ಮಂಗಳವಾರ, ಜನವರಿ 28, 2020
18 °C

ನಿರ್ಮಲ ಶೌಚಾಲಯದ ಅನೈರ್ಮಲ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ಪ್ರಮುಖ ರಸ್ತೆ.  ಇದರ ಪಕ್ಕದಲ್ಲೇ ವಿಷಜಂತುಗಳಿಂದ ಕೂಡಿದ ಪೊದೆಕಾಡು. ಇದರ ಮಧ್ಯೆ ಸಾರ್ವಜನಿಕರ ಶೌಚಾಲಯ. ಹೆಸರು `ನಿರ್ಮಲ ನಗರ ಶೌಚಾಲಯ~! ಇಲ್ಲಿ ನೈರ್ಮಲ್ಯದ ಯಾವ ಲಕ್ಷಣವೂ ಕಾಣುವುದಿಲ್ಲ.ಗುಲ್ಬರ್ಗ ಜಿಲ್ಲೆ ಸರ್ಕಾರಿ ಆಸ್ಪತ್ರೆ ಎದುರು ಇರುವ ನಿರ್ಮಲ ನಗರ ಶೌಚಾಲಯದ ದುಃಸ್ಥಿತಿ ಇದು. ನೋಡಲು ಸುಂದರವಾದ ನೂತನ ಕಟ್ಟಡ, ಆ ಕಟ್ಟಡದ ಕಳೆಗುಂದುವಂತೆ  ಸುತ್ತ ಬೆಳೆದು ನಿಂತಿದೆ ಹಲವಾರು ವಿಧದ ಗಿಡಗಂಟಿಗಳು.ನಿರ್ಮಲ ನಗರ ಯೋಜನೆ ಅಡಿಯಲ್ಲಿ ನಿರ್ಮಿಸಿದ್ದ ಈ ಶೌಚಾಲಯ ಒಂದು ವರ್ಷದಿಂದ ಹಾಳು ಬಿದ್ದಿದೆ. ನೀರಿನ ಸೌಲಭ್ಯ ಇಲ್ಲದ ಕಾರಣ ಸಾರ್ವಜನಿಕರು ಶೌಚಾಲಯ ಉಪಯೋಗಿಸುತ್ತಿಲ್ಲ. ಆಸ್ಪತ್ರೆಗಾಗಿ ಹಾಗೂ ಬೇರೆ ಕೆಲಸದ ನಿಮಿತ್ತ ಇತ್ತ ಕಡೆ ಆಗಮಿಸಿದ ಜನರಿಗೆ ಬಯಲೇ ಗತಿ. ಇದು ನಗರದ ಹೃದಯ ಭಾಗದಲ್ಲಿ ಇದ್ದರೂ ಸಮಸ್ಯೆಯತ್ತ ಅಧಿಕಾರಿಗಳು ಗಮನ ಹರಿಸಿಲ್ಲ ಎಂಬ ಆಕ್ಷೇಪ ಸಾರ್ವಜನಿಕರದು.`ಸುಮಾರು ಮೂರು ನಾಲ್ಕು ವರ್ಷದ ಹಿಂದೆ ಇದನ್ನು ನಿರ್ಮಿಸಲಾಗಿದೆ. ಈಗ ಒಂದು ವರ್ಷದಿಂದ ಇದು ಹಾಳು ಬಿದ್ದಿದೆ. ಇಲ್ಲಿ ನೀರಿನ ಸೌಲಭ್ಯ ಇಲ್ಲ. ಸ್ವಚ್ಛತೆ ಇರದ ಕಾರಣ ಸುತ್ತಲಿನ ಪ್ರದೇಶಗಳಲ್ಲಿ ಕೆಟ್ಟ ವಾಸನೆ ಮೂಗಿಗೆ ತಟ್ಟುತ್ತದೆ. ಜನಕ್ಕೆ ಇದು ಉಪಯೋಗಕ್ಕೆ ಇಲ್ಲದ ಸುಂದರ ಕಟ್ಟಡ ಅಷ್ಟೆ~ ಎಂದು ನಾಗೇಂದ್ರ ಹೇಳಿದರು.