ಸೋಮವಾರ, ಮೇ 16, 2022
28 °C

ನಿರ್ಮಿತಿ ಕೇಂದ್ರದ ಮೂಲಕ ಸಾಮರ್ಥ್ಯ ಸೌಧ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಇಲ್ಲಿನ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಸಾಮರ್ಥ್ಯ ಸೌಧ’ ನಿರ್ಮಾಣ ಯೋಜನೆ ರದ್ದಾಗದಿರಲಿ ಎಂಬ ಕಾರಣಕ್ಕೆ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ನಿರ್ವಹಿಸಲು ಮಂಗಳವಾರ ನಡೆದ ವಿರಾಜಪೇಟೆ ತಾ.ಪಂ. ತುರ್ತು ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಜಿಲ್ಲೆಯ ವಿವಿಧೆಡೆ ನಿರ್ಮಿತಿ ಕೇಂದ್ರದ ಮೂಲಕ ನಿರ್ವಹಿಸುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂಬ ಕಾರಣಕ್ಕಾಗಿ ಇತ್ತೀಚೆಗಷ್ಟೇ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಮಿತಿ ಕೇಂದ್ರಕ್ಕೆ ನೀಡಿರುವ ಈ ಕಾಮಗಾರಿಯನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ತಾ.ಪಂ. ಅಧ್ಯಕ್ಷ ಎಚ್.ಕೆ. ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ವಿಷಯ ತೀವ್ರ ಚರ್ಚೆಗೆ ಗ್ರಾಸ ಒದಗಿಸಿತು. ಸಾಮಾನ್ಯ ಸಭೆಯಲ್ಲಿ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡದಿರಲು ನಿರ್ಣಯ ಕೈಗೊಂಡಿದ್ದರೂ ಮತ್ತೆ ಅದೇ ಸಂಸ್ಥೆಗೆ ಕಾಮಗಾರಿ ನೀಡುತ್ತಿರುವ ಹಿನ್ನೆಲೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರೆಡ್ಡಪ್ಪ ಅವರನ್ನು ಸರ್ವ ಸದಸ್ಯರು ತರಾಟೆಗೆ ತೆಗೆದುಕೊಂಡು ಸ್ಪಷ್ಟ ನೀಡುವಂತೆ ಒತ್ತಾಯಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆ ಮೇರೆಗೆ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಲು ನಿರ್ಧರಿಸಲಾಗಿದೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪ್ರಗತಿ ಬಗ್ಗೆ ವರದಿ ನೀಡಬೇಕಾಗಿದೆ. ಪ್ರಗತಿ ಕುಂಠಿತವಾದರೆ ಯೋಜನೆ ರದ್ದಾಗುವ ಸಾಧ್ಯತೆಯಿದೆ.ಈ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡಲು ಸಮ್ಮತಿ ಸೂಚಿಸಬೇಕಾಗಿದೆ. ಆ ಉದ್ದೇಶದಿಂದಲೇ ತುರ್ತು ಸಭೆ ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.ಸದಸ್ಯರಾದ ಅರುಣ್ ಭೀಮಯ್ಯ, ಟಾಟು ಮೊಣ್ಣಪ್ಪ, ದಯಾ ಚಂಗಪ್ಪ ಮಾತನಾಡಿ, ತಾ.ಪಂ. ಸದಸ್ಯರನ್ನು ಲಘುವಾಗಿ ಪರಿಗಣಿಸುವುದು ಸರಿಯಲ್ಲ. ನಮ್ಮ ಆಡಳಿತ ಅವಧಿಯಲ್ಲಿ ಈ ಯೋಜನೆ ರದ್ದಾಗುವುದು ಬೇಡ ಎಂಬ ಕಾರಣಕ್ಕಾಗಿ ಸಮ್ಮತಿ ಸೂಚಿಸುತ್ತಿದ್ದೇವೆ ಎಂದರು.ಈ ಮಧ್ಯೆ, ತಾಲ್ಲೂಕಿನಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸಿದ ನಂತರ ಬಿಲ್ ಪಾವತಿ ಮಾಡಲು ಸಭೆ ತೀರ್ಮಾನ ಕೈಗೊಂಡಿತು.ಇದಕ್ಕಾಗಿ ತಾ.ಪಂ. ಹಾಗೂ ಜಿ.ಪಂ. ಸಹಾಯಕ ಎಂಜಿನಿಯರ್‌ಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಗುಣಮಟ್ಟ ಪರಿಶೀಲನೆ ನಡೆಸಿದ ನಂತರ ಬಿಲ್ ಪಾವತಿಸಲು ನಿರ್ಣಯ ಕೈಗೊಳ್ಳಲಾಯಿತು. ತಪ್ಪಿದಲ್ಲಿ ಬಿಲ್ ರದ್ದು ಮಾಡಲು ತೀರ್ಮಾನಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.