ಬುಧವಾರ, ನವೆಂಬರ್ 13, 2019
25 °C

`ನಿರ್ಭಯವಾಗಿ ಮತ ಚಲಾಯಿಸಿ'

Published:
Updated:

ಹೊಳಲ್ಕೆರೆ: ಮತ ನೀಡುವುದು 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯನ ಹಕ್ಕಾಗಿದ್ದು, ತಮಗೆ ಇಷ್ಟವಾದ ಅಭ್ಯರ್ಥಿಗೆ ನಿರ್ಭಯವಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ ಸಲಹೆ ನೀಡಿದರು.ಪಟ್ಟಣದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಏರ್ಪಡಿಸಿದ್ದ ಮತದಾನದ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಭಾರತೀಯ ಸಂವಿಧಾನ ಪ್ರಪಂಚದಲ್ಲೇ ಅತಿದೊಡ್ಡ ಮತ್ತು ವಿಶಿಷ್ಟ ಸಂವಿಧಾನವಾಗಿದೆ. ಇಲ್ಲಿ ಪ್ರತೀ ನಾಗರಿಕನೂ ಸಮಾನವಾಗಿದ್ದು, ಎಲ್ಲರಿಗೂ ಹಕ್ಕುಗಳನ್ನು ನೀಡಲಾಗಿದೆ. ಇದರಲ್ಲಿ ಮತ ಚಲಾಯಿಸುವುದು ಕೂಡ ಒಂದು ಹಕ್ಕಾಗಿದ್ದು, ತಪ್ಪದೇ ಅದನ್ನು ಚಲಾಯಿಸಬೇಕು ಎಂದರು.ಜಿ.ಪಂ. ಯೋಜನಾ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿಯರು, ಶಿಕ್ಷಕರು ಗ್ರಾಮಗಳಲ್ಲಿ ಜನರಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು ಎಂದರು.ಪಟ್ಟಣದ ಪ್ರಮುಖ ರಸ್ತೆಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.ಆನಂದರಾಜ್, ಬಸವರಾಜ್, ಸಿ.ಜಿ. ಶಿವಣ್ಣ, ಬಿಇಒ ಮಂಜುನಾಥ್, ಶ್ರೀಧರ್, ಎಂಜಿನಿಯರ್ ರೇಣುಕಾಚಾರ್ಯ, ರೆಹಮತ್ ಉಲ್ಲಾ, ಮಲ್ಲನಗೌಡರ್, ನಾಗಚಂಪಾ, ಮಹೇಶ್ವರಯ್ಯ, ಕುಮುದಾ ನಾಯಕ್, ಇಂದಿರಾದೇವಿ ಹಾಜರಿದ್ದರು.ಜಾಗೃತಿ ಆಂದೋಲನ

ಹೊಸದುರ್ಗ:
ಹೊಸದಾಗಿ ಮತಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಮತದಾರರಿಗೆ ಮತದಾನದ ನೀತಿ-ನಿಯಮಗಳ ಬಗ್ಗೆ ಅರಿವು ಮೂಡಿಸುವಂತೆ ಜಿ.ಪಂ. ಯೋಜನಾ ನಿರ್ದೇಶಕ ಲಕ್ಷ್ಮೀನಾರಾಯಣ್ ಕರೆ ನೀಡಿದರು.ಪಟ್ಟಣದ ಶಾದಿಮಹಲ್‌ನಲ್ಲಿ ಶುಕ್ರವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಮತದಾರರ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮತದಾನ ಗೌಪ್ಯವಾಗಿ ನಡೆಯುವ ಕಾರಣ ಪ್ರತಿಯೊಬ್ಬ ಮತದಾರ ನಿರ್ಭಯವಾಗಿ ಮತ ಚಲಾಯಿಸಬಹುದು. ಮತದಾನ ಮಾಡುವುದು ಕರ್ತವ್ಯ ಎಂಬುದನ್ನು ಎಲ್ಲಾ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಈ. ಬಾಲಕೃಷ್ಣಪ್ಪ, ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಪ್ರಸಾದ್, ತಾ.ಪಂ. ಸಹಾಯಕ ನಿರ್ದೇಶಕ ಟಿ. ತಿಪ್ಪೇಸ್ವಾಮಿ, ತಿಮ್ಮಪ್ಪ, ನಂಜೇಗೌಡ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)