`ನಿರ್ಮಲ ಗಂಗಾ' ಜಾರಿಗೆ ನಿಯಮ ಅಡ್ಡಿ!

7

`ನಿರ್ಮಲ ಗಂಗಾ' ಜಾರಿಗೆ ನಿಯಮ ಅಡ್ಡಿ!

Published:
Updated:

ಗುಲ್ಬರ್ಗ: ರಾಜ್ಯ ಸರ್ಕಾರವು ನಗರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ಕುಟುಂಬಕ್ಕೆ ನಿರ್ಮಲ ಗಂಗಾ ಯೋಜನೆಯಡಿ ಉಚಿತವಾಗಿ ಕುಡಿಯುವ ನೀರು ಹಾಗೂ ಒಳ ಚರಂಡಿ ಸೌಲಭ್ಯ ಒದಗಿಸಲು ಎರಡು ವರ್ಷಗಳ ಹಿಂದೆಯೇ ಗುಲ್ಬರ್ಗ ಮಹಾನಗರ ಪಾಲಿಕೆಗೆ ಹಣ ಬಿಡುಗಡೆ ಮಾಡಿದೆ. ಆದರೆ ಇದುವರೆಗೂ ಈ ಕಾರ್ಯ ಅನುಷ್ಠಾನಗೊಂಡಿಲ್ಲ.ಮೀಟರ್ ಸಹಿತ ಪೈಪ್‌ಲೈನ್ ಸಂಪರ್ಕಕ್ಕೆ ರೂ. 2500, ಮೀಟರ್ ಇಲ್ಲದೆ ಪೈಪ್‌ಲೈನ್‌ಗೆ ರೂ. 1500 ಹಾಗೂ ಪ್ರತಿ ಕುಟುಂಬಕ್ಕೆ ಒಳಚರಂಡಿ ಸಂಪರ್ಕ ಕಲ್ಪಿಸಿದರೆ ರೂ. 5700 ಮೊತ್ತವನ್ನು ಸರ್ಕಾರ ಪಾಲಿಕೆಗೆ ನೀಡುತ್ತದೆ. ಕಾಮಗಾರಿ ನಡೆದಿರುವ ಬಗ್ಗೆ ಫಲಾನುಭವಿಗಳು ವಿವಿಧ ಹಂತಗಳಲ್ಲಿ ಛಾಯಾಚಿತ್ರಗಳನ್ನು ಸಾಕ್ಷಿಯಾಗಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಬಡವರು ಹೆಚ್ಚಿನ ಸಂಖ್ಯೆಯಲ್ಲಿರುವ ಗುಲ್ಬರ್ಗದಲ್ಲಿ ಈ ಯೋಜನೆ ಜಾರಿಗೊಳಿಸುವುದಕ್ಕಾಗಿ ಜುಲೈ 2010ರಲ್ಲೇ ಮಹಾನಗರ ಪಾಲಿಕೆ ಖಾತೆಗೆ ಆರಂಭಿಕ ಮೊತ್ತವೆಂದು ರೂ. 1.15 ಕೋಟಿ ಜಮಾ ಮಾಡಲಾಗಿದೆ. ಎರಡು ವರ್ಷಗಳಾದರೂ ಯೋಜನೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.ಸುರಕ್ಷಿತ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಕೊಳಚೆ ಪ್ರದೇಶಗಳ ಕುಟುಂಬಗಳು ಗುಲ್ಬರ್ಗ ಮಹಾನಗರ ಪಾಲಿಕೆ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಲೇ ಇವೆ. ಆದರೆ `ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ'ಎನ್ನುವಂತಾಗಿದೆ.ಬಡವರಿಗೆ ಮೂಲ ಸೌಲಭ್ಯ ಒದಗಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ರೂಪಿಸಿ ಅನುಷ್ಠಾನ ಜವಾಬ್ದಾರಿಯನ್ನು ಆರಂಭದಲ್ಲಿ ಜಲ ಮಂಡಳಿಗೆ ವಹಿಸಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಬರದ ಕಾರಣ, ಇದೀಗ ಈ ಯೋಜನೆ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ವಹಿಸಿದೆ.ಅಡ್ಡಿಯಾದ ನೀತಿ:

`ಯೋಜನೆ ಅನುಷ್ಠಾನಕ್ಕೆ ಹಣ ಬಂದಿರುವುದು ನಿಜ. ಆದರೆ ಯೋಜನೆ ಜಾರಿಗೆ ರೂಪಿಸಿದ ಕೆಲ ನಿಯಮಗಳು ಪ್ರಾಯೋಗಿಕವಾಗಿಲ್ಲ. ನೋಂದಾವಣೆಯಾದ ಪ್ಲಂಬರ್‌ಗಳು ಸಿಗದಿರುವುದು ಒಂದನೇ ಸಮಸ್ಯೆ. ಕಾಮಗಾರಿ ಪೂರ್ಣಗೊಂಡ ಬಳಿಕ ಹಣದ ಚೆಕ್ ಫಲಾನುಭವಿ ಕೈಗೆ ನೀಡುವುದು ಕಡ್ಡಾಯ ಮಾಡಲಾಗಿದೆ. ಫಲಾನುಭವಿಗಳು ಹಣ ನೀಡುತ್ತಾರೆ ಎನ್ನುವುದನ್ನು ಪ್ಲಂಬರ್‌ಗಳು ನಂಬುವುದಿಲ್ಲ. ಈ ನಿಯಮವನ್ನು ಸಡಿಲಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರತಿಕ್ರಿಯೆ ಬಂದಿಲ್ಲ' ಎನ್ನುತ್ತಾರೆ ಪಾಲಿಕೆ ಆಯುಕ್ತ ಡಾ. ಸಿ. ನಾಗಯ್ಯ.ಗುಲ್ಬರ್ಗದ ಹಳೆ ಫಿಲ್ಟರ್ ಬೆಡ್ ಆಶ್ರಯ ಕಾಲೊನಿ, ಅಂಬೇಡ್ಕರ್ ಆಶ್ರಯ ಕಾಲೊನಿ, ಭರತ ನಗರ ತಾಂಡಾ ಸೇರಿದಂತೆ ಒಟ್ಟು 11 ಪ್ರದೇಶಗಳಲ್ಲಿ ಈಗಾಗಲೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2012-13ರಲ್ಲಿ ಯೋಜನೆ ಅನುಷ್ಠಾನಕ್ಕೆ ಮಹಾನಗರ ಪಾಲಿಕೆಯು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಆದರೆ ನಿಯಮಗಳ ಅಡ್ಡಿಯಿಂದಾಗಿ ಬಡವರ ಪಾಲಿಕೆ `ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ' ಎನ್ನುವಂತಾಗಿದೆ.

`ನಿರ್ಮಲ ಗಂಗಾ ಯೋಜನೆ ಜಾರಿಗೆ ಒಟ್ಟು ರೂ. 45 ಕೋಟಿ ಹಣ ಬಂದಿದೆ. ಅದರಲ್ಲಿ ರಾಜ್ಯದಾದ್ಯಂತ ಕೇವಲ ರೂ. 3.5 ಕೋಟಿ ಮಾತ್ರ ವೆಚ್ಚವಾಗಿದೆ. ಯೋಜನೆ ಅನುಷ್ಠಾನಕ್ಕೆ ಒತ್ತಡ ಹಾಕುತ್ತಿದ್ದರೂ ಸ್ಥಳೀಯವಾಗಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಯೋಜನೆ ವೈಫಲ್ಯ ಕಂಡಿದೆ' ಎನ್ನುವುದು ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ ಕಚೇರಿ ಅಧಿಕಾರಿಗಳ ವಿವರಣೆ.ಕರ್ನಾಟಕದ ನಗರ ಪ್ರದೇಶಗಳಲ್ಲಿ ಒಟ್ಟು ಶೇ 34ರಷ್ಟು ಜನಸಂಖ್ಯೆ ಇದ್ದು, ಅದರಲ್ಲಿ 120 ಲಕ್ಷ (2001ರ ಜನಗಣತಿ) ಜನ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರಿದ್ದಾರೆ. ಇದರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅನೇಕ ಕುಟುಂಬಗಳು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಈ ಕೊರತೆಯನ್ನು ನಿಗಿಸುವ ಉದ್ದೇಶದಿಂದ ನಿರ್ಮಲ ಗಂಗಾ ಯೋಜನೆಯನ್ನು ರೂಪಿಸಲಾಗಿದೆ. ಶೇ 5ರಷ್ಟನ್ನು ಮಾತ್ರ ಫಲಾನುಭವಿಗಳು ಭರಿಸಿದರೆ, ಇನ್ನುಳಿದ ಶೇ 95ರಷ್ಟನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಸರ್ಕಾರ ಹಣ ನೀಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry