ ಎಲ್ಲವೂ ಸರಿ ಇರುತ್ತದೆ. ಒಮ್ಮೆ ಸೋಲಿನ ಹಾದಿ ತುಳಿದರೆ ಸಾಕು ಟೀಕಾ ಪ್ರಹಾರವೇ ಶುರುವಾಗುತ್ತದೆ. ಇಂಥದ್ದೊಂದು ಸಂಕಷ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಎದುರಾಗಿದೆ.
ಅಬ್ಬರದ ಬ್ಯಾಟಿಂಗ್ ಮೂಲಕ ಐಪಿಎಲ್ನಲ್ಲಿ ಹೊಸ ಅಲೆ ಎಬ್ಬಿಸಿದ್ದ ಕ್ರಿಸ್ ಗೇಲ್ ಮಂಕಾಗಿದ್ದಾರೆ. ₨ 14 ಕೋಟಿಗೆ ಆರ್ಸಿಬಿ ತಂಡದ ಪಾಲಾಗಿರುವ ಯುವರಾಜ್ ಸಿಂಗ್, ಸ್ಫೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮೊದಲಿನಂತೆ ರನ್ ಪ್ರವಾಹ ಹರಿಸುತ್ತಿಲ್ಲ. ಈ ಕಾರಣದಿಂದಲೇ ವಿಜಯ್ ಮಲ್ಯ ಒಡೆತನದ ಆರ್ಸಿಬಿ ತಂಡ ಟೀಕೆಗಳನ್ನು ಎದುರಿಸುತ್ತಿದೆ.
ಆಡಿರುವ ಎಂಟು ಪಂದ್ಯಗಳಲ್ಲಿ ಮೂರರಲ್ಲಷ್ಟೇ ಗೆಲುವು ಪಡೆದಿರುವ ಆರ್ಸಿಬಿ ತಂಡ ಈ ಎಲ್ಲಾ ಸಂಕಷ್ಟಗಳ ನಡುವೆಯೂ ರಾಜಸ್ತಾನ ರಾಯಲ್ಸ್ ಎದುರು ಮತ್ತೊಮ್ಮೆ ಅಗ್ನಿಪರೀಕ್ಷೆ ಎದುರಿಸಬೇಕಿದೆ. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಮುಹೂರ್ತ ನಿಗದಿಯಾಗಿದೆ.
ವಿರಾಟ್ ಕೊಹ್ಲಿ ಸಾರಥ್ಯದ ಆರ್ಸಿಬಿ ತಂಡಕ್ಕೆ ಇಂದಿನ ಪಂದ್ಯ ಸೇರಿದಂತೆ ಉಳಿದಿರುವುದು ಒಟ್ಟು ಆರು ಪಂದ್ಯಗಳು ಮಾತ್ರ. ಬಾಕಿ ಇರುವ ಪಂದ್ಯಗಳಲ್ಲಿ ಗೆಲುವು ಪಡೆದರಷ್ಟೇ ‘ಪ್ಲೇ ಆಫ್’ ಪ್ರವೇಶದ ಕನಸು ಜೀವಂತ.
ತವರಿನ ತಂಡದಲ್ಲಿ ಚುಟುಕು ಕ್ರಿಕೆಟ್ನ ಸಾಕಷ್ಟು ಪರಿಣತ ಬ್ಯಾಟ್ಸ್ಮನ್ಗಳಿದ್ದಾರೆ. ಆದರೆ, ಅವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮೂಡಿಬಂದಿಲ್ಲ. ಶುಕ್ರವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆರ್ಸಿಬಿ 32 ರನ್ಗಳ ಸೋಲು ಅನುಭವಿಸಿದೆ. ಅದಕ್ಕೂ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಮುಗ್ಗರಿಸಿದೆ.
‘ನಮ್ಮ ತಂಡದಲ್ಲಿ ಬ್ಯಾಟಿಂಗ್ ದಿಗ್ಗಜರೇ ಇದ್ದಾರೆ. ಆದರೆ, ಅವರು ಅಬ್ಬರಿಸುತ್ತಿಲ್ಲ’ ಎಂದು ಆರ್ಸಿಬಿ ತಂಡದ ಆಲ್ರೌಂಡರ್ ಅಲ್ಬಿ ಮಾರ್ಕೆಲ್ ಶನಿವಾರ ಹೇಳಿದ್ದಾರೆ. ಅವರ ಮಾತಿನಲ್ಲಿಯೂ ಸತ್ಯವಿದೆ. ಟ್ವೆಂಟಿ–20 ಪರಿಣತ ಬ್ಯಾಟ್ಸ್ಮನ್ ಯುವರಾಜ್ ಎಂಟು ಪಂದ್ಯಗಳಿಂದ ಗಳಿಸಿದ್ದು 144 ರನ್ ಮಾತ್ರ. ಗೇಲ್ ಆಡಿರುವ ನಾಲ್ಕು ಪಂದ್ಯಗಳಿಂದ ಕಲೆ ಹಾಕಿದ್ದು 89 ರನ್ಗಳಷ್ಟೇ!
