ನಿರೀಕ್ಷಿತ ಮಟ್ಟ ತಲುಪದ ಖಾತ್ರಿ

7

ನಿರೀಕ್ಷಿತ ಮಟ್ಟ ತಲುಪದ ಖಾತ್ರಿ

Published:
Updated:

ಕೊಳ್ಳೇಗಾಲ : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಮುಂದುವರೆದರೆ  ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೂಡುರು ಭೀಮಸೇನ ಎಚ್ಚರಿಕೆ ನೀಡಿದರು. ಪಟ್ಟಣದ ಗುರುಭವನದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವ ಬಗ್ಗೆ ಕಿಡಿಕಾರಿದರು.ಉದ್ಯೋಗ ಖಾತ್ರಿ ಕಾಮಗಾರಿ ಗಳನ್ನು ಪೂರ್ಣಗೊಳಿಸುವ ಬಗ್ಗೆ ಸಾಕಷ್ಟು ತರಬೇತಿ ಮಾಹಿತಿ ಮತ್ತು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಅದಾಗ್ಯೂ ಸಹ ಪ್ರಗತಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲ, ಅದೊಂದು ಕಾಯಿದೆ ಎಂಬುದನ್ನು ತಲೆಯಲ್ಲಿಟ್ಟುಕೊಂಡು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಮೇಲುಸ್ತುವಾರಿ ಅಧಿಕಾರಿಗಳು ‘ಖಾತ್ರಿ’ ಅನುಷ್ಠಾನಕ್ಕೆ ಮುಂದಾಗಬೇಕು. ಖಾತ್ರಿ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಮುಂದುವರೆದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ತರಾಟೆ : ಗ್ರಾಮ ಪಂಚಾಯಿತಿಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಖಾತ್ರಿ ಅನುಷ್ಠಾನಗೊಳ್ಳದಿರುವ ಬಗ್ಗೆ ಪ್ರಾರಂಭದಲ್ಲಿಯೇ ಯಳಂದೂರು ತಾಲ್ಲೂಕಿನ ಅಗರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಉಸ್ತುವಾರಿ ಅಧಿಕಾರಿ ಉಪ ಕಾರ್ಯದರ್ಶಿಯವರ ಕೆಂಗಣ್ಣಿಗೆ ಗುರಿಯಾದರು. ಅಗರ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಕ್ರಿಯಾಯೋಜನೆ ತಯಾರಿಸಿರುವ ಪ್ರಶ್ನೆಗೆ ಕಾರ್ಯದರ್ಶಿ ಉತ್ತರಿಸಲು ಪುಸ್ತಕ ಹುಡುಕುತ್ತಿರುವುದನ್ನು ಕಂಡು ಕನಿಷ್ಠ ಮಾಹಿತಿ ತಿಳಿದುಕೊಳ್ಳದ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.ಅಂತಿಮ ಗಡುವು : 24 ಗಂಟೆಯೊಳಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗೆಳಿಗೆ ಚಾಲನೆ ನೀಡಿ ವರದಿ ಮಾಡಬೇಕೆಂದು ಉಪ ಕಾರ್ಯದರ್ಶಿ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ ಹಾಗೂ ಮೇಲುಸ್ತುವಾರಿ ಅಧಿಕಾರಿಗಳಿಗೆ ಅಂತಿಮ ಗಡುವು ನೀಡಿದರು.ಕಾಮಗಾರಿ ಅನುಷ್ಠಾನದ ಬಗ್ಗೆ ನಿರ್ಲಕ್ಷ್ಯ ಸಹಿಸಲಾಗದು. ಉಳಿದಿರುವ 45 ದಿನಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೆಲಸ ನಿರ್ವಹಿಸುವಂತೆ ಕರೆ ನೀಡಿದರು. ಕೊಳ್ಳೇಗಾಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಲಿಂಗಯ್ಯ, ಯಳಂದೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಣ್ಣ, ಕೊಳ್ಳೇಗಾಲ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ದೇವರಾಜು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry