ನಿರ್ಭಾಗ್ಯರ ನಾಡಿಗೆ ಬಂದಿದೆ ಬರ...

7
ಬರ ಬದುಕು ಭಾರ

ನಿರ್ಭಾಗ್ಯರ ನಾಡಿಗೆ ಬಂದಿದೆ ಬರ...

Published:
Updated:

ಕೋಲಾರ: `ನಮ್ದು ನಿಜದಲ್ಲೇ ನಿರ್ಭಾಗ್ಯ, ಇನ್ನು ಬರ ಬಂದರೆ ಹೆಂಗೆ? ತಿಂಗ್ಳ ಹಿಂದೆ ರಾಗಿ ಬಿತ್ತಿದ ಮೇಲೆ ಒಂದಿವ್ಸ ಮಳೆ ಬಂತಷ್ಟೆ. ಆಮೇಲೆ ಕಾಣ್‌ಲಿಲ್ಲ. ಪೈರುಗಳು ಒಣಗ್ತಾ ಅವೆ. ಜಾನುವಾರುಗಳಿಗೆ ಮೇವು ಸಿಕ್ತಿಲ್ಲ. ಕೋಲಾರಕ್ಕೆ ಹೋಗಿ ಕೊಂಡು ತರಬೇಕಾಗಿದೆ. ಅದೂ ಸಾಕಾಗುತ್ತಿಲ್ಲ'.-ಗಾದೆ ಮಾತೊಂದನ್ನು ಸೇರಿಸಿಕೊಂಡು ಕೋಲಾರ ತಾಲ್ಲೂಕಿನ ಚಿನ್ನಾಪುರ ಗ್ರಾಮದ ರೈತ ಮಹಿಳೆ ಪ್ರಮೀಳಮ್ಮ ಎಂದಿನ ಬೇಸರದಿಂದ ಹೇಳಿದ ನುಡಿಗಳಿವು.ಕಳೆದ ಐದು ವರ್ಷದಿಂದ ಬರಗಾಲವನ್ನೇ ಅನುಭವಿಸುತ್ತ ಬಂದ ಜಿಲ್ಲೆಯ ಬಹುತೇಕ ರೈತರ ಎದುರಿನ ಸವಾಲಿದು. ಈ ಬಾರಿ ಬಿತ್ತಿದ ಬೆಳೆಯೆಲ್ಲವೂ ನಷ್ಟವಾಗುವ ಸನ್ನಿವೇಶವೂ ಹತ್ತಿರದಲ್ಲಿದೆ. ಸಾವಿರಾರು ಕೆರೆಗಳಿವೆ ಎಂಬ ಜಿಲ್ಲೆಯ ಹೆಮ್ಮೆಯು, ಕ್ಷಾಮ ಡಾಮರದ ಏಟಿಗೆ ಸಿಲುಕಿ ತತ್ತರಿಸುತ್ತಿದೆ. ಮಳೆ, ಕುಡಿಯುವ ನೀರು ಮತ್ತು ಮೇವಿನ ಕೊರತೆ ಜಿಲ್ಲೆಯ ಒಟ್ಟಾರೆ ಕೃಷಿ ವಲಯವನ್ನು ಬಾಧಿಸುತ್ತಿದೆ.

ಈ ಬಾರಿ ಈ ಬಾಧೆ ಇನ್ನೂ ಜಾಸ್ತಿಯಾಗಿದೆ. ಮಳೆ-ಬೆಳೆಯ ಸನ್ನಿವೇಶವು ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆ. `ಧರೆ ಬೀಜಂಗಳ ನುಂಗೆ' ಎಂಬ ಸೋಮೇಶ್ವರ ಶತಕದ ಸಾಲು ನೆನಪಾಗುತ್ತಿದೆ ಎನ್ನುತ್ತಾರೆ ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿಯ ಆರ್.ಚೌಡರೆಡ್ಡಿ.ಜಿಲ್ಲೆಯ ಒಟ್ಟಾರೆ 27 ಹೋಬಳಿಗಳ ಪೈಕಿ 13 ಹೋಬಳಿಗಳಲ್ಲಿ ಸತತ ನಾಲ್ಕು ವಾರ ಮಳೆ ಇಲ್ಲದೆ ತೇವಾಂಶದ ಕೊರತೆಯಿಂದ ಬೆಳೆಗಳು ನೆಲಕಚ್ಚಿವೆ. ಬಂಗಾರಪೇಟೆ ತಾಲ್ಲೂಕಿನ ಎಲ್ಲ 6 ಹೋಬಳಿ, ಕೋಲಾರ ತಾಲ್ಲೂಕಿನ 2, ಮಾಲೂರು ಮತ್ತು ಮುಳಬಾಗಲು ತಾಲ್ಲೂಕಿನ ತಲಾ 1 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 3 ಹೋಬಳಿಗಳಲ್ಲಿ ಮಳೆಯೇ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

