ನಿರ್ದೇಶನಾಲಯ ಬಲವರ್ಧಿಸಿ

7

ನಿರ್ದೇಶನಾಲಯ ಬಲವರ್ಧಿಸಿ

Published:
Updated:

ಬೆಂಗಳೂರು: `ರಾಜ್ಯದಲ್ಲಿ ಅಂಗವಿಕಲರ ಅಧಿನಿಯಮ ಸಮರ್ಪಕವಾಗಿ ಜಾರಿಯಾಗಲು ರಾಜ್ಯ ಸರ್ಕಾರವು ಅಂಗವಿಕಲರ ಕಲ್ಯಾಣ ನಿರ್ದೇಶನಾಲಯಕ್ಕೆ ಪ್ರತ್ಯೇಕ ಕಾರ್ಯದರ್ಶಿ ಸೇರಿದಂತೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ನಿರ್ದೇಶನಾಲಯವನ್ನು ಬಲವರ್ಧನೆಗೊಳಿಸಬೇಕು~ ಎಂದು ರಾಜ್ಯ ಅಂಗವಿಕಲರ ಅಧಿನಿಯಮ ಆಯುಕ್ತ ಕೆ.ವಿ.ರಾಜಣ್ಣ ಒತ್ತಾಯಿಸಿದರು.ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸೇರಿಹೋಗಿರುವ ಅಂಗವಿಕಲರ ಕಲ್ಯಾಣ ನಿರ್ದೇಶನಾಲಯಕ್ಕೆ ವಾರ್ಷಿಕ ಸುಮಾರು ನೂರು ಕೋಟಿ ರೂ.ಗಳಷ್ಟು ಅನುದಾನ ಲಭ್ಯವಿದೆ. ಆದರೆ ಸಿಬ್ಬಂದಿ ಕೊರತೆಯ ಕಾರಣದಿಂದಾಗಿ ಅನುದಾನದ ಸಮರ್ಪಕ ಬಳಕೆ ಸಾಧ್ಯವಾಗುತ್ತಿಲ್ಲ. ರಾಜ್ಯ ಅಂಗವಿಕಲರ ನಿರ್ದೇಶನಾಲಯಕ್ಕೆ 2004 ರಲ್ಲಿ ಜಂಟಿ ನಿರ್ದೇಶಕರು ಹಾಗೂ ಉಪ ನಿರ್ದೇಶಕರ ಹುದ್ದೆಗಳನ್ನು ಸೃಷ್ಟಿಸಿದ್ದು ಈ ಹುದ್ದೆಗಳಿಗೂ ಸರಿಯಾಗಿ ಅಧಿಕಾರಿಗಳ ನಿಯೋಜನೆ ಆಗುತ್ತಿಲ್ಲ~ ಎಂದರು.`ರಾಜ್ಯದ 26 ಜಿಲ್ಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೇ ಅಂಗವಿಕಲರ ನಿರ್ದೇಶನಾಲಯದ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಇತರೆ ಇಲಾಖೆಗಳ ಅಧಿಕಾರಿಗಳನ್ನು ಅಂಗವಿಕಲರ ಕಲ್ಯಾಣ ನಿರ್ದೇಶನಾಲಯಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಅಂಗವಿಕಲರ ಸಮಸ್ಯೆಗಳ ಬಗ್ಗೆ ಸರಿಯಾದ ತರಬೇತಿ ಇಲ್ಲದ ಈ ಅಧಿಕಾರಿಗಳಿಂದ ಹೆಚ್ಚಿನ ಕೆಲಸ ಸಾಧ್ಯವಾಗುತ್ತಿಲ್ಲ. ಇದರಿಂದ ಅಂಗವಿಕಲರಿಗೆ ತಲುಪಬೇಕಾದ ಸೌಲಭ್ಯಗಳು ತಲುಪುತ್ತಿಲ್ಲ~ ಎಂದು ಅವರು ವಿಷಾದಿಸಿರು.`ಸಚಿವ ಸಂಪುಟ ಅನುಮೋದನೆ ನೀಡಿರುವ 2007 ರ  ರಾಜ್ಯ ಅಂಗವಿಕಲರ ನೀತಿಗೆ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ನೀತಿಯಲ್ಲಿ ಅಂಗವಿಕಲರ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾನತೆಗಾಗಿ ಅನೇಕ ಅಂಶಗಳನ್ನು ರೂಪಿಸಲಾಗಿದೆ. ಸರ್ಕಾರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಬೇಕು~ ಎಂದರು.`ರಾಜ್ಯದಲ್ಲಿ ಸದ್ಯ ಸುಮಾರು 20 ಲಕ್ಷ ಅಂಗವಿಕಲರಿದ್ದಾರೆ. ಆದರೆ ರಾಜ್ಯ ಸರ್ಕಾರ 2001 ರ ಜನಗಣತಿಯ ಪ್ರಕಾರ ಇರುವ 9 ಲಕ್ಷ ಅಂಗವಿಕಲರ ಅಂಕಿಸಂಖ್ಯೆಗಳನ್ನೇ ತೋರಿಸುತ್ತಿದೆ. ಇದರಿಂದ ಅಂಗವಿಕಲರ ಸಮಸ್ಯೆಗಳ ಬಗ್ಗೆ ಗಂಭೀರವಾದ ಚಿಂತನೆ ಸಾಧ್ಯವಾಗುತ್ತಿಲ್ಲ. ಸರ್ಕಾರ 2009 ರ ನಂತರ ಅಂಗವಿಕಲರ ನಿರ್ದೇಶನಾಲಯದ ಕಾರ್ಯದರ್ಶಿ ಮಟ್ಟದ ಸಭೆಯನ್ನೇ ನಡೆಸಿಲ್ಲ. ಈ ಬಾರಿಯ ಬಜೆಟ್‌ಗೆ ಮುನ್ನವೂ ಸರ್ಕಾರ ಅಂಗವಿಕಲರ ಅಧಿನಿಯಮದ ಆಯುಕ್ತರೂ ಸೇರಿದಂತೆ, ನಿರ್ದೇಶನಾಲಯದ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿಲ್ಲ~ ಎಂದು ಅವರು ದೂರಿದರು.`ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಅಂಗವಿಕಲರಿಗೆ ಉದ್ಯೋಗದಲ್ಲಿ ದೊರೆಯಬೇಕಾದ ಮೀಸಲಾತಿಗಳಲ್ಲಿ ವಂಚನೆ ನಡೆಯುತ್ತಿದೆ. ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ 2011-12 ನೇ ಸಾಲಿನ ವಿವಿಧ ಇಲಾಖೆಗಳ ನೇಮಕಾತಿ ಅಧಿಸೂಚನೆಗಳಲ್ಲಿ ಸಹಾಯಕ ವಿದ್ಯುತ್ ಪರಿವೀಕ್ಷಕರ 35 ಹುದ್ದೆಗಳು, ಜಿಲ್ಲಾ ಶಿಕ್ಷಣಾಧಿಕಾರಿಗಳ 20 ಹುದ್ದೆಗಳು, ಪ್ರಥಮ ದರ್ಜೆ ಪರಿವೀಕ್ಷಣಾಧಿಕಾರಿ 35 ಹುದ್ದೆಗಳು, ಸಂರಕ್ಷಣಾಧಿಕಾರಿ 24 ಹುದ್ದೆಗಳು, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ 10 ಹುದ್ದೆಗಳು      ಹಾಗೂ ಪ್ರೂಫ್ ರೀಡರ್ ಒಂದು ಹುದ್ದೆಯ ನೇಮಕಾತಿ ಅಧಿಸೂಚನೆಯಲ್ಲಿ ವೈಜ್ಞಾನಿಕ ಮೀಸಲಾತಿಯನ್ನು ಅಳವಡಿಸಿಕೊಂಡಿಲ್ಲ.ಆದ್ದರಿಂದ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದು ಸರಿಯಾದ ಮೀಸಲಾತಿ ನಿಯಮಗಳಿರುವ  ಮರು ಅಧಿಸೂಚನೆ ಹೊರಡಿಸುವಂತೆ ಆದೇಶಿಸಲಾಗಿದೆ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry