ಶುಕ್ರವಾರ, ಮಾರ್ಚ್ 5, 2021
28 °C

ನಿರ್ಮಾಪಕರ ಕಾಮಿಡಿ! ಶಿವರಾಜ್‌ಕುಮಾರ್ ಕಿಡಿ

ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |

ನಿರ್ಮಾಪಕರ ಕಾಮಿಡಿ! ಶಿವರಾಜ್‌ಕುಮಾರ್ ಕಿಡಿ

ಹೊರಗೆ ಕೆಂಡದಂಥ ಬಿಸಿಲು. ಒಳಗೆ ಕೆಂಡದಂಥ ಶಿವರಾಜ್‌ಕುಮಾರ್. ಅವರು ಕೆಂಡಾಮಂಡಲರಾಗುವುದಕ್ಕೆ ಕಾರಣವಿತ್ತು. ಪ್ರಚಾರ ಪಡೆಯಲು ಕೆಲವು ನಿರ್ಮಾಪಕರು ಚಿತ್ರರಂಗವನ್ನು ಬೀದಿಗೆ ತಂದಿದ್ದಾರೆ ಎಂಬುದು ಅವರ ಕೋಪ. `ಜನರಿಗೆ ಸಿನಿಮಾವನ್ನು ತಲುಪಿಸಲು ಸರಿಯಾದ ಮಾರ್ಗಗಳಿವೆ. ಆದರೆ ಕ್ಷುಲ್ಲಕ ವಿಚಾರಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದು ಸರಿಯಲ್ಲ~ ಎಂದರು.

ಅದು ಬೆಂಗಳೂರಿನ ಮೈಸೂರ್ ಲ್ಯಾಂಪ್ಸ್ ಕಾರ್ಖಾನೆ ಅಂಗಳದಲ್ಲಿ `ಅಂದರ್ ಬಾಹರ್~ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ. ನಿರ್ಮಾಪಕರಾದ ಮುನಿರತ್ನ ಮತ್ತು ಕೆ.ಮಂಜು ಅವರ ವಾದ ವಿವಾದದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡುತ್ತಾ ಹೋದರು ಶಿವಣ್ಣ. `ನಿರ್ಮಾಪಕರು ಕಲಾವಿದರ ಬಗ್ಗೆಯೂ ಮಾತನಾಡುತ್ತಾರೆ. ಸಿನಿಮಾ ನಿರ್ಮಾಣ ವೇಳೆಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಕಲಾವಿದರೇನು ನಮ್ಮ ಸಿನಿಮಾ ಮಾಡಿ ಎಂದು ಕೇಳಿದ್ದಾರಾ? ವಿವಾದವನ್ನು ಗಂಭೀರವಾಗಿ ಅನೇಕರು ಪರಿಗಣಿಸಿರಬಹುದು ಆದರೆ ನನಗೆ ಮಾತ್ರ ಇದು ಕಾಮಿಡಿ ರೀತಿ ಕಾಣುತ್ತಿದೆ~ ಎಂಬ ಅವರ ಮಾತಿನಲ್ಲಿ ಮೊನಚಿತ್ತು.

ನೀವೇಕೆ ಆಗಲೇ ಪ್ರತಿಕ್ರಿಯಿಸಲಿಲ್ಲ ಎಂಬ ಪ್ರಶ್ನೆಗೆ `ಇಂಥದಕ್ಕೆಲ್ಲಾ ಪ್ರತಿಕ್ರಿಯೆ ನೀಡುತ್ತಾ ಹೋದರೆ ಮುಠ್ಠಾಳರಾಗುತ್ತಿದ್ದೆವು. ಅಪ್ಪಾಜಿ ನಿರ್ಮಾಪಕರನ್ನು ಅನ್ನದಾತರು ಎಂದಿದ್ದರು. ಅದು ನಿಜ ಕೂಡ. ಯಾರೋ ತಪ್ಪು ಮಾಡುತ್ತಾರೆ ಎಂದು ಎಲ್ಲಾ ನಿರ್ಮಾಪಕರನ್ನು ದೂಷಿಸಲು ಸಾಧ್ಯವಿಲ್ಲ~ ಎನ್ನುವುದು ಅವರ ದಿಟ್ಟನುಡಿ.

`ಕಾಲಕ್ಕೆ ತಕ್ಕಂತೆ ನಡೆಯಬೇಕು~ ಸಿನಿಮಾ ಹಾಡನ್ನು ಪ್ರಸ್ತಾಪಿಸಿದ ಅವರು `ನಾನು 25 ವರ್ಷಗಳಿಂದ ಉದ್ಯಮದಲ್ಲಿದ್ದೇನೆ. ಆದರೆ ಈಗ ಶಿಸ್ತು ಇಲ್ಲದಂತಾಗಿದೆ. ಸಿನಿಮಾ ಎನ್ನುವುದು ಫ್ಯಾಷನ್ ಆಗಿದೆ. ಅಸಂಬದ್ಧವಾಗಿ ಮಾತನಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಬಿಟ್ಟು ಅದೇ ಶ್ರಮವನ್ನು ಸಿನಿಮಾಕ್ಕೆ ಹಾಕಿದರೆ ಖಂಡಿತ ಯಶಸ್ಸು ಸಿಗುತ್ತದೆ. ಯಾವುದೇ ಅಳುಕಿಲ್ಲದೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ನನ್ನ ಮಾತುಗಳಿಂದ ನಿರ್ಮಾಪಕರಿಗೆ ತಮ್ಮ ತಪ್ಪುಗಳು ಅರ್ಥ ಆಗಿ ಒಳ್ಳೆಯದಾದರೆ ಅಷ್ಟೇ ಸಾಕು~ ಎಂದರು.

`ಸತ್ಯಮೇವ ಜಯತೆ~ ಟೀವಿ ಕಾರ್ಯಕ್ರಮ ಕನ್ನಡಕ್ಕೆ ಡಬ್ ಆಗುತ್ತಿರುವ ಆತಂಕವೂ ಸುದ್ದಿಗಾರರಿಂದ ವ್ಯಕ್ತವಾಯಿತು. ಖಂಡಿತ ಚಿತ್ರವನ್ನು ಡಬ್ ಮಾಡಲು ಬಿಡುವುದಿಲ್ಲ. ರಿಯಾಲಿಟಿ ಕಾರ್ಯಕ್ರಮ `ಕನ್ನಡದ ಕೋಟ್ಯಧಿಪತಿ~ ಹಿಂದಿಯಿಂದ ಪ್ರೇರಿತವಾದುದು. ಹಾಗೆಂದು ಅದನ್ನು ನೇರವಾಗಿ ಡಬ್ ಮಾಡಲಿಲ್ಲ. ಕನ್ನಡದಲ್ಲೇ ಚಿತ್ರ ನಿರ್ಮಾಣವಾಗುವುದಾದರೆ ಅದಕ್ಕೆ ನನ್ನ ಸಮ್ಮತಿ ಇದೆ~ ಎಂದು ಚಿತ್ರರಂಗದ ಪರವಾಗಿ ನಿಂತರು.

ಚಿತ್ರರಂಗದ ನಾಯಕತ್ವದ ಕುರಿತು ಮಾತು ಹೊರಳಿತು. `ಒಬ್ಬ ಶಿವಣ್ಣನನಿಂದ ಏನೂ ಸಾಧ್ಯವಿಲ್ಲ. ಎಲ್ಲರೂ ಒಪ್ಪಿದರೆ ಮಾತ್ರ ನಾಯಕತ್ವ ಒಪ್ಪಕೊಳ್ಳುವೆ~ ಎಂದು ಚುಟುಕಾಗಿ ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.