`ಈ ಶೌಚಾಲಯ ಇಲ್ಲಿ ಕಟ್ಟುವುದರ ಬದಲಿಗೆ ಸರ್ಕಲ್ ಹತ್ತಿರ ನಿರ್ಮಿಸಿದ್ದರೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿತ್ತು. ರಸ್ತೆ ಪಕ್ಕಕ್ಕೆ ನಿರ್ಮಿಸಿರುವುದರಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆಟ್ಟ ವಾಸನೆ. ಜೊತೆಗೆ ಇಲ್ಲಿ ವಾಸಿಸುವ ಜನರಿಗೆ ಹಲವಾರು ರೋಗಗಳಿಗೂ ಆಹ್ವಾನ ನೀಡುತ್ತಿದೆ~ ಎಂದು ಹೆಸರು ಹೇಳಲು ಇಚ್ಛಿಸದ ನಿವಾಸಿಯೊಬ್ಬರು ಅಭಿಪ್ರಾಯಪಟ್ಟರು.`ಶೌಚಾಲಯದ ಸುತ್ತ ಗಿಡಗಂಟಿ ಕುರುಚಲು ಪೊದೆ ಬೆಳೆದಿರುವ ಸಮಸ್ಯೆ ಒಂದೆಡೆ, ಇನ್ನೊಂದೆಡೆ ಶೌಚಾಲಯದ ಎದುರು (ರಸ್ತೆ ಬದಿಗೆ) ಪುರುಷರು ಮೂತ್ರ ವಿಸರ್ಜನೆ ಮಾಡುವುದು ಮುಂತಾದ ಕಾರಣಗಳಿಂದ ರಸ್ತೆ ಮೇಲೆ ಮಹಿಳೆಯರು ತಲೆ ತಗ್ಗಿಸಿ ಹೋಗಬೇಕಾಗುತ್ತಿದೆ. ಇದು ಹೆಸರಿಗೆ ಮಾತ್ರ ಶೌಚಾಲಯ, ಜನರಿಗೆ ಯಾವುದೇ ರೀತಿಯ ಉಪಯೋಗವಾಗುತ್ತಿಲ್ಲ~ ಎಂದು  ಹಣ್ಣು ಮಾರಾಟ ಮಾಡುವ ಮಹಿಳೆಯೊಬ್ಬರು ತಮ್ಮ ಗೋಳು ತೋಡಿಕೊಂಡರು.`ಆಸ್ಪತ್ರೆಗೆ ಅಂತ ಹಳ್ಳಿಯಿಂದ ಬಂದಿದ್ದೀನಿ. ಮಗುವಿಗೆ ಶೌಚಾಲಯಕ್ಕೆ ಕರಕೊಂಡು ಹೋಗಬೇಕು ಅಂತ ತಿರುಗಾಡುತ್ತಿರುವೆ, ಇಲ್ಲಿ ಎಲ್ಲಿದೆ ಅಂತ ಗೊತ್ತಾಗುತ್ತಿಲ್ಲ. ಇದು ರಸ್ತೆ ಪಕ್ಕಕ್ಕೆ ಇರುವುದರಿಂದ ಇಲ್ಲಿಗೆ  ಕರೆದುಕೊಂಡು ಬಂದೆ. ಆದರೆ ಇದು ಬಂದ್ ಆಗಿದೆ. ಇದನ್ನು ಆದಷ್ಟು ಬೇಗ ದುರಸ್ತಿ ಮಾಡಿದರೆ ಬೇರೆ ಊರಿಂದ ಆಸ್ಪತ್ರೆ ಮುಂತಾದ ಸಮಸ್ಯೆ ಹೊತ್ತು ಬರುವ ನಮ್ಮಂಥವರಿಗೆ ಅನುಕೂಲವಾಗುತ್ತದೆ~ ಎಂದು ಚಿಕಿತ್ಸೆಗೆಂದು ಬಂದಿದ್ದ ಚಿಂಚನಸೂರ ಗ್ರಾಮದ ಮಹಿಳೆ ಸಂಗಮ್ಮ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)