ಶನಿವಾರ, ಏಪ್ರಿಲ್ 17, 2021
22 °C

ನಿರ್ಮಾಪಕರ ವಿರುದ್ಧ ಪೂಜಾ ಗಾಂಧಿ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿತ್ರನಟಿ ರಮ್ಯಾ ಹಾಗೂ ಚಿತ್ರ ನಿರ್ಮಾಪಕ ಗಣೇಶ್ ಅವರ ನಡುವಿನ ವಿವಾದ ಇನ್ನೂ ‘ಬಿಸಿ ಬಿಸಿ’ ಚರ್ಚೆಯಲ್ಲಿ ಇರುವ ಮಧ್ಯೆಯೇ, ಇದೇ ಶುಕ್ರವಾರ ಬಿಡುಗಡೆಯಾಗಬೇಕಿರುವ ‘ನೀನಿಲ್ಲದೇ’ ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಪೂಜಾಗಾಂಧಿ ಅವರು, ಈ ಚಿತ್ರದ ನಿರ್ಮಾಪಕ- ನಿರ್ದೇಶಕ ಶಿವಗಣಪತಿ ಅವರನ್ನು ಸಿವಿಲ್ ಕೋರ್ಟ್‌ನ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ.ತಮಗೆ ನೀಡಬೇಕಿರುವ ಎಂಟು ಲಕ್ಷ ರೂಪಾಯಿಗಳನ್ನು ನೀಡದೇ ಶಿವಗಣಪತಿ ಅವರು ವಂಚನೆ ಮಾಡಿದ್ದು, ಚಿತ್ರದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕು ಎನ್ನುವುದು ಪೂಜಾ ವಾದ.ಇವರ ನಡುವಿನ ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಿನ್ನೆಲೆಯಲ್ಲಿ, ಅಲ್ಲಿ ಇತ್ಯರ್ಥಗೊಳ್ಳುವವರೆಗೆ ಚಿತ್ರ ಬಿಡುಗಡೆ ಮಾಡದಂತೆ ಆದೇಶಿಸಬೇಕು ಎನ್ನುವುದು ಅವರ ಕೋರಿಕೆ.ಕೋರ್ಟ್‌ಗೆ ಬುಧವಾರ ಖುದ್ದು ಹಾಜರು ಇದ್ದ ಶಿವಗಣಪತಿ ಅವರು, ಈ ಬಗ್ಗೆ ಪೂಜಾ ಜೊತೆ ಚರ್ಚಿಸಿ ಪರಸ್ಪರ ಒಪ್ಪಂದಕ್ಕೆ ಬರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಇದಕ್ಕೆ ಒಂದು ದಿನದ ಕಾಲಾವಕಾಶ ನೀಡಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.ಅರ್ಜಿಯ ವಿವರ: ಅರ್ಜಿಯಲ್ಲಿ ಪೂಜಾ ಗಾಂಧಿ, ‘ನೀನಿಲ್ಲದೇ ಚಿತ್ರಕ್ಕೆ 12 ಲಕ್ಷ ರೂಪಾಯಿ ಸಂಭಾವನೆಗೆ ನಮ್ಮಿಬ್ಬರ ನಡುವೆ 2010ರ ಜನವರಿ 9ರಂದು ಒಪ್ಪಂದ ನಡೆದಿತ್ತು. ಆ ಪ್ರಕಾರ, ಮೊದಲು ನಾಲ್ಕು ಲಕ್ಷ ರೂಪಾಯಿಗಳನ್ನು ನನಗೆ ನೀಡಲಾಗಿದೆ.ಚಿತ್ರೀಕರಣ ಮುಕ್ತಾಯಗೊಂಡ ಮೇಲೆ 4ಲಕ್ಷ ಹಾಗೂ ಚಿತ್ರ ಬಿಡುಗಡೆಗೊಂಡ ಮೇಲೆ ಉಳಿದ 4ಲಕ್ಷ ಮೊತ್ತವನ್ನು ನೀಡುವುದಾಗಿ ಶಿವಗಣಪತಿ ವಾಗ್ದಾನ ಮಾಡಿದ್ದರು. ಆದರೆ ಚಿತ್ರೀಕರಣ ಪೂರ್ಣಗೊಂಡರೂ ಹಣವನ್ನು ಇದುವರೆಗೆ ಕೊಟ್ಟಿಲ್ಲ.ಈ ಬಗ್ಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ದೂರಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇದೇ 18ರಂದು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ’ ಎಂದು ವಿವರಿಸಿದ್ದು, ಅಲ್ಲಿ ವಿವಾದ ಇತ್ಯರ್ಥಗೊಳ್ಳುವವರೆಗೆ ಚಿತ್ರದ ಬಿಡುಗಡೆ ಮಾಡದಂತೆ ಆದೇಶಿಸಬೇಕು ಎಂದು ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.