`ನಿರುದ್ಯೋಗಿಗಳಿಗೆ ಖಾಸಗಿ ಸಂಸ್ಥೆಯಿಂದ ಮೋಸ'

ಗುರುವಾರ , ಜೂಲೈ 18, 2019
22 °C

`ನಿರುದ್ಯೋಗಿಗಳಿಗೆ ಖಾಸಗಿ ಸಂಸ್ಥೆಯಿಂದ ಮೋಸ'

Published:
Updated:

ಹರಪನಹಳ್ಳಿ:  ಅರ್ಹತೆಗೆ ತಕ್ಕ ಹುದ್ದೆ ಹಾಗೂ ಆಕರ್ಷಕ ವೇತನ ನೀಡುವ ಆಮಿಷ ಒಡ್ಡಿ ನಿರುದ್ಯೋಗಿಗಳಿಗೆ ಪಂಗನಾಮ ಹಾಕಲು ಹೊರಟಿದ್ದ ಸ್ಥಳೀಯ ಸಂಸ್ಥೆಯೊಂದರ ಅವ್ಯವಹಾರವನ್ನು ಸಂದರ್ಶನಕ್ಕೆ ಹಾಜರಾಗಿದ್ದ ಅಭ್ಯರ್ಥಿಗಳೇ ಬಟಾಬಯಲು ಮಾಡಿದ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ.ಪಟ್ಟಣದ ಹಿಪ್ಪಿತೋಟದ ಬಾಡಿಗೆ ಮನೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ `ಸ್ಫೂರ್ತಿ ಗ್ರೂಪ್ಸ್' ಅರ್ಹತೆಗೆ ತಕ್ಕಂತೆ ಹುದ್ದೆ ಹಾಗೂ ಆಕರ್ಷಕ ವೇತನ ನೀಡುತ್ತದೆ ಎಂದು ಪ್ರಕಟಣೆ ನೀಡಿದ್ದು, ಭಾನುವಾರ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲು ಬಂದ ಅಭ್ಯರ್ಥಿಗಳು ಸಂಸ್ಥೆ ನೀಡುವ ಅಸಲಿ ಉದ್ಯೋಗ ನೋಡಿ ಆಕ್ರೋಶ ವ್ಯಕ್ತಪಡಿಸಿದರು.ಆಂಧ್ರಪ್ರದೇಶದ ಆದೋನಿ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪದವೀಧರ ನಿರುದ್ಯೋಗಿ ಯುವಕರು ಸಂದರ್ಶನಕ್ಕೆ ಹಾಜರಾಗಿದ್ದರು.`ಮಾಸಿಕ ರೂ.20ಸಾವಿರದವರೆಗೆ ಸಂಬಳ, ಅರ್ಹತೆ ತಕ್ಕ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದ್ದರು. ಆದರೆ, ಈಗ ಸಂದರ್ಶನಕ್ಕೆ ಬಂದಿದ್ದೇವೆ. ಇಲ್ಲಿ ನೋಡಿದರೆ, ಸೋಪ್, ವಾಶಿಂಗ್ ಪೌಡರ್, ಕ್ರೀಮ್‌ನಂಥ ಉತ್ಪನ್ನಗಳ ಮಾರಾಟ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಎಂಬಿಎ ಹಾಗೂ ಎಂಕಾಂ ಪದವೀಧರ ಅಭ್ಯರ್ಥಿಗಳಾದ ನಾಗರಾಜ, ನವೀನ್, ಅಬ್ದುಲ್ ರಫಿ ಹಾಗೂ ವಾಹಬ್ ಆಕ್ರೋಶ ವ್ಯಕ್ತಪಡಿಸಿದರು.ಸಂದರ್ಶನಕ್ಕೆ ಹಾಜರಾಗುವ ಪೂರ್ವದಲ್ಲಿಯೇ ನಮಗೆ ಸಂದೇಹ ಬರುವಂತೆ ಸಂಸ್ಥೆಯ ಸಿಬ್ಬಂದಿ ನಮ್ಮ ಜತೆ ನಡೆದುಕೊಂಡರು. ಅಧಿಕೃತ ವಿಳಾಸ ಕೊಡಿ ಎಂದರೆ, ನೀವು ಹರಪನಹಳ್ಳಿಯಲ್ಲಿ ಬಸ್ ಇಳಿದ ತಕ್ಷಣ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಆಟೋ ಚಾಲಕರ ಕೈಗೆ ಕೊಡಿ, ನಾವೇ ಅವರಿಗೆ ವಿಳಾಸ ತಿಳಿಸುತ್ತೇವೆ ಎಂದಿದ್ದರು. ಆಗಲೇ ನಮಗೆ ಅನುಮಾನ ಕಾಡಿತು. ಆದರೂ, ಒಳ್ಳೆಯ ಹುದ್ದೆ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ಸಂದರ್ಶನಕ್ಕೆ ಹಾಜರಾದರೆ, ಈಗ ನಮ್ಮ ಸಂದೇಹ ನಿಜವಾಗಿದೆ ಎಂದು ಅಭ್ಯರ್ಥಿಗಳು ದೂರಿದರು.ಸಂದರ್ಶನಕ್ಕೆ ಹಾಜರಾದ ನಿರುದ್ಯೋಗಿ ಅಭ್ಯರ್ಥಿಗಳು ಹಾಗೂ ಸಂಸ್ಥೆ ಸಿಬ್ಬಂದಿಯ ಮಾತಿನ ಚಕಮಕಿ, ವಿವಾದ ಸದ್ಯ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry