ನಿರುಪಯುಕ್ತ ಹೊಸ ಮಾರುಕಟ್ಟೆ!

7

ನಿರುಪಯುಕ್ತ ಹೊಸ ಮಾರುಕಟ್ಟೆ!

Published:
Updated:

ಗುಲ್ಬರ್ಗ: ಜಿಲ್ಲೆಯ ರೈತರಿಗೆ, ಜನರಿಗೆ ಹಾಗೂ ಸಗಟು ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ನಗರದ ಹೊರವಲಯದ ತಾಜಸುಲ್ತಾನಪುರ ಬಳಿ ನಿರ್ಮಿಸಿದ ಹಣ್ಣು ಹಾಗೂ ತರಕಾರಿ ಮಾರುಕಟ್ಟೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದಿದೆ. ಇದೀಗ ಬಳಕೆಗೆ ತೆರೆದುಕೊಳ್ಳದೆ ಇರುವುದರಿಂದ ಹೊಸ ಮಾರುಕಟ್ಟೆ ಮುಂದಿನ ದಿನದಲ್ಲಿ ಹಳೆಯದಾಗಿ ಮಾರ್ಪಡುತ್ತದೆ.

ಮಾರುಕಟ್ಟೆ ಉದ್ಘಾಟನೆಗೆ ಅಡ್ಡಿಯಾಗಿರುವ ಅಂಶಗಳನ್ನು ಆದಷ್ಟು ಶೀಘ್ರ ಪರಿಹರಿಸುವ ಅಗತ್ಯವಿದೆ.ಹೊಸದಾಗಿ ನಿರ್ಮಿಸಲಾದ `ಹಣ್ಣು ಹಾಗೂ ತರಕಾರಿ ಮಾರುಕಟ್ಟೆ' ಅತ್ಯಾಧುನಿಕ ಸವಲತ್ತು ಹೊಂದಿದೆ. ರಿಂಗ್ ರಸ್ತೆಯಿಂದ ಕೇವಲ ಇನ್ನೂರು ಮೀಟರ್ ದೂರದಲ್ಲಿರುವ ಈ ಮಾರುಕಟ್ಟೆ ಸಗಟು ವಹಿವಾಟುದಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ಒಳಗೊಂಡಿದೆ. ರೈತರು ತಮ್ಮ ಉತ್ಪನ್ನಗಳನ್ನು ದೂರದ ಮುಂಬೈ, ಲಾತೂರ್, ದೆಹಲಿಗೆ ತೆಗೆದುಕೊಂಡು ಹೋಗುವ ಬದಲು ವಿವಿಧ ಪ್ರದೇಶದ ಸಗಟು ವ್ಯಾಪಾರಸ್ಥರನ್ನು ಇಲ್ಲಿಗೆ ಸೆಳೆಯಬಹುದಾಗಿದೆ.ಈ ಭಾಗದಿಂದ ಒಣ ಮೆಣಸಿನಕಾಯಿ ಹಾಗೂ ಉಳ್ಳಾಗಡ್ಡಿ ಪ್ರಮುಖವಾಗಿ ದೂರದ ಮಾರುಕಟ್ಟೆಗೆ ಹೋಗುತ್ತವೆ. ಈಚೆಗೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗೆ ಉತ್ತೇಜನ ಸಿಗುತ್ತಿರುವುದರಿಂದ ಹಣ್ಣುಗಳ ಉತ್ಪಾದನೆಯೂ ಹೇರಳವಾಗಿದೆ. ಮುಂಬೈ, ದೆಹಲಿಯಂತಹ ಮಹಾನಗರದಲ್ಲಿ ಇವುಗಳಿಗೆ ಬೇಡಿಕೆ ಇರುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗುವ ಬದಲು ಇಲ್ಲಿಗೆ ಖರೀದಿದಾರರ ಗಮನ ಸೆಳೆಯಲು ನೂತನ ಮಾರುಕಟ್ಟೆಯ ಮೂಲಕ ಪ್ರಯತ್ನಿಸಬಹುದಾಗಿದೆ.ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 19 ಕೋಟಿ ರೂಪಾಯಿ ವೆಚ್ಚದಲ್ಲಿ 14 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ನೂತನ ಮಾರುಕಟ್ಟೆಯಲ್ಲಿ 80 ಮಳಿಗೆ ನಿರ್ಮಿಸಲಾಗಿದೆ. ಕಚೇರಿ ಕಟ್ಟಡ ಮತ್ತು ಹರಾಜು ಕಟ್ಟೆ, ಸಿಸಿ ರಸ್ತೆ, ನೀರಿನ ಟ್ಯಾಂಕ್, ವಿದ್ಯುತ್ ದೀಪಗಳ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒಳಗೊಂಡ ಅಚ್ಚು ಕಟ್ಟಾದ ಮಾರುಕಟ್ಟೆ ನಿರ್ಮಾಣವಾಗಿದೆ. ಪ್ರತಿ ಮಳಿಗೆಗೂ ಶೌಚಾಲಯ ಮತ್ತು ಪ್ರತ್ಯೇಕ ನೀರಿನ     ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.ಗುಲ್ಬರ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆಡಳಿತ ಮಂಡಳಿಯು ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ 2006-07ರಲ್ಲಿ ನಿರ್ಧಾರ ಕೈಗೊಂಡು ಸರ್ಕಾರದ ಅನುಮೋದನೆಗೆ ಕಳುಹಿಸಿತ್ತು. ಸರ್ಕಾರದಿಂದ ಯೋಜನೆಗೆ ಅನುಮತಿ ದೊರಕಿ, 2008ರಲ್ಲಿ ಕಾಮಗಾರಿ ಆರಂಭವಾಯಿತು. ಪ್ರಸ್ತುತ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ಇನ್ನು ಬಳಕೆಗೆ ಲಭ್ಯವಾಗುತ್ತಿಲ್ಲ ಎಂದು ಗ್ರಾಮೀಣ ಭಾಗದ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಒಟ್ಟು 256 ಚದರ ಅಡಿ ವಿಸ್ತೀರ್ಣದ ಮಳಿಗೆಯ ಮೊದಲ ಮಹಡಿಯಲ್ಲಿ ಕಚೇರಿಯೂ ಇದೆ. 775x35 ಅಡಿ (2,625 ಚದರ ಅಡಿ) ಅಳತೆಯ ಹರಾಜುಕಟ್ಟೆ ನಿರ್ಮಾಣವಾಗಿದ್ದು, ಮಳೆ ಹಾಗೂ ಬಿಸಿಲಿನಿಂದ ರಕ್ಷಿಸಲು ಶೀಟ್‌ಗಳನ್ನು ಅಳವಡಿಸಲಾಗಿದೆ.

ಇಲ್ಲಿಗೆ ಆಗಮಿಸುವ ಖರೀದಿದಾರರು ಹಾಗೂ ರೈತರಿಗೆ ದಿನದ 24 ಗಂಟೆ ನೀರಿನ ಪೂರೈಕೆಗೆ ಮೂರು ಬೋರ್‌ವೆಲ್ ಕೊರೆಯಲಾಗಿದೆ. ಒಂದು ಟ್ಯಾಂಕ್, ಎರಡು ತೊಟ್ಟಿಗಳಿವೆ.

ವಿದ್ಯುತ್ ಪೂರೈಕೆಗೆ ಪ್ರತ್ಯೇಕ ಟಿ.ಸಿ. ಅಳವಡಿಸಲಾಗಿದೆ. ಉಳಿದಂತೆ ಆವರಣಪೂರ್ತಿ ಸಿ.ಸಿ. ರಸ್ತೆ, ಒಳಚರಂಡಿ, ಸುಲಭ ಶೌಚಾಲಯ ಕಾಮಗಾರಿ ಪೂರ್ಣಗೊಂಡಿದೆ. ಊಟ-ಉಪಾಹಾರಕ್ಕೆ ಕ್ಯಾಂಟೀನ್ ಸೌಲಭ್ಯವಿದ್ದು, ಸುಂದರ ವಿನ್ಯಾಸದ ಕಟ್ಟಡ ಗಮನ ಸೆಳೆಯುತ್ತಿದೆ. ಮಾರುಕಟ್ಟೆ ಆವರಣ ಒಳಭಾಗದಲ್ಲಿ ನಿವೇಶನಕ್ಕಾಗಿ ಸಾಕಷ್ಟು ವಿಶಾಲ ಜಾಗ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ವ್ಯಾಪಾರಸ್ಥರು ಈ ನಿವೇಶನ ಖರೀದಿಸಿ, ಎಪಿಎಂಸಿ ಅಂಗೀಕರಿಸಿದ ಮಾದರಿಯಲ್ಲಿ ಮಳಿಗೆ ನಿರ್ಮಿಸಿಕೊಳ್ಳಬಹುದು.

ವಹಿವಾಟು ಪರಿಶೀಲಿಸಲು ಇಲ್ಲಿ ನಿಯೋಜಿಸಲಾಗುವ ಎಪಿಎಂಸಿ ಸಿಬ್ಬಂದಿಗೆಂದೇ ಪ್ರತ್ಯೇಕ ಆಡಳಿತ ಕಾರ್ಯಾಲಯ ನಿರ್ಮಿಸಲಾಗಿದೆ. ಹರಾಜು ಪ್ರಕ್ರಿಯೆ ನಡೆಸಲು ದೊಡ್ಡ ಸ್ಥಳಾವಕಾಶ ಕಲ್ಪಿಸಿಕೊಡಲಾಗಿದೆ.`ತರಕಾರಿ ಮಾರ್ಕೆಟ್ ಶುರು ಆಯ್ತಂದ್ರ ಆಳಂದ ರಸ್ತೆ ಕಡೆಗೂ ಅಭಿವೃದ್ಧಿಯಾಗತೈತ್ರಿ. ಸೇಡಂ ಹಾಗೂ ಜೇವರ್ಗಿ ರಸ್ತೆ ಕಡೆಗೆ ಎಲ್ಲ ಅಭಿವೃದ್ಧಿ ಕೆಲಸ ನಡ್ದಾವ್ರಿ.. ಹೀಗಾಂದ್ರ ಹೇಂಗ್ರಿ. ಇತ್ಲಾಕಡೆಗೂ ಒಂದಿಷ್ಟು ಕೆಲಸ ನಡೀಬೇಕ್ರಿ' ಎನ್ನುತ್ತಾರೆ ಕಮಲ ನಗರ ನಿವಾಸಿ ಚೆಂದಪ್ಪ.ಸುಸಜ್ಜಿತವಾಗಿ ನಿರ್ಮಾಣಗೊಂಡ ತರಕಾರಿ ಮಾರುಕಟ್ಟೆ ಜನರ ಗಮನ ಸೆಳೆಯತ್ತಿರುವುದಂತು ನಿಜ. ಆದರೆ ಮಾರುಕಟ್ಟೆ ಯಾವಾಗ ಉದ್ಘಾಟನೆಗೊಳ್ಳುತ್ತದೆ ಎನ್ನುವುದು ಮಾತ್ರ ಅನಿಶ್ಚಿತತೆಯಿಂದ ಕೂಡಿದೆ. ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಶೀಘ್ರ ಮಾರುಕಟ್ಟೆಯನ್ನು ಉದ್ಘಾಟಿಸಿ ಜನರಿಗೆ ಸೇವೆ ಒದಗಿಸ ಬೇಕಿದೆ. `ಹೊಸ ಮಾರುಕಟ್ಟೆ ಕಾರ್ಯಾರಂಭಕ್ಕೆ ಕೋರ್ಟ್ ತಡೆ ನೀಡಿದೆ. ಸದ್ಯ ಪ್ರಕರಣ ಕೋರ್ಟ್ ಕಟ್ಟೆಯಲ್ಲಿದೆ. ಹೀಗಾಗಿ ಈ ಕುರಿತುಏನು ಹೇಳಲು ಇಚ್ಚಿಸುವುದಿಲ್ಲ' ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಚಂದ್ರಮೋಹನ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry