ಮಂಗಳವಾರ, ನವೆಂಬರ್ 19, 2019
27 °C

ನಿರೀಕ್ಷೆಯ ತಟದಲ್ಲಿ ನೇಹಾ...

Published:
Updated:

ನನ್ನ ವೃತ್ತಿಜೀವನದಲ್ಲಿ ಇಲ್ಲಿಯವರೆಗೂ ಅಭಿನಯಿಸಿದ ಚಿತ್ರಗಳಲ್ಲೆಲ್ಲಾ `ಯಮ್ಲಾ ಪಗ್ಲಾ ದಿವಾನಾ 2' ಸಿನಿಮಾ ಮಹತ್ವವಾದುದು' ಎನ್ನುತ್ತಿದ್ದಾರೆ ನಟಿ ನೇಹಾ ಶರ್ಮಾ. ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಲು ಈ ಚಿತ್ರ ನೆರವಾಗಲಿದೆ ಎಂಬುದು ನೇಹಾ ವಿಶ್ವಾಸ.ಅಂದಹಾಗೆ, ನೇಹಾ ಬಾಲಿವುಡ್ ಓಣಿಯಲ್ಲಿ ಮೊದಲಿಗೆ ಕಾಣಿಸಿಕೊಂಡದ್ದು ಮೋಹಿತ್ ಸೂರಿ ನಿರ್ದೇಶನದ `ಕ್ರೂಕ್' ಸಿನಿಮಾದಲ್ಲಿ. ಈ ಚಿತ್ರದಲ್ಲಿ ಅವರು ಇಮ್ರಾನ್ ಹಶ್ಮಿಗೆ ಜತೆಯಾಗಿದ್ದರು. ನಂತರ ವಿವೇಕ್ ಒಬೆರಾಯ್ ಜತೆಗಿನ `ಜಯಂತ್ ಭಾಯ್ ಕಿ ಲವ್‌ಸ್ಟೋರಿ' ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಬಾಲಿವುಡ್‌ನಲ್ಲಿ ಹೇಳಿಕೊಳ್ಳುವಂಥ ಯಶಸ್ಸೇನೂ ಪಡೆಯಲಿಲ್ಲ. ಹಾಗಾಗಿ ನೇಹಾ ತಮ್ಮ ಮೂರನೇ ಚಿತ್ರದ ಬಗ್ಗೆ ವಿಪರೀತ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. “ನನ್ನ ಸಿನಿ ಬದುಕಿಗೆ `ಯಮ್ಲಾ ಪಗ್ಲಾ ದಿವಾನಾ 2' ಚಿತ್ರ ಒಳ್ಳೆ ಬ್ರೇಕ್ ನೀಡಲಿದೆ. ಬಾಲಿವುಡ್‌ನಲ್ಲಿ ಇಲ್ಲಿವರೆಗೂ ಅಭಿನಯಿಸಿದ ಚಿತ್ರಗಳಲ್ಲೆಲ್ಲಾ ಇದು ಅತ್ಯಂತ ಬಿಗ್‌ಬಜೆಟ್ ಚಿತ್ರ. ಸೂಪರ್‌ಸ್ಟಾರ್‌ಗಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಹಾಗೂ ಧರ್ಮಾಜೀ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಖುಷಿಯ ಸಂಗತಿ” ಎಂದಿದ್ದಾರೆ ನೇಹಾ.ಚಿತ್ರ ಪ್ರಚಾರ ಎಲ್ಲೆಡೆ ಚೆನ್ನಾಗಿ ನಡೆಯುತ್ತಿದೆ ಎನ್ನುವ ನೇಹಾ, ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿಯಾಗಿರುವ ಪಾತ್ರ ನಿರ್ವಹಿಸಿದ್ದಾರೆ. ಸಲ್ಮಾನ್ ಅಭಿನಯದ ಎಲ್ಲ ಚಿತ್ರಗಳನ್ನು ಫಸ್ಟ್ ಶೋ ನೋಡುವ ನೇಹಾ ನಿಜ ಜೀವನದಲ್ಲೂ ಸಲ್ಮಾನ್ ಖಾನ್ ಅವರ ಅಭಿಮಾನಿಯಂತೆ. `ಈ ಚಿತ್ರದಲ್ಲಿ ನನ್ನದು ಸಲ್ಮಾನ್ ಖಾನ್‌ನ ದೊಡ್ಡ ಅಭಿಮಾನಿಯ ಪಾತ್ರ.ಚಿತ್ರದಲ್ಲಿ ನಾನು ಮೊದಲಿಗೆ ಕಾಣಿಸಿಕೊಳ್ಳುವುದು ಧರ್ಮಾಜೀ ಮತ್ತು ಬಾಬಿ ಅವರೊಟ್ಟಿಗಿನ ಒಂದು ಭಾವನಾತ್ಮಕ ಸನ್ನಿವೇಶದಲ್ಲಿ. ಈ ಸನ್ನಿವೇಶದ ಚಿತ್ರೀಕರಣದ ವೇಳೆ ಇಬ್ಬರೂ ನಟರೂ ನನಗೆ ತುಂಬಾ ಸಹಕಾರ ನೀಡಿದರು. ಧರ್ಮಾಜೀ ಅವರಂತೂ ಸ್ನೇಹ ಜೀವಿ. ಹೊಸಬರನ್ನು ಪ್ರೋತ್ಸಾಹಿಸುತ್ತಾರೆ. ಎಲ್ಲರಿಗೂ ಉಪಯುಕ್ತವಾಗುವಂಥದ್ದನ್ನೇ ಹೇಳಿಕೊಡುತ್ತಾರೆ' ಎಂಬುದು ನೇಹಾ ಶ್ಲಾಘನೆ.

 

ಪ್ರತಿಕ್ರಿಯಿಸಿ (+)