ಕುಸಿದ ಭರವಸೆ: ಉಳುಮೆ ಮತ್ತು ಬಿತ್ತನೆ ಕಾಲದಲ್ಲಿ ಬೀಳಬೇಕಾಗಿದ್ದ ಮಳೆಯು ಅಸಮರ್ಪಕವಾದ ಕಾರಣದಿಂದ ಎರಡೂ ಪ್ರಕ್ರಿಯೆಗಳು ವಿಳಂಬವಾದವು. ಮೊಣಕೈ ಉದ್ದದಷ್ಟು ಮೇಲೇಳಬೇಕಾಗಿದ್ದ ರಾಗಿ ಪೈರುಗಳು ಇನ್ನೂ ನೆಲಮಟ್ಟದಲ್ಲೇ ಇವೆ. ನೆಲಗಡಲೆ ಬಲಿಯದೆ ಸೊರಗಿದೆ.ಮಳೆ ಕೊರತೆಯ ಸಮಸ್ಯೆಯು ಜಿಲ್ಲೆಯ ಮುಳಬಾಗಲು, ಶ್ರೀನಿವಾಸಪುರ, ಬಂಗಾರಪೇಟೆಯ ಬಹುಭಾಗದ ರೈತರಿಗೆ ಹೆಚ್ಚು ಸಮಸ್ಯೆಯನ್ನು ತಂದೊಡ್ಡಿದೆ. ಈ ಎರಡೂ ತಾಲ್ಲೂಕುಗಳಲ್ಲಿ ಜಾನುವಾರುಗಳಿಗೆ ಹಸಿರು ಮೇವಿನ ಕೊರತೆಯ ಸಮಸ್ಯೆಯೂ ತೀವ್ರ ಸ್ವರೂಪವನ್ನು ಪಡೆದಿದ್ದು, ಬೆಳೆ ನಷ್ಟದ ಪ್ರಮಾಣವೂ ಹೆಚ್ಚಾಗಿದೆ.ಜಿಲ್ಲೆಯ ಪ್ರಧಾನ ಬೆಳೆಗಳಾದ ರಾಗಿ 15,235 ಹೆಕ್ಟೇರ್ ಮತ್ತು ನೆಲಗಡಲೆ 5745 ಹೆಕ್ಟೇರ್‌ನಷ್ಟು ನಷ್ಟವಾಗಿದೆ. ಅದರೊಂದಿಗೆ ಬತ್ತ 525 ಹೆಕ್ಟೇರ್, ಮುಸುಕಿನ ಜೋಳ 704, ತೊಗರಿ 921, ಅಲಸಂದೆ 218, ಅವರೆ 1113 ಹೆಕ್ಟೇರ್‌ನಷ್ಟು ನಷ್ಟವಾಗಿದೆ.ಕೃಷಿ ಕಾರ್ಮಿಕರ ಬವಣೆ: ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 41 ಸಾವಿರ ಮಂದಿ ನಿತ್ಯವೂ ಹಾಲು ಪೂರೈಸುತ್ತಾರೆ. ಅವರ ಪೈಕಿ 7 ಸಾವಿರ ಮಂದಿ ಕೃಷಿ ಕಾರ್ಮಿಕರು. ಅವರಿಗೆ ಸ್ವಂತ ಜಮೀನಾಗಲೀ, ನೀರಿನ ಸೌಕರ್ಯವಾಗಲೀ ಇಲ್ಲ. ಹೀಗಾಗಿ ಕಿಲೋ ಮೀಟರ್ ದೂರಕ್ಕೆ ಹೋಗಿ ಹಸಿರು ಮೇವಿಗೆ ಹುಡುಕಾಡಿ ತರುವ ಸವಾಲು ಎದುರಾಗಿದೆ. ಅದರ ನಡುವೆಯೇ ಹೈನುಗಾರಿಕೆಯನ್ನು ಅವಲಂಬಿಸಿದ ಜೀವನವು ಕಷ್ಟದಿಂದ ನಡೆಯುತ್ತಿದೆ. ಜಾನುವಾರುಗಳ ಕಾಲು ಬಾಯಿ ಜ್ವರವೂ ಜಿಲ್ಲೆಯನ್ನು ಬಾಧಿಸುತ್ತಿದೆ.ಮಂಕಾದ ರೇಷ್ಮೆ: ರೇಷ್ಮೆ ಗೂಡುಗಳಿಗೆ ಈಗ ಲಾಭದಾಯಕ ಬೆಲೆ ಇದೆ. ಆದರೆ ಹಿಪ್ಪುನೇರಳೆ ಬೆಳೆಗೆ ಆಸರೆಯಾಗಿದ್ದ ಕೊಳವೆ ಬಾವಿಗಳು ಬತ್ತುತ್ತಿವೆ. ಜಿಲ್ಲೆಯ 22,722 ರೇಷ್ಮೆ ಕೃಷಿಕರ ಜಮೀನುಗಳಲ್ಲಿ ಸರಿಸುಮಾರು ಅಷ್ಟೇ ಸಂಖ್ಯೆಯ ಕೊಳವೆ ಬಾವಿಗಳ ಪೈಕಿ ಶೇ 70ರಷ್ಟು ಬತ್ತಿವೆ. ಮಳೆಯಾಶ್ರಯದಲ್ಲೇ ರೇಷ್ಮೆ ಕೃಷಿ ನಡೆಯುವಂಥ ಸನ್ನಿವೇಶದಲ್ಲಿ ಬೆಳೆಗಾರರು ಮಂಕಾಗಿದ್ದಾರೆ.ನೀರಿಗೆ 100 ಕೋಟಿ: ಕೃಷಿ ಕ್ಷೇತ್ರವನ್ನು ಆವರಿಸಿರುವ ಬರಗಾಲವು ಕುಡಿಯುವ ನೀರಿಗೂ ತತ್ವಾರವನ್ನು ತಂದಿದೆ. ಜಿಲ್ಲಾ ಪಂಚಾಯಿತಿ ಈ ಬಾರಿ ಕುಡಿಯುವ ನೀರಿಗಾಗಿಯೇ 100 ಕೋಟಿ ರೂಪಾಯಿ ವೆಚ್ಚದ ಕ್ರಿಯಾಯೋಜನೆಯನ್ನು ರೂಪಿಸಿ ಅನುಮೋದನೆ ಪಡೆದಿದೆ.

ಬೀಳುವ ಅಲ್ಪಸ್ಪಲ್ಪ ಮಳೆನೀರು ಹರಿದು ಬರಲು ಅವಕಾಶವಿಲ್ಲದಂತೆ ಬಹುತೇಕ ರಾಜಕಾಲುವೆಗಳ ಒತ್ತುವರಿಯಾಗಿದೆ. ಕೆರೆಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಅಕ್ರಮ ಮರಳು ದಂಧೆಯು ನುಂಗಿಹಾಕುತ್ತಿದೆ. ಇದೇ ವೇಳೆ ಮಿತಿ ಮೀರಿದ ಅಂತರ್ಜಲ ಬಳಕೆಯ ಪರಿಣಾಮವಾಗಿ ಹಳೆ-ಹೊಸ ಕೊಳವೆ ಬಾವಿಗಳಲ್ಲೂ ನೀರಿನ ಬರಗಾಲ ಸೃಷ್ಟಿಯಾಗಿರುವುದು ಜಿಲ್ಲೆಯನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.ಇಂಥ ಮಳೆಗಾಲವನ್ನು ಕಟ್ಟಿಕೊಂಡು ಏನು ಮಾಡೋದು? ಕಳೆದ ವರ್ಷ ಆಗಸ್ಟ್ ಕೊನೇ ಹೊತ್ತಿಗೆ ಜಮೀನಿನಲ್ಲಿ ರಾಗಿ ಪೈರುಗಳು ಎರಡೂವರೆ ಅಡಿಯಷ್ಟು ಬೆಳೆದಿದ್ದವು. ಈ ಬಾರಿ ಒಂದು ಅಡಿಯಷ್ಟು ಕೂಡ ಬೆಳೆದಿಲ್ಲ. ಮಳೆ ಬಂದರೆ ಮಾತ್ರ ಈ ರಾಗಿ ದಕ್ಕುತ್ತದೆ. ಇಲ್ಲವೆಂದರೆ ಮೇವಿಗೂ ಆಗೋದಿಲ್ಲ.

-ಮಾಲಾ, ರೈತ ಮಹಿಳೆ, ಬ್ಯಾಲಹಳ್ಳಿ, ಕೋಲಾರಮಳೆ ಇಲ್ಲದಿರುವುದರಿಂದ ಬೆಳೆ ಹಾನಿಗೀಡಾಗುವ ಪ್ರದೇಶದ ವಿಸ್ತೀರ್ಣವು ಹೆಚ್ಚಾಗಲಿದೆ. ರಾಗಿ ಬೆಳೆಯು ತೆನೆ ಬರುವ ಹಂತವನ್ನು ತಲುಪಿದ್ದರೆ ಮಳೆ ಬರದಿದ್ದರೂ ಬೆಳೆ ಕೈಗೆ ಸಿಗಬಹುದು ಎಂಬ ಭರವಸೆಯನ್ನು ಇಟ್ಟುಕೊಳ್ಳಬಹುದಿತ್ತು. ನೆಲಗಡಲೆಯೂ ಬಲಿಯುವುದಿಲ್ಲ. ಇನ್ನು ಮಳೆ ಬರುವುದು ಕಷ್ಟ. ಹಿಂಗಾರು ಕೂಡ ಕೈ ಹಿಡಿಯುವ ಸಾಧ್ಯತೆ ಇಲ್ಲ. ಹೀಗಾಗಿ ಪೂರ್ಣ ಬೆಳೆ ನಷ್ಟವಾಗುವ ಸಾಧ್ಯತೆಯೇ ಹೆಚ್ಚಿದೆ.

-ಸಿ.ಚಿಕ್ಕಣ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಜಿಲ್ಲೆಯ ಮುಳಬಾಗಲು ಮತ್ತು ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ಬಿತ್ತನೆ ಕಡಿಮೆಯಾಗಿರುವುದರಿಂದ ಅಲ್ಲಿ ಮತ್ತು ಬಂಗಾರಪೇಟೆಯ ಕೆಲವೆಡೆ ಮೇವಿನ ಸಮಸ್ಯೆ ತೀವ್ರಗೊಳ್ಳಬಹುದು. ಸರ್ಕಾರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದ ಬಳಿಕ ಮೇವು ಬ್ಯಾಂಕ್ ಅಥವಾ ಗೋಶಾಲೆಯ ಅನುಕೂಲ ಕಲ್ಪಿಸುವ ಕ್ರಮ ಕೈಗೊಳ್ಳಲಾಗುವುದು.

-ಡಾ.ಬಿ.ಎನ್.ಶಿವರಾಂ, ಪಶುಪಾಲನಾ ಇಲಾಖೆ ಉಪನಿರ್ದೇಶಕಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry