ಬುಧವಾರ, ನವೆಂಬರ್ 20, 2019
22 °C
ಸುಗಮ ಮತದಾನಕ್ಕೆ ವ್ಯಾಪಕ ಸಜ್ಜೀಕರಣ- ಜಿಲ್ಲಾಧಿಕಾರಿ

ನಿರ್ಭೀತ ಮತದಾನ: ಸಿದ್ಧತೆ

Published:
Updated:

ಕೊಪ್ಪಳ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬರುವ ಮೇ 5ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯ ಮತದಾರರು ನಿರ್ಭೀತಿಯಿಂದ ಹಾಗೂ ಯಾವುದೇ ಒತ್ತಡಕ್ಕೆ ಒಳಗಾಗದೇ ತಮ್ಮ ಹಕ್ಕು ಚಲಾಯಿಸಬೇಕು. ಇದಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ತುಳಸಿ ಮದ್ದಿನೇನಿ ಹೇಳಿದರು.ಅವರು ನಗರದಲ್ಲಿ ಬುಧವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.

ಮತದಾರರ ಮನೆಗೇ ಗುರುತಿನ ಚೀಟಿ ತಲುಪಿಸುವ, ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡುವುದಕ್ಕೆ ಕಡಿವಾಣ, ಸುಗಮ ಮತದಾನಕ್ಕಾಗಿ ಅಗತ್ಯ ರಕ್ಷಣೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.ಮತದಾನದ ಸಮಯವನ್ನು ಬದಲಾಯಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಮೊದಲಿನಂತೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 1,136 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕೆಲವೆಡೆ ಮತಗಟ್ಟೆಗಳಲ್ಲಿ ನೆರಳು ಇಲ್ಲ. ಹೀಗಾಗಿ ಸರದಿಯಲ್ಲಿ ನಿಲ್ಲುವ ಮತದಾರರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಇಂತಹ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.ಮತದಾನ ಮಾಡಲು ಮತದಾರರು ರಚಿಸುವ ಸರದಿ ಸಾಲುಗಳ ನಿರ್ವಹಣೆಗಾಗಿ ಎನ್‌ಸಿಸಿ ಕೆಡೆಟ್‌ಗಳ ಸೇವೆ ಪಡೆಯಲು ಉದ್ದೇಶಿಸಲಾಗಿದೆ. ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆಉತ್ತರಿಸಿದರು.ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಲು ಬಿಗಿ ಬಂದೋಬಸ್ತ್ ಏರ್ಪಡಿಸಲಾಗುವುದು. ಇದಕ್ಕಾಗಿ ಜಿಲ್ಲೆಯಲ್ಲಿರುವ ಪೊಲೀಸ್ ಸಿಬ್ಬಂದಿಯಲ್ಲದೇ ಅರೆ ಸೇನಾ ಪಡೆ ಸಹ ಆಗಮಿಸಲಿದೆ. ಈಗಾಗಲೇ ಗಂಗಾವತಿಗೆ ಅರೆ ಸೇನಾ ಪಡೆಯ ಕಂಪೆನಿ ಬಂದಿದ್ದು, ನಾಳೆ ಮತ್ತೆರಡು ಕಂಪೆನಿ ಬರುವ ಸಾಧ್ಯತೆ ಇದೆ ಎಂದರು.ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆಗೆ ಕಾರಣರಾಗುವುದಿಲ್ಲ, ಶಾಂತಿ ಭಂಗ ತರುವ ಕೃತ್ಯಗಳನ್ನು ನಡೆಸುವುದಿಲ್ಲ ಎಂಬುದಾಗಿ 172 ಜನ ಸಮಾಜ ವಿರೋಧಿ ವ್ಯಕ್ತಿಗಳಿಂದ ಈಗಾಗಲೇ ಮುಚ್ಚಳಿಕೆಯನ್ನು ಪಡೆಯಲಾಗಿದೆ ಎಂದೂ ಹೇಳಿದರು.ಏ. 7ರ ವರೆಗೆ ಮತದಾರರ ನೋಂದಣಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ಸುಮಾರು 34 ಸಾವಿರ ಮತದಾರರು ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಇವುಗಳ ಪರಿಶೀಲನಾ ಕಾರ್ಯ ನಡೆದಿದ್ದು, ಏ. 15ರಂದು ಪರಿಷ್ಕೃತ ಮತದಾರರ ಪಟ್ಟಿ ಸಿದ್ಧಗೊಳ್ಳಲಿದೆ. ಹೊಸ ಮತದಾರರು ಸೇರ್ಪಡೆಯಿಂದಾಗಿ ಜಿಲ್ಲೆಯ ಮತದಾರರ ಸಂಖ್ಯೆ 9 ಲಕ್ಷ ಇದ್ದದ್ದು, 9.30 ಲಕ್ಷಕ್ಕೆ ಹೆಚ್ಚಳವಾಗುವ  ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಈ ವರೆಗೆ ಯಲಬುರ್ಗಾ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಪಕ್ಷದ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾ ಇಡಲು ತಂಡಗಳನ್ನು ರಚಿಸಲಾಗಿದೆ. ನೆರೆಯ ಜಿಲ್ಲೆಗಳಿಂದ ಹಣ, ಹೆಂಡ ಜಿಲ್ಲೆಗೆ ತರುವುದನ್ನು ತಡೆಯಲು 9 ಕಡೆಗಳಲ್ಲಿ ಸ್ಥಿರ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇಂತಹ ಚುನಾವಣಾ ಅಕ್ರಮಗಳನ್ನು ತಡೆಯಲು `ಮೂವಿಂಗ್ ಚೆಕ್‌ಪೋಸ್ಟ್'ಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದೂ ಹೇಳಿದರು.ಗುಳೇ ಹೋದವರನ್ನು ವಾಹನಗಳಲ್ಲಿ ಕರೆತಂದು ಮತದಾನ ಮಾಡಿಸುವುದು ಸಹ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಈ ರೀತಿ ಮಾಡುವುದು ಕಂಡು ಬಂದರೆ ಸಂಬಂಧಪಟ್ಟ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ವಾರ್ತಾಧಿಕಾರಿ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿಯೂ ಆಗಿರುವ ತುಕಾರಾಂರಾವ್ ಬಿ.ವಿ. ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)