ಶನಿವಾರ, ಡಿಸೆಂಬರ್ 7, 2019
25 °C

ನಿರೀಕ್ಷೆಯ ಭಾರ

Published:
Updated:
ನಿರೀಕ್ಷೆಯ ಭಾರ

ಸ್ಪಿನ್ ಮಾಂತ್ರಿಕ ಎರ‌್ರಪಳ್ಳಿ ಪ್ರಸನ್ನ ಮತ್ತು ಶರವೇಗದ ಸರದಾರ ಜಾವಗಲ್ ಶ್ರೀನಾಥ್ ಮೈಸೂರಿನ ಹೆಸರನ್ನು ಕ್ರಿಕೆಟ್ ಭೂಪಟದಲ್ಲಿ ಮಿಂಚುವಂತೆ ಮಾಡಿದ ಧ್ರುವತಾರೆಗಳು.

ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರೂ ಓದಿನೊಂದಿಗೆ ಕ್ರಿಕೆಟ್‌ನಲ್ಲಿಯೂ ಉನ್ನತ ಸಾಧನೆ ಮಾಡಿದ ಶ್ರೇಯ ಈ ಇಬ್ಬರೂ ಮಹನೀಯರದ್ದು.

 

ಆದರೆ ಇವತ್ತಿನ ಶಿಕ್ಷಣ ಪದ್ಧತಿಯಲ್ಲಿ ಇಂತಹ ಪ್ರತಿಭೆಗಳನ್ನು ಹುಡುಕುವ ಹರಸಾಹಸಕ್ಕೆ ಫಲ ಸಿಗದೇ ಕೈಕೈ ಹಿಸುಕಿಕೊಳ್ಳುವ ಸ್ಥಿತಿ ಗ್ರಾಮೀಣಮಟ್ಟದ ಕ್ರಿಕೆಟ್ ಕ್ಷೇತ್ರದಲ್ಲಿ ಕಾಣುತ್ತಿದೆ.

ಗ್ರಾಮಾಂತರ ಕ್ರಿಕೆಟ್ ಬೆಳೆಸಲು ಒಂದು ಕಡೆ ಮೂಲಸೌಕರ‌್ಯಗಳ ಅಭಿವೃದ್ಧಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಪ್ರಮುಖ ಘಟ್ಟದಲ್ಲಿಯೇ ಪ್ರತಿಭೆಗಳ ಕೊರತೆ ಕಾಡುತ್ತಿದೆ.

 

14 ವರ್ಷದೊಳಗಿನವರ ವಯೋಮಿತಿಯವರೆಗೂ ಆಟಗಾರರು ಸಿಗುತ್ತಾರೆ. ಆದರೆ ನಂತರ 16, 19 ಮತ್ತು 22 ವರ್ಷದೊಳಗಿನವರ ವಿಭಾಗಗಳಲ್ಲಿ ಆಟಗಾರರ ಸಂಖ್ಯೆ ಇಳಿಮುಖವಾಗುತ್ತಲೇ ಹೋಗುತ್ತಿದೆ. ಇದೆಲ್ಲದರ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಟೂರ್ನಿಗಳು ಹೆಚ್ಚಬೇಕಾದರೆ ಪ್ರಾಯೋಜಕತ್ವ ಪಡೆಯುವ ಸವಾಲಿಗೂ ಪರಿಹಾರ ಹುಡುಕಬೇಕಿದೆ. ಬ್ಯಾಂಕುಗಳು, ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದೂ ಗ್ರಾಮೀಣ ಭಾಗದ ಕ್ರಿಕೆಟ್‌ನ ಹಿನ್ನಡೆಗೆ ಕಾರಣವಾಗುತ್ತಿದೆ.

 

ಆದ್ದರಿಂದಲೇ ಮಕ್ಕಳು ಮತ್ತು ಪೋಷಕರು ಉತ್ತಮ ಭವಿಷ್ಯಕ್ಕಾಗಿ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡುವುದು ಸಹಜ. ಜಿಲ್ಲಾಕೇಂದ್ರ ಗಳಲ್ಲಿಯೇ ಇದ್ದು ಕ್ರಿಕೆಟ್‌ನಲ್ಲಿ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟಕರ.ಉನ್ನತಮಟ್ಟದ ತರಬೇತಿ ಮತ್ತು ಅವಕಾಶಗಳಿಗೆ ಬೆಂಗಳೂರಿಗೇ ಹೋಗಿ ನೆಲೆಸಬೇಕು. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಉತ್ತಮ ಪ್ರತಿಭೆಗಳಿದ್ದರೂ ರಾಜಧಾನಿಗೆ ಹೋಗಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇದು ಕೂಡ ಗ್ರಾಮಾಂತರ ಪ್ರದೇಶದ ಕ್ರಿಕೆಟ್ ಬೆಳವಣಿಗೆಗೆ ಹಿನ್ನಡೆಯಾಗಿದೆ.ಈ ಸಮಸ್ಯೆಗಳಿಂದ ಹೊರಬರಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೆಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ.  ಪ್ರಮುಖ ನಗರಗಳಲ್ಲಿ ಮೈದಾನಗಳ ಅಭಿವೃದ್ಧಿಯ ಜೊತೆಗೆ ನಿರಂತರ ತರಬೇತಿಯ ಅಕಾಡೆಮಿಗಳನ್ನು ವಲಯ ಕೇಂದ್ರಗಳಲ್ಲಿ ಸ್ಥಾಪಿಸುವ ಕೆಲಸಕ್ಕೆ ಚಾಲನೆ ದೊರೆತಿದೆ.ಬೇರು ಗಟ್ಟಿಗೊಳಿಸುವತ್ತ: ಕರ್ನಾಟಕದ ಕ್ರಿಕೆಟ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಗ್ರಾಮಾಂತರ ಪ್ರದೇಶಗಳ ಆಟಗಾರರಿಂದಾಗಿಯೇ ಕ್ರಿಕೆಟ್ ಬೆಳೆದಿದೆ. ಈಗಲೂ ಸಹ ಪ್ರತಿಭೆಗಳಿರುವುದು ಇಲ್ಲಿಯೇ. ಅವರಿಗೆ ಸೂಕ್ತ ಮೂಲ ಸೌಲಭ್ಯ ಮತ್ತು ತರಬೇತಿ ಸೌಕರ್ಯ ನೀಡುವ ಕಾರ್ಯ ಆರಂಭಿಸಲಾಗಿದೆ.ಮೊದಲ ಹಂತದಲ್ಲಿ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ಎರಡನೇ ಹಂತದಲ್ಲಿ ರಾಯಚೂರು ಮತ್ತು ಮಂಗಳೂರಿನಲ್ಲಿ ಅಕಾಡೆಮಿ ಆರಂಭವಾಗಲಿವೆ.`ಅಕಾಡೆಮಿ ಸ್ಥಾಪನೆಯಾಗುವುದರಿಂದ ಬೆಂಗಳೂರಿನಿಂದ ಅನುಭವಿ ತರಬೇತುದಾರರು ಬಂದು ತರಬೇತಿ ನೀಡುತ್ತಾರೆ.

 

ಕಳೆದ ವರ್ಷ ಶಾಲಾಮಟ್ಟದ ಟೂರ್ನಿಗೆ ಚಾಲನೆ ನೀಡಿದ್ದೇವೆ.  ಜೊತೆಗೆ 2011ರಲ್ಲಿ ಮೈಸೂರಿನಲ್ಲಿ ವಿನೂ ಮಂಕಡ್ ಟ್ರೋಫಿ, ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಗಳನ್ನು ನಡೆಸುವ ಅವಕಾಶವೂ ಸಿಕ್ಕಿತ್ತು. ಅಕಾಡೆಮಿ ಆರಂಭವಾಗುವುದರಿಂದ ಉತ್ತಮ ತರಬೇತಿ ಸೌಕರ್ಯ ಮತ್ತು ಅಂತರ ಅಕಾಡೆಮಿ ಟೂರ್ನಿಗಳನ್ನು ಆಯೋಜಿಸಲು ಸಹಕಾರಿಯಾಗುತ್ತದೆ~ ಎಂದು ಮೈಸೂರು ವಲಯ ನಿಮಂತ್ರಕ ವಿಜಯಪ್ರಕಾಶ್ ಹೇಳುತ್ತಾರೆ.ಮೈಸೂರಿನಲ್ಲಿ  ಗಂಗೋತ್ರಿ ಗ್ಲೇಡ್ಸ್, ರಿಸರ್ವ್ ಬ್ಯಾಂಕಿನ ನೋಟು ಮುದ್ರಣ ಸಂಸ್ಥೆ ಮೈದಾನ, ಜೆಸಿ ಎಂಜಿನಿಯರಿಂಗ್ ಕಾಲೇಜು ಮೈದಾನಗಳಲ್ಲಿ ಕೆಎಸ್‌ಸಿಎ ಟರ್ಫ್ ವಿಕೆಟ್‌ಗಳನ್ನು ಸಿದ್ಧಗೊಳಿಸಿದೆ. ಇದರೊಂದಿಗೆ ಮಂಡ್ಯದ ಪಿಇಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿಯೂ ಟರ್ಫ್ ವಿಕೆಟ್ ಆಗಿದೆ.ಮಹಾರಾಜ ಕಾಲೇಜು ಮೈದಾನ ಮತ್ತು ಮಾನಸಗಂಗೋತ್ರಿಯಲ್ಲಿ ಎರಡು ಮ್ಯಾಟಿಂಗ್ ವಿಕೆಟ್‌ಗಳಿರುವ ಮೈದಾನಗಳು ಕೆಎಸ್‌ಸಿಎ ನಿರ್ವಹಣೆಯಲ್ಲಿವೆ.

ಕಳೆದ ವರ್ಷ ಮೈಸೂರು ವಿಶ್ವವಿದ್ಯಾಲಯದೊಂದಿಗೆ ಮಾಡಿಕೊಂಡ ಒಡಂಬಡಿಕೆ ಪ್ರಕಾರ ಗಂಗೊತ್ರಿ ಗ್ಲೇಡ್ಸ್ ಮೈದಾನದಲ್ಲಿ ಅಕಾಡೆಮಿ ಸ್ಥಾಪನೆಗಾಗಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಒಂದು ಕಾಂಕ್ರಿಟ್ ಪಿಚ್ ಸೇರಿದಂತೆ ಒಟ್ಟು ಎಂಟು ಪ್ರಾಕ್ಟಿಸ್ ಪಿಚ್‌ಗಳು ಸಿದ್ಧವಾಗುತ್ತಿವೆ.  ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಅವರು ಓದಿರುವ ಜೆಸಿ ಎಂಜಿನಿಯರಿಂಗ್ ಕಾಲೇಜಿನ ಮೈದಾನದ ಕಾಮಗಾರಿ ಅಂತಿಮ ಘಟ್ಟದಲ್ಲಿದೆ.

ಧಾರವಾಡ ವಲಯದಲ್ಲಿಯೂ ಕ್ರೀಡಾಂಗಣ ಅಭಿವೃದ್ಧಿಯ ಕೆಲಸ ಆರಂಭವಾಗಿದೆ. ದಶಕದ ಹಿಂದಿನಿಂದಲೂ ಕನಸಾಗಿಯೇ ಉಳಿದಿದ್ದ ಹುಬ್ಬಳ್ಳಿಯ ರಾಜನಗರದ ಮೈದಾನ ಮತ್ತು ಬೆಳಗಾವಿಯ ಮೈದಾನದ ಕಾಮಗಾರಿ ಪ್ರಗತಿಯಲ್ಲಿದೆ.`ರಾಜನಗರದ ಮೈದಾನದಲ್ಲಿ ಪಿಚ್‌ಗಳ ನಿರ್ಮಾಣ ಕಾರ್ಯ ಮುಗಿದಿದ್ದು, ಪೆವಿಲಿಯನ್, ಜಿಮ್ನಾಷಿಯಂ ಕಟ್ಟಡಗಳ ನಿರ್ಮಾಣವಾದರೆ ರಣಜಿ ಪಂದ್ಯವನ್ನು ಇಲ್ಲಿ ಆಡಿಸಬಹುದು. ಜೊತೆಗೆ ಹುಬ್ಬಳ್ಳಿಯಲ್ಲಿ ಅಕಾಡೆಮಿಯು ಆರಂಭವಾಗುವುದರಿಂದ ಉತ್ತರ ಕರ್ನಾಟಕದ ಪ್ರತಿಭಾವಂತ ಆಟಗಾರರಿಗೆ ಇಲ್ಲಿಯೇ ಉನ್ನತ ದರ್ಜೆಯ ತರಬೇತಿ ಅವಕಾಶ ಸಿಗುತ್ತದೆ.

 

ಶಾಲೆ, ಕಾಲೇಜುಗಳು ತಮ್ಮ ಇಲಾಖಾ ಟೂರ್ನಿಗಳ ಮೇಲೆ ಹೆಚ್ಚು ಗಮನ ಇಡುತ್ತವೆ. ಇದರಿಂದಾಗಿ ಪ್ರಮುಖ ಹಂತದಲ್ಲಿ ಆಟಗಾರರು ಸಿಗುವುದು ಕಠಿಣ. ಅಕಾಡೆಮಿ ಬಂದ ಮೇಲೆ ಪ್ರತಿಭಾಶೋಧಕ್ಕೆ ಸಹಕಾರಿಯಾಗುತ್ತದೆ~ ಎಂದು ಧಾರವಾಡ ವಲಯ ನಿಮಂತ್ರಕ ಬಾಬಾ ಭೂಸದ್ ಹೇಳುತ್ತಾರೆ.ಮೂರು ದಶಕಗಳ ನಂತರ ರಣಜಿ ಪಂದ್ಯವನ್ನು ಯಶಸ್ವಿಯಾಗಿ ಆಯೋಜಿಸಿರುವ ಶಿವಮೊಗ್ಗ ವಲಯವು ಅಕಾಡೆಮಿ ಆರಂಭಿಸಲು ತುದಿಗಾಲಿನಲ್ಲಿ ನಿಂತಿದೆ. 

ಮೊದಲ ಹಂತದ ಅಕಾಡೆಮಿಗಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಮುಗಿದ ನಂತರ, ಬೆಂಗಳೂರಿನಿಂದ ಹೊರಗೂ ಕ್ರಿಕೆಟ್ ಅನ್ನು ಶ್ರೀಮಂತಗೊಳಿಸುವ ಆಶಾಕಿರಣಗಳಾಗಿ ಈ ಅಕಾಡೆಮಿಗಳು ಕೆಲಸ ಆರಂಭಿಸಲಿವೆ. 

 

ಪ್ರತಿಕ್ರಿಯಿಸಿ (+)