ಆರ್ಸಿಬಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನತ್ತಲೂ ಗಮನ ಹರಿಸಬೇಕಿದೆ. ವರುಣ್ ಆ್ಯರನ್ (ಒಟ್ಟು 12 ವಿಕೆಟ್), ಮಿಷೆಲ್ ಸ್ಟಾರ್ಕ್ (11) ಮತ್ತು ಯುಜುವೇಂದ್ರ ಚಾಹಲ್ (10) ತಂಡದ ಬೌಲಿಂಗ್ ಶಕ್ತಿ ಎನಿಸಿದ್ದಾರೆ.
ವಿಶ್ವಾಸದಲ್ಲಿ ರಾಯಲ್ಸ್: ಕರ್ನಾಟಕದ ಕರುಣ್ ನಾಯರ್, ಆಲ್ರೌಂಡರ್ ಸ್ಟುವರ್ಟ್ ಬಿನ್ನಿ, ಕೇರಳದ ಸಂಜು ಸ್ಯಾಮ್ಸನ್ ಮತ್ತು ಅಜಿಂಕ್ಯ ರಹಾನೆ ಅವರನ್ನು ಒಳಗೊಂಡಿರುವ ರಾಜಸ್ತಾನ ರಾಯಲ್ಸ್ ತಂಡ ವಿಶ್ವಾಸದ ಖನಿ. ಎಂಟು ಪಂದ್ಯಗಳಿಂದ ಐದರಲ್ಲಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಸ್ಫೂರ್ತಿಯ ಸೆಲೆ ರಾಹುಲ್ ದ್ರಾವಿಡ್ ರಾಯಲ್ಸ್ ತಂಡದ ಸಲಹೆಗಾರ. ಇವರ ಮಾರ್ಗದರ್ಶನ ರಾಯಲ್ಸ್ ಆಟಗಾರರಿಗಿದೆ. ಹೋದ ವರ್ಷ ಇದೇ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ದ್ರಾವಿಡ್ ರಾಯಲ್ಸ್ ತಂಡದ ನಾಯಕರಾಗಿದ್ದರು.
ರಾಯಲ್ಸ್ ತಂಡ ಬೌಲಿಂಗ್ನಲ್ಲಿಯೂ ಬಲಿಷ್ಠವಾಗಿದೆ. 42 ವರ್ಷದ ಸ್ಪಿನ್ನರ್ ಪ್ರವೀಣ್ ತಾಂಬೆ, ನಾಯಕ ಶೇನ್ ವಾಟ್ಸನ್, ರಜತ್ ಭಾಟಿಯಾ ಬೌಲಿಂಗ್ ವಿಭಾಗದ ಬಲ ಎನ್ನಿಸಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ತಾಂಬೆ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ್ದರು.
ಮತ್ತೆ ಕಾಡದಿರಲಿ ನಿರಾಸೆ: ಪ್ರಬಲ ಬ್ಯಾಟ್ಸ್ಮನ್ಗಳನ್ನು ಹೊಂದಿದ್ದರೂ ಆರ್ಸಿಬಿ ತಂಡ ಇದೇ ಐಪಿಎಲ್ ಋತುವಿನಲ್ಲಿ ರಾಯಲ್ಸ್ ಎದುರು ನಿರಾಸೆ ಕಂಡಿದೆ.
ಅಬುಧಾಬಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿ ಕೇವಲ 70 ರನ್ಗೆ ಆಲ್ಔಟ್ ಆಗಿತ್ತು. ಆ ನಿರಾಸೆ ಮತ್ತೆ ಕಾಡದಿರಲಿ ಎನ್ನುವುದು ಅಭಿಮಾನಿಗಳ ಆಶಯ. ಜೊತೆಗೆ ಸೋಲಿನ ಸರಪಳಿ ಕಳಚಿಕೊಂಡು ಗೆಲುವಿನ ಹಾದಿಗೆ ಮರಳಬೇಕೆನ್ನುವುದು ಬೆಂಗಳೂರು ತಂಡದ ಕ್ರಿಕೆಟ್ ಪ್ರೇಮಿಗಳ ಹಾರೈಕೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.