ಭಾನುವಾರ, ಏಪ್ರಿಲ್ 18, 2021
33 °C

ನಿರೀಕ್ಷಿತ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ರಾಜ್ಯಸಭೆಯಲ್ಲಿ ಕರ್ನಾಟಕದಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ವಿಧಾನಸಭೆ ಮತಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶವೇ ಹೊರಬಂದಿದೆ. ಸಂಖ್ಯಾಬಲದಲ್ಲಿ ಹೆಚ್ಚಿರುವ ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಗೆದ್ದಿದ್ದಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕೆ.ಮರುಳಸಿದ್ದಪ್ಪ ಅವರಿಗೆ ಹೋರಾಟವನ್ನು ದಾಖಲು ಮಾಡಿದ ತೃಪ್ತಿ. ಎಂ.ರಾಜಶೇಖರಮೂರ್ತಿ (ಜೆಡಿಎಸ್) ಅವರ ನಿಧನದಿಂದ ತೆರವಾಗಿದ್ದ ಈ ಸದಸ್ಯತ್ವದ ಅವಧಿ ಹದಿಮೂರು ತಿಂಗಳಷ್ಟೇ ಇರುವುದರಿಂದ, ಈಗ ಆಯ್ಕೆಯಾಗಿರುವ ನಟಿ ಹೇಮಾಮಾಲಿನಿ ಅವರಿಗೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ರಾಜ್ಯಸಭೆಯಲ್ಲಿ ದನಿ ಎತ್ತಲು ಎಷ್ಟು ಅವಕಾಶ ಸಿಗುವುದೆಂದು ಹೇಳುವುದು ಕಷ್ಟ. ತಾನು ಸೂಚಿಸಿದ್ದ ಅಭ್ಯರ್ಥಿಯ ಹೆಸರನ್ನು ಕಡೆಗಣಿಸಿದ ಬಿಜೆಪಿ ವರಿಷ್ಠ ಮಂಡಲಿ, ಕರ್ನಾಟಕದವರಲ್ಲದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದನ್ನು ಸ್ಥಳೀಯ ಘಟಕ ಪ್ರತಿರೋಧವಿಲ್ಲದೆ ಒಪ್ಪಿಕೊಂಡಿರುವುದು ರಾಷ್ಟ್ರೀಯ ಪಕ್ಷಗಳ ಅವಕಾಶವಾದಿ ರಾಜಕಾರಣಕ್ಕೆ ಸಹಜವಾಗಿಯೇ ಇದೆ.ಹೇಮಾಮಾಲಿನಿ ವೈಯಕ್ತಿಕವಾಗಿ ಹೊಂದಿರುವ ತಾರಾವರ್ಚಸ್ಸನ್ನು ಸದ್ಯ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಬಳಸಿಕೊಳ್ಳಲು ಬಿಜೆಪಿ ವರಿಷ್ಠ ಮಂಡಲಿ ನಿರ್ಧರಿಸಿದ್ದರೆ ತಪ್ಪಲ್ಲ. ಅದನ್ನು ರಾಜ್ಯಸಭೆಯ ಸದಸ್ಯತ್ವದ ಸ್ಥಾನವಿಲ್ಲದೆಯೂ ಮಾಡಲು ಸಾಧ್ಯವಿತ್ತು. ಆದರೆ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿದ್ದ ಹೋರಾಟದಲ್ಲಿ ಪಕ್ಷದ ನೈತಿಕ ನೆಲೆಯನ್ನು ದುರ್ಬಲಗೊಳಿಸುವಂತೆ ಮಾಡಿದ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಯ್ಕೆಯನ್ನು ತಿರಸ್ಕರಿಸುವ ಮೂಲಕ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ- ಎಂಬ ಸಂದೇಶ ರವಾನಿಸಲು ಬಿಜೆಪಿ ವರಿಷ್ಠ ಮಂಡಲಿ ಈ ಕ್ರಮ ಕೈಗೊಂಡಿರುವಂತೆ ತೋರುತ್ತದೆ. ಬಿಜೆಪಿ ಅಭ್ಯರ್ಥಿ ಹೊರರಾಜ್ಯದವರು ಎಂಬುದನ್ನು ಟೀಕಿಸಲು ಕಾಂಗ್ರೆಸ್ ಇಲ್ಲವೇ ಜೆಡಿಎಸ್‌ಗೆ ನೈತಿಕ ಬಲವಿಲ್ಲ. ಈ ವಿಷಯವನ್ನು ನಾಡಿನ ಆತ್ಮಗೌರವದ ಪ್ರಶ್ನೆಯಾಗಿ ಪರಿಗಣಿಸಿ ಸಾರಸ್ವತ ಲೋಕದ ವ್ಯಕ್ತಿಯೊಬ್ಬರನ್ನು ಸ್ಪರ್ಧೆಗೆ ಇಳಿಸಿದ ಅವುಗಳ ಕ್ರಮಕ್ಕೂ ಸಮರ್ಥನೆ ಇಲ್ಲ.ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟು ಸಂಖ್ಯಾಬಲ ಇದ್ದಿದ್ದರೆ ಈ ಎರಡೂ ಪಕ್ಷಗಳು ಹೀಗೆ ಸಾಂಸ್ಕೃತಿಕ ಕ್ಷೇತ್ರದ ವ್ಯಕ್ತಿಗಳತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಬಿಜೆಪಿ ಅಭ್ಯರ್ಥಿಯ ಸ್ಪರ್ಧೆ ಮುಂದಿಟ್ಟುಕೊಂಡು ಅದನ್ನು ಭಾವನಾತ್ಮಕ ಪ್ರಶ್ನೆಯಾಗಿಸುವ ಪ್ರಯತ್ನಕ್ಕೂ ಸಮರ್ಥನೆ ಇಲ್ಲ. ರಾಜ್ಯವನ್ನು ಪ್ರತಿನಿಧಿಸಬೇಕಾದ ಸ್ಥಾನವನ್ನು, ಹೊರರಾಜ್ಯದ ಉದ್ಯಮಿಗಳಿಗೆ ಹರಾಜಿಗೆ ಇಟ್ಟಂತೆ, ನೀಡಿದ ಕಳಂಕ ಎಲ್ಲ ರಾಜಕೀಯ ಪಕ್ಷಗಳಿಗೂ ಅಂಟಿಕೊಂಡಿದೆ.ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈಗ ರಾಜ್ಯವನ್ನು ಪ್ರತಿನಿಧಿಸಿದ ಎಷ್ಟು ಮಂದಿ ಸದಸ್ಯರು ರಾಜ್ಯದ ಹಿತದ ಪ್ರಶ್ನೆ ಬಂದಾಗ ಧ್ವನಿ ಎತ್ತಿದ್ದಾರೆ ಎಂಬುದು ಜನತೆಗೆ ಗೊತ್ತಿರುವ ಸಂಗತಿ. ರಾಜಕೀಯ ಪಕ್ಷಗಳದು ಅವಕಾಶವಾದಿ ನಡವಳಿಕೆ. ಸಾಹಿತ್ಯಕ್ಷೇತ್ರದ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿರುವುದು ರಾಜಕೀಯ ತಂತ್ರ. ಇದಕ್ಕೆ ಸಾಂಸ್ಕೃತಿಕ ಲೋಕದ ಗಣ್ಯರು ಬಲಿಯಾಗುತ್ತಿರುವುದು, ಅವರು ಕೂಡ ಅನುಕೂಲಸಿಂಧು ರಾಜಕಾರಣದ ಆಮಿಷಕ್ಕೆ ಒಳಗಾಗುವಷ್ಟು ದುರ್ಬಲರಾಗಿರುವುದರ ಪ್ರತೀಕ. ರಾಜ್ಯದ ರಾಜಕೀಯ ಕ್ಷೇತ್ರದಂತೆ ಸಾಹಿತ್ಯ ವಲಯವೂ  ಈ ಮಟ್ಟಕ್ಕೆ ಇಳಿದಿರುವುದು ನಾಡಿನ ದುರಂತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.