ಶನಿವಾರ, ಫೆಬ್ರವರಿ 27, 2021
28 °C

ನಿರ್ಣಾಯಕವಾದ ಹೆಜ್ಜೆ ಸಮರ್ಪಕವಾಗಿ ಜಾರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ಣಾಯಕವಾದ ಹೆಜ್ಜೆ ಸಮರ್ಪಕವಾಗಿ ಜಾರಿಯಾಗಲಿ

ಭಾರತದ ನಗರಗಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳು ಈವರೆಗೆ  ಸಾಂಕೇತಿಕ ಅಥವಾ ತಾತ್ಕಾಲಿಕ ಕ್ರಮಗಳಾಗಿರುತ್ತಿದ್ದವು.  ರಾಷ್ಟ್ರದ ಅಭಿವೃದ್ಧಿ ಕಥನಕ್ಕೆ ಸ್ಮಾರ್ಟ್ ಸಿಟಿ ಯೋಜನೆ ವೇಗ ಕೊಡುವಂತಾಗಲಿ.ಇಪ್ಪತ್ತು ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸುವುದಾಗಿ ಕೇಂದ್ರ  ಸರ್ಕಾರ ಮೊದಲ ಪಟ್ಟಿಯನ್ನು  ಕಳೆದ ವಾರ ಪ್ರಕಟಿಸಿದೆ. ಇದು  ಈ ದಿಕ್ಕಿನಲ್ಲಿ ಇರಿಸಿದ ನಿರ್ಣಾಯಕ ಹೆಜ್ಜೆ.  ಈ ಪಟ್ಟಿಯಲ್ಲಿ ಕರ್ನಾಟಕದ ದಾವಣಗೆರೆ ಹಾಗೂ ಬೆಳಗಾವಿ ನಗರಗಳೂ ಸೇರಿವೆ.  ಮುಂದಿನ ಐದು ವರ್ಷಗಳಲ್ಲಿ  ₹ 51 ಸಾವಿರ ಕೋಟಿಯಷ್ಟು ಹಣ  ಈ 20 ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಬಳಕೆಯಾಗಲಿದೆ.  ಈಗಾಗಲೇ ಈ ನಗರಗಳಲ್ಲಿ ಅಸ್ತಿತ್ವದಲ್ಲಿರುವ ಸೌಕರ್ಯಗಳ ಅಭಿವೃದ್ಧಿ ಹಾಗೂ ಹೊಸದಾದ ಅಭಿವೃದ್ಧಿ ಯೋಜನೆಗಳ ಮೂಲಕ  26,735 ಎಕರೆಯಷ್ಟು ಜಾಗದಲ್ಲಿ ‘ಸ್ಮಾರ್ಟ್  ನಗರ’ ಯೋಜನೆಗಳಿಗಾಗಿ ಹಣಹೂಡಿಕೆ ಮಾಡಲಾಗುವುದು. ಇದು ಸಮಗ್ರ ನಗರ ಯೋಜನೆಯಾಗಿದ್ದು ಇದರಲ್ಲಿ ಮೂಲಸೌಕರ್ಯ, ಸಾರಿಗೆ, ವಿನ್ಯಾಸ ಹಾಗೂ ವಾಸ್ತುಶಿಲ್ಪಗಳಿಗೆ ಹೆಚ್ಚಿನ ಗಮನ ನೀಡಲಾಗುವುದು.  ಸದ್ಯದ ಸ್ಥಿತಿಯಲ್ಲಿ ನಗರಗಳು ಅನಿಯಂತ್ರಿತವಾಗಿ ಬೆಳೆಯುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಯೋಜನಾಬದ್ಧತೆಯ ಕೊರತೆ ಇಲ್ಲಿ ಎದ್ದು ಕಾಣಿಸುತ್ತದೆ. ಕಟ್ಟಡ ನಿರ್ಮಾಣಗಳಲ್ಲಿ ನಿಯಮಾವಳಿಗಳ ಉಲ್ಲಂಘನೆ ಕಣ್ಣಿಗೆ ರಾಚುತ್ತದೆ.  ಇಂತಹ ಸಂದರ್ಭದಲ್ಲಿ ಸ್ವಚ್ಛ ನೀರು, ಸಮರ್ಪಕ ಚರಂಡಿ ವ್ಯವಸ್ಥೆ,  ಪಾದಚಾರಿಸ್ನೇಹಿ ರಸ್ತೆ  ಒದಗಿಸುವುದೂ ಕಷ್ಟ ಎನಿಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು ಪಾರ್ಕ್‌ಗಳು, ಮನರಂಜನಾ ತಾಣಗಳು, ಬೀದಿ ದೀಪಗಳ ಅವ್ಯವಸ್ಥೆಯನ್ನು  ಕೇಳುವುದೇ ಬೇಡ.ಹೀಗಾಗಿ  ನೀರು, ವಿದ್ಯುತ್, ಸ್ವಚ್ಛತೆ, ಕಸ ನಿರ್ವಹಣೆ, ಸಂಚಾರ, ಸಾರಿಗೆ, ಬಡವರಿಗೆ ವಸತಿ, ನಾಗರಿಕರಿಗೆ ಭದ್ರತೆ, ಆರೋಗ್ಯ, ಶಿಕ್ಷಣ, ಇ– ಆಡಳಿತ, ಸುಸ್ಥಿರ ಅಭಿವೃದ್ಧಿ–  ಇವೆಲ್ಲಾ  ‘ಸ್ಮಾರ್ಟ್ ಸಿಟಿ’ ಒದಗಿಸಬೇಕಾದ ಮೂಲಸೌಕರ್ಯಗಳಲ್ಲಿ ಮುಖ್ಯವಾಗಿರುತ್ತವೆ ಎಂಬುದು ಮಹತ್ವದ್ದು. ನಾಗರಿಕ ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ  ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದರಿಂದ ಸೇವೆಗಳ ಗುಣಮಟ್ಟ ಹೆಚ್ಚಲಿದೆ ಎಂಬ ಆಶಯ ಇದೆ.  ಸಾರ್ವಜನಿಕ ಸಾರಿಗೆಯನ್ನು ಸುಧಾರಣೆಗೊಳಿಸಿದರೆ ಸಾಕು, ಅದರಿಂದ ಸಮಾಜ ಮತ್ತು ಅರ್ಥವ್ಯವಸ್ಥೆಯ ಮೇಲೆ ತತ್‌ಕ್ಷಣವೇ  ಸಕಾರಾತ್ಮಕ ಪರಿಣಾಮವಾಗುತ್ತದೆ   ಎಂಬುದನ್ನು   ಗಮನಿಸಿ ದಲ್ಲಿ ಈ ಯೋಜನೆಯ ಮಹತ್ವವನ್ನು ಅರ್ಥಮಾಡಿ ಕೊಳ್ಳಬಹುದು.ಭಾರತದಲ್ಲಿ ನಗರೀಕರಣ ಪ್ರಕ್ರಿಯೆಯ ಮಟ್ಟ ಶೇ 31ರಷ್ಟಿದೆ. ಚೀನಾದಲ್ಲಿ ಇದು ಶೇ 54, ಬ್ರೆಜಿಲ್‌ನಲ್ಲಿ ಶೇ 90 ಹಾಗೂ ಇತರ ಬಹುತೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ 80ರಷ್ಟಿದೆ. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ನಗರೀಕರಣ ಪ್ರಕ್ರಿಯೆ ನಿಧಾನ ಗತಿಯಲ್ಲಿದೆ ಎಂದೇ ಹೇಳಬೇಕು. ಈಗ ನೀತಿ ನಿರೂಪಣೆಯ ಮೂಲಕವೇ ನಗರೀಕರಣ ಪ್ರಕ್ರಿಯೆಗೆ ಕೇಂದ್ರದ ಎನ್‌ಡಿಎ ಸರ್ಕಾರ ಚಾಲನೆ ನೀಡಿರುವುದು ಮಹತ್ವದ್ದು. ಆ ಮೂಲಕ ನಗರ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಎನ್‌ಡಿಎ ಸರ್ಕಾರ ಒತ್ತು ನೀಡಿದಂತಾಗಿದೆ. ಸ್ಮಾರ್ಟ್ ಸಿಟಿ ಎಂಬುದಕ್ಕೆ ಸಾರ್ವತ್ರಿಕವಾಗಿ ಒಪ್ಪಿತವಾದ ವಿವರಣೆ  ಇಲ್ಲ.ನಗರದಿಂದ ನಗರಕ್ಕೆ, ರಾಷ್ಟ್ರದಿಂದ ರಾಷ್ಟ್ರಕ್ಕೆ  ಈ ಪರಿಕಲ್ಪನೆ ಬದಲಾಗುತ್ತದೆ ಎಂಬುದನ್ನು ಗಮನಿಸಬೇಕು. ಅಭಿವೃದ್ಧಿಯ ಮಟ್ಟ,  ಬದಲಾವಣೆ ಹಾಗೂ ಸುಧಾರಣೆಗಿರುವ ಅವಕಾಶಗಳು, ಸಂಪನ್ಮೂಲಗಳು ಹಾಗೂ ನಿವಾಸಿಗಳ  ಆಶಯಗಳನ್ನು ಇದು ಅವಲಂಬಿಸುತ್ತದೆ. ನಗರ  ಯೋಜನೆಗಳಲ್ಲಿ ನಗರ ನಿವಾಸಿಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರಗಳ ಒಳಗೊಳ್ಳುವಿಕೆಯೂ ಇರಬೇಕಾದುದು ಅಗತ್ಯ. ಈವರೆಗೆ ಭಾರತದ ನಗರಗಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳು ಸಾಂಕೇತಿಕ ಅಥವಾ ತಾತ್ಕಾಲಿಕ ಕ್ರಮಗಳಾಗಿರುತ್ತಿದ್ದವು.ಅನೇಕ ಸರ್ಕಾರಗಳು ನಗರಗಳನ್ನು ಕಡೆಗಣಿಸಿ ಗ್ರಾಮೀಣ ಅಭಿವೃದ್ಧಿಯನ್ನು ಅಭಿವೃದ್ಧಿಯ ಕೇಂದ್ರ ಬಿಂದುವಾಗಿಸಿಕೊಂಡಿದ್ದವು. ಇಂತಹ ಸನ್ನಿವೇಶ ದಲ್ಲಿ ರಾಷ್ಟ್ರದ ಅಭಿವೃದ್ಧಿಯ ದಿಕ್ಕಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಬಹಳಷ್ಟು ಪರಿವರ್ತನೆ ತರಲಿದೆ.  ಕೆಳಗಿನಿಂದ ಮೇಲೆ ಹೋಗುವ ಅಭಿವೃದ್ಧಿಯ ದಾರಿ ಇದು.  ಯೋಜನೆ ಹಾಗೂ ಹಣಹೂಡಿಕೆ ಇಲ್ಲದೆ ನರಳುತ್ತಿರುವ ನಗರಗಳಿಗೆ ಕಾಯಕಲ್ಪ ನೀಡುವಂತಹದ್ದು.  ಹೀಗಾಗಿ ಈ ಯೋಜನೆ ನಗರದ ನಾಗರಿಕರಿಗೆ ಗುಣಮಟ್ಟದ ಬದುಕು ಒದಗಿಸುವಂತಾಗಬೇಕು. ಸುಸಜ್ಜಿತ ನಗರ ಕೇಂದ್ರಗಳು ರಾಷ್ಟ್ರದ ಅಭಿವೃದ್ಧಿ ಕಥನಕ್ಕೆ ವೇಗ ಕೊಡುತ್ತವೆ ಎಂಬುದನ್ನು ಮರೆಯಲಾಗದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.