ನಿರೀಕ್ಷೆ 3 ಸಾವಿರ, ನೀಡಿದ್ದು 28 ಜನ ಮಾತ್ರ

7
ಠುಸ್ಸಾದ ಸಾಮೂಹಿಕ ರಾಜೀನಾಮೆ

ನಿರೀಕ್ಷೆ 3 ಸಾವಿರ, ನೀಡಿದ್ದು 28 ಜನ ಮಾತ್ರ

Published:
Updated:

ಹಾವೇರಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿ ಕೆಜೆಪಿ ಸದಸ್ಯತ್ವ ಪಡೆಯಬೇಕಿದ್ದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸುಮಾರು ಮೂರು ಸಾವಿರ ಜನಪ್ರತಿನಿಧಿಗಳಲ್ಲಿ ರಾಜೀನಾಮೆ ಸಲ್ಲಿಸಿದವರು ಕೇವಲ 28 ಜನಪ್ರತಿನಿಧಿಗಳು ಮಾತ್ರ.ಹೌದು, ಮಂಗಳವಾರ ನಗರದಲ್ಲಿ ನಡೆದ ಸಾಮೂಹಿಕ ರಾಜೀನಾಮೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾಜೀನಾಮೆ ಕೊಡಿಸಿ ಬಿಜೆಪಿಗೆ ಶಾಕ್ ನೀಡುವುದರ ಜತೆಗೆ ಕೆಜೆಪಿಗೆ ದೊಡ್ಡದಾದ ಆರಂಭ ದೊರಕಿಸಿಕೊಡಬೇಕೆಂದು ಬಯಸಿದ್ದರು.ಆದರೆ, ಜಿಲ್ಲೆಯ ಮುಖಂಡರ ನಿರೀಕ್ಷೆಯಂತೆ ಎಲ್ಲ ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ರಾಜೀನಾಮೆ ನೀಡಲು ಮುಂದೆ ಬರಲಿಲ್ಲ. ಹಾವೇರಿ ತಾಲ್ಲೂಕು ಹೊರತು ಪಡಿಸಿ ಜಿಲ್ಲೆಯ ಉಳಿದ ತಾಲ್ಲೂಕುಗಳ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಲಿರಲಿಲ್ಲ. ಯಾವ ಕಾರಣಕ್ಕಾಗಿ ರಾಜೀನಾಮೆಗೆ ಹಿಂದೇಟು ಹಾಕಿದ್ದಾರೆ ಎಂಬ ಪ್ರಶ್ನೆಗೆ, ರಾಜೀನಾಮೆ ನೀಡು ಎಂದು ಹೇಳುವವರೆ ರಾಜೀನಾಮೆ ನೀಡಿಲ್ಲ.ನಾವೇಕೆ ರಾಜೀನಾಮೆ ನೀಡಬೇಕೆಂದು ಬಹಳಷ್ಟು ಜನರು ರಾಜೀನಾಮೆ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಮುಖಂಡರೊಬ್ಬರು ತಿಳಿಸಿದರು. ಜಿಲ್ಲಾ ಕೆಜೆಪಿ ಸಭೆಯಲ್ಲಿ ಜಿ.ಪಂ., ತಾ.ಪಂ. ನಗರಸಭೆ, ಪುರಸಭೆ, ಗ್ರಾ.ಪಂ. ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಸುಮಾರು ಮೂರು ಸಾವಿರ ಜನಪ್ರತಿನಿಧಿಗಳು ರಾಜೀನಾಮೆ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ತಿಳಿಸಿದ್ದರು.ಆದರೆ, ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹಾವೇರಿ ತಾ.ಪಂ.ನ 19 ಜನ ಸದಸ್ಯರು, ತಾಲ್ಲೂಕು ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಮೂವರು ಹಾಗೂ ಎಪಿಎಂಸಿಯ ಏಳು ಜನ ಸದಸ್ಯರು ಮಾತ್ರ ರಾಜೀನಾಮೆ ಸಲ್ಲಿಸಿರುವ ದಾಖಲೆಯನ್ನು ಕೆಜೆಪಿ ಮುಖಂಡರೇ ಮಾಧ್ಯಮದವರಿಗೆ ನೀಡಿದ್ದಾರೆ.ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನರ ಹಾಗೂ ಶಾಸಕ ನೆಹರೂ ಓಲೇಕಾರ ಮಾತನಾಡಿ, ಮಂಗಳವಾರ ಮೂರು ಸಾವಿರಕ್ಕೂ ಹೆಚ್ಚು ಜನಪ್ರತಿನಿಧಿಗಳು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ, ಸಮಯದ ಅಭಾವ ಹಾಗೂ ಸ್ಥಳದ ಕೊರತೆಯಿಂದ ಆಯಾ ತಾಲ್ಲೂಕು ಘಟಕಗಳು ಆಯಾ ತಾಲ್ಲೂಕು ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.ಹಾವೇರಿ ನಗರಸಭೆಯ ಕೆಲ ಸದಸ್ಯರು ಉತ್ತರ ಭಾರತ ಪ್ರವಾಸ ಹೋಗ್ದ್ದಿದಾರೆ. ಅವರು ಬಂದ ನಂತರ ಜಿ.ಪಂ, ಗ್ರಾ.ಪಂ. ಸದಸ್ಯರ ಜತೆಗೂಡಿ ಇನ್ನೆರಡು ದಿನಗಳಲ್ಲಿ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಸಮಜಾವಯಿಸಿ ನೀಡಿದರು.ಯಡಿಯೂರಪ್ಪ ಪ್ರವಾಸ ದೀಡಿರ್ ರದ್ದು

ಹಾವೇರಿ:
ಡಿ. 9ರಂದು ನಗರದಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶದ ಪೂರ್ವಭಾವಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡಿ. 5ರಿಂದ 8ರವರೆಗೆ ಜಿಲ್ಲೆಯಲ್ಲಿ ಕೈಗೊಳ್ಳಬೇಕಿದ್ದ ಪ್ರವಾಸವನ್ನು ದೀಡಿರ್ ರದ್ದುಗೊಳಿಸಿದ್ದಾರೆ.

ಡಿ. 5ರಿಂದ 8 ವರೆಗೆ ಜಿಲ್ಲೆಯ ಏಳು ತಾಲ್ಲೂಕುಗಳ ಹೋಬಳಿ ಹಾಗೂ ಪ್ರಮುಖ ಗ್ರಾಮಗಳನ್ನು ಸಂದರ್ಶಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಮಾವೇಶಕ್ಕೆ ಆಹ್ವಾನ ಮಾಡುವುದಾಗಿ ಸ್ವತಃ ಯಡಿಯೂರಪ್ಪ ಅವರೇ ತಿಳಿಸ್ದ್ದಿದರು.ಆದರೆ, ಸೋಮವಾರದವರೆಗೆ ಜಿಲ್ಲೆಯ ಪ್ರವಾಸ ಮಾಡುವ ಬಗ್ಗೆ ಹೇಳುತ್ತಿದ್ದ ಜಿಲ್ಲೆಯ ಕೆಜೆಪಿ ಮುಖಂಡರು, ಈಗ ಇದ್ದಕ್ಕಿಂತೆ ಪ್ರವಾಸ ರದ್ದುಗೊಂಡಿದೆ ಎಂದು ಹೇಳುತ್ತಿದ್ದಾರೆ. ಆದರೆ, ಪ್ರವಾಸ ರದ್ಧತಿಗೆ ಕಾರಣ ಗೊತ್ತಾಗಿಲ್ಲ. ಅದು ಅಲ್ಲದೇ ಜಿಲ್ಲೆಯೇ ಸಮಾವೇಶದ ಆತಿಥ್ಯ ವಹಿಸಿಕೊಂಡಿರುವುದರಿಂದ ಸಹಜವಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ಜಿಲ್ಲೆಯಲ್ಲಿ ಮಾಡುವ ಪ್ರವಾಸವನ್ನು ಬೇರೆ ಜಿಲ್ಲೆಗಳಲ್ಲಿ ಮಾಡಿದರೆ, ಪಕ್ಷದ ಪ್ರಚಾರದ ಜತೆಗೆ ಹೆಚ್ಚಿನ ಜನರನ್ನು ಸಮಾವೇಶಕ್ಕೆ ಆಹ್ವಾನಿಸಲು ಸಾಧ್ಯವಾಗುತ್ತದೆ ಎನ್ನುವ ಉದ್ದೇಶ ಇಟ್ಟುಕೊಂಡು ಜಿಲ್ಲೆಯ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ಸ್ಥಳೀಯ ಶಾಸಕ ನೆಹರು ಓಲೇಕಾರ ಹಾಗೂ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ತಿಳಿಸಿದ್ದಾರೆ. ಯಡಿಯೂರಪ್ಪ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ನಂತರ ಉಳಿಯುವ ಸಮಯವನ್ನು ಜಿಲ್ಲೆಯ ಪ್ರವಾಸಕ್ಕೆ ಮೀಸಲಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry