ನಿರೀಕ್ಷೆ ಹುಸಿ: ಬಡ್ಡಿ ಯಥಾಸ್ಥಿತಿ

7
`ಆರ್‌ಬಿಐ' ಮಧ್ಯಂತರ ತ್ರೈಮಾಸಿಕ ಹಣಕಾಸು ಪರಾಮರ್ಶೆ

ನಿರೀಕ್ಷೆ ಹುಸಿ: ಬಡ್ಡಿ ಯಥಾಸ್ಥಿತಿ

Published:
Updated:
ನಿರೀಕ್ಷೆ ಹುಸಿ: ಬಡ್ಡಿ ಯಥಾಸ್ಥಿತಿ

ಮುಂಬೈ(ಪಿಟಿಐ): ದೇಶದ ಉದ್ಯಮ ವಲಯದ ಭಾರಿ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) `ಬಡ್ಡಿ ದರಗಳನ್ನು ಯಥಾಸ್ಥಿತಿ'ಯಲ್ಲಿಯೇ ಮುಂದುವರಿಸಿದೆ.ರಿಯಲ್ ಎಸ್ಟೇಟ್, ಉತ್ಪನ್ನಗಳ ತಯಾರಿಕಾ ವಲಯ, ಬ್ಯಾಂಕ್‌ಗಳು ಸೇರಿದಂತೆ ದೇಶದ ವಿವಿಧ ಉದ್ಯಮ ಕ್ಷೇತ್ರ ಈ ಬಾರಿಯಾದರೂ ಬಡ್ಡಿದರ ತಗ್ಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದವು.`ಹಣದುಬ್ಬರದ ಒತ್ತಡ ತುಸು ಹೆಚ್ಚೇ ಇರುವುದರಿಂದಾಗಿ ಬಡ್ಡಿದರಗಳನ್ನು ಸದ್ಯಕ್ಕೆ ಇಳಿಸಲು ಸಾಧ್ಯವಿಲ್ಲ' ಎಂದು `ಆರ್‌ಬಿಐ' ಗವರ್ನರ್ ಡಿ.ಸುಬ್ಬರಾವ್ ಮಂಗಳವಾರ ಇಲ್ಲಿ ಹೇಳಿದ್ದಾರೆ.`ನಿರಾಶರಾಗಬೇಕಿಲ್ಲ, ಜನವರಿ ವೇಳೆಗೆ ಬಡ್ಡಿ ಪ್ರಮಾಣದಲ್ಲಿ ಇಳಿಕೆ ಮಾಡಲಾಗುವುದು' ಎಂಬ ಸುಳಿವನ್ನೂ ಅವರು ಮಂಗಳವಾರ ಮಧ್ಯಾವಧಿ ತ್ರೈಮಾಸಿಕ ಹಣಕಾಸು ಪರಾಮರ್ಶೆ ಪ್ರಕಟಣೆ ವೇಳೆ ನೀಡಿದ್ದಾರೆ. ಆ ಮೂಲಕ ಉದ್ಯಮಿಗಳು ಒಂದು ತಿಂಗಳ ಕಾಲ ಮತ್ತೆ ಉಸಿರು ಬಿಗಿಹಿಡಿದು ಕಾಯುವಂತೆ ಮಾಡಿದ್ದಾರೆ. ಮುಂದಿನ ಜನವರಿ 29ಕ್ಕೆ ಆರ್‌ಬಿಐನ  `3ನೇ ತ್ರೈಮಾಸಿಕ ಪರಾಮರ್ಶೆ' ಪ್ರಕಟವಾಗಲಿದೆ.ಉದ್ಯಮ ಮಿಶ್ರ ಪ್ರತಿಕ್ರಿಯೆ

`ಭಾರತ, ಆರ್‌ಬಿಐ ಎಂಬ ಸ್ವತಂತ್ರ ಹಣಕಾಸು ನೀತಿ ನಿರ್ವಹಣಾ ಸಂಸ್ಥೆಯನ್ನು ಹೊಂದಿದೆ. ಆ ಸಂಸ್ಥೆ ನನ್ನ ಮಾತನ್ನಾಗಲೀ, ಹಣಕಾಸು ಸಚಿವರ ಮಾತನ್ನಾಗಲೀ ಕೇಳುವುದಿಲ್ಲ. ಇದು ಧನಾತ್ಮಕ ಅಂಶವೇ ಆಗಿದೆ' ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ ಶರ್ಮಾ ಪ್ರತಿಕ್ರಿಯಿಸಿದ್ದಾರೆ.`ಒಂದೆಡೆ ನಾವು(ಸರ್ಕಾರ) ಹೂಡಿಕೆದಾರರಲ್ಲಿನ ಆತ್ಮವಿಶ್ವಾಸ  ಮತ್ತು ನೈತಿಕ ಶಕ್ತಿ ಹೆಚ್ಚಿಸುವಂತಹ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಇನ್ನೊಂದೆಡೆ ಆರ್‌ಬಿಐನದು ಬೇರೆಯದೇ ನಿಲುವು. ಅದು ತುಸು ಕಡಿಮೆ ಸಂಪ್ರದಾಯವಾದಿಯಾಗಿದೆ' ಎಂದು ಸಚಿವರು ವ್ಯಾಖ್ಯಾನಿಸಿದ್ದಾರೆ.`ಮುಂದಿನ ಕೆಲವು ದಿನಗಳಲ್ಲಿ ಬಡ್ಡಿ ದರ ಕಡಿತಕ್ಕೆ ಅವಕಾಶವಿದೆ ಎಂದು ಆರ್‌ಬಿಐ ಸುಳಿವು ನೀಡಿರುವುದು ಆಶಾದಾಯಕ. ಜನವರಿಯಲ್ಲಿ ಒಳ್ಳೆಯ ಸುದ್ದಿ ನಿರೀಕ್ಷಿಸಬಹುದಾಗಿದೆ' ಎಂದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ರಘುರಾಂ ರಾಜನ್.`ಫಿಕ್ಕಿ' ಅಸಮಾಧಾನ

ಆದರೆ, `ಭಾರತೀಯ ವಾಣಿಜ್ಯ-ಉದ್ಯಮ ಸಂಘಟನೆಗಳ ಒಕ್ಕೂಟ'(ಫಿಕ್ಕಿ) `ಆರ್‌ಬಿಐ ನಿಲವು ನಿರಾಶಾದಾಯಕ' ಎಂದಿದೆ. `ದೇಶದಲ್ಲಿನ ವಿವಿಧ ಉದ್ಯಮಗಳು ಹೆಚ್ಚಿನ ಹೂಡಿಕೆ ಮತ್ತು ಅಭಿವೃದ್ಧಿಯ ಕನಸು ಕಾಣುತ್ತಿವೆ. ಆರ್‌ಬಿಐ, ಬಡ್ಡಿದರ ಕಡಿತಗೊಳಿಸಿ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕಿತ್ತು. ಉದ್ಯಮ ವಲಯ ಕನಸು ನನಸಾಗಿಸಿಕೊಳ್ಳಲು ಶಕ್ತಿ ತುಂಬಬೇಕಿದ್ದಿತು. ಆದರೆ, ಹಾಗಾಗಲೇ ಇಲ್ಲ' ಎಂದು `ಫಿಕ್ಕಿ' ನೂತನ ಅಧ್ಯಕ್ಷೆ ನೈನಾಲಾಲ್ ಕಿದ್ವಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಲಾಭ ಗ್ರಾಹಕರಿಗೆ

ಮುಂದಿನ ತಿಂಗಳು ಬಡ್ಡಿದರ ತಗ್ಗಿಸುವ ವಚನವನ್ನು `ಆರ್‌ಬಿಐ' ಕಾಯ್ದುಕೊಂಡರೆ ಅದರ ಪ್ರತಿಫಲವನ್ನು ಬಂದ ರೀತಿಯಲ್ಲಿಯೇ ಗ್ರಾಹಕರಿಗೆ ದಾಟಿಸುತ್ತೇವೆ ಎಂದು ಬ್ಯಾಂಕ್‌ಗಳು ಪ್ರತಿಕ್ರಿಯಿಸಿವೆ.`ಸದ್ಯಕ್ಕೆ ಯಾವುದೇ ಬ್ಯಾಂಕ್ ಠೇವಣಿ ಅಥವಾ ಸಾಲದ ಬಡ್ಡಿದರದಲ್ಲಿ ಏರಿಳಿತ ಮಾಡಲು ಹೋಗುವುದಿಲ್ಲ. ಅಂತಹ ಕ್ರಮವೇನಿದ್ದರೂ ಆರ್‌ಬಿಐನ ಮುಂದಿನ ತಿಂಗಳ ನಡೆ ಅವಲಂಬಿಸಿದೆ' ಎಂದು ಓರಿಯಂಟಲ್ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಬನ್ಸಲ್ ಹೇಳಿದ್ದಾರೆ.ಆರ್ಥಿಕ ಪ್ರಗತಿಗೆ ಆದ್ಯತೆ: ಸುಬ್ಬರಾವ್

`ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯತ್ತ ಹೆಚ್ಚು ಗಮನ ಕೇಂದ್ರೀಕರಿಸಬೇಕಿದೆ. ಆ ನಿಟ್ಟಿನಲ್ಲಿ ಹಣಕಾಸು ನಿರ್ವಹಣೆ ನೀತಿಯನ್ನೂ ಸಮರ್ಪಕವಾಗಿ ರೂಪಿಸಬೇಕಿದೆ. ಅಲ್ಲದೆ, ಸದ್ಯ ಹಣದುಬ್ಬರ ಅಷ್ಟೇನೂ ಹಿತಕರವಾಗಿಲ್ಲದ ಕಾರಣದಿಂದಾಗಿ ಬಡ್ಡಿದರದಲ್ಲಿ ಈಗಂತೂ ಕಡಿತ ಸಾಧ್ಯವೇ ಇಲ್ಲ' ಎಂದು ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.

ಹಾಗಾಗಿ, ಆರ್‌ಬಿಐ ಅಲ್ಪಾವಧಿ ಸಾಲದ(ರೆಪೊ) ಬಡ್ಡಿದರ ಮತ್ತು ಬ್ಯಾಂಕ್‌ಗಳಲ್ಲಿನ ನಗದು ಮೀಸಲು ಅನುಪಾತದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎರಡೂ ಈ ಮೊದಲಿ ನಂತೆ ಕ್ರಮವಾಗಿ ಶೇ 8 ಮತ್ತು ಶೇ 4.25ರ ಪ್ರಮಾಣದಲ್ಲಿಯೇ ಮುಂದುವರಿದಿವೆ. ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಪ್ರಗತಿಗತಿ ಮತ್ತು ಹಣದುಬ್ಬರ ಪರಿಸ್ಥಿತಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿರುವ `ಆರ್‌ಬಿಐ', 2013ರ ಜನವರಿ- ಮಾರ್ಚ್ ತ್ರೈಮಾಸಿಕಕ್ಕೆ ಹಿತಕರವಾದ ಹಣಕಾಸು ನೀತಿ ನಿರೀಕ್ಷಿಸಬಹುದಾಗಿದೆ ಎಂಬ ಭರವಸೆಯ ಮಾತು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry