ನಿರ್ಲಕ್ಷಿತ ಮುಖ್ಯರಸ್ತೆ: ಕಸದ್ದೇ ಸಮಸ್ಯೆ

7
ವಾರ್ಡ್ ಬೀಟ್ 8

ನಿರ್ಲಕ್ಷಿತ ಮುಖ್ಯರಸ್ತೆ: ಕಸದ್ದೇ ಸಮಸ್ಯೆ

Published:
Updated:
ನಿರ್ಲಕ್ಷಿತ ಮುಖ್ಯರಸ್ತೆ: ಕಸದ್ದೇ ಸಮಸ್ಯೆ

ಕೋಲಾರ: ನಗರದ 8ನೇ ವಾರ್ಡ್ ಬೆಂಕಿಪೊಟ್ಟಣದ ಆಕಾರದಲ್ಲಿ ಅಚ್ಚುಕಟ್ಟಾಗಿರುವ ಪುಟ್ಟ ಪ್ರದೇಶ. ಮೆಕ್ಕೆವೃತ್ತದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆವರೆಗೆ, ಅದೇ ವೃತ್ತದಿಂದ ಹಾದುಹೋಗುವ ಎಂ.ಬಿ.ರಸ್ತೆ, ಬೊಂಬೂಬಜಾರ್ ರಸ್ತೆ, ಗಲ್‌ಪೇಟೆಯ ಸ್ವಲ್ಪ ಭಾಗ, ಫೂಲ್‌ಷಾ ಮೊಹಲ್ಲಾದ ಸ್ವಲ್ಪ ಭಾಗ, ರಹಮತ್ ನಗರದ ರಾಜ ಕಾಲುವೆ ನಡುವೆ ಹರಡಿಕೊಂಡಿರುವ ಈ ವಾರ್ಡ್‌ನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ರಸ್ತೆ ದುರಸ್ತಿ, ಒಳಚರಂಡಿ ದುರಸ್ತಿಗಾಗಿ, ನೀರಿಗಾಗಿ ಆಗ್ರಹಿಸಿ ಈ ವಾರ್ಡ್‌ನಲ್ಲಿ ರಸ್ತೆತಡೆ, ಪ್ರತಿಭಟನೆ, ಧರಣಿಗಳು ನಡೆಯುತ್ತಲೇ ಇರುತ್ತವೆ. ಎಂ.ಬಿ.ರಸ್ತೆ ವಿಸ್ತರಣೆ ಸಂದರ್ಭದಲ್ಲಿಯೂ ವ್ಯಾಪಾರಿಗಳು ಒಳಚರಂಡಿ ದುರಸ್ತಿಗಾಗಿ ದಿಢೀರ್ ಪ್ರತಿಭಟನೆ ನಡೆಸಿದ್ದರು. ಅದೇ ರೀತಿ, ಮೆಕ್ಕೆವೃತ್ತದಿಂದ ಎಸ್‌ಪಿ ಮನೆವರೆಗಿನ ರಸ್ತೆ ದುರಸ್ತಿಗಾಗಿ ಆಗ್ರಹಿಸಿಯೂ ಹಲವು ಬಾರಿ ಜನ ರಸ್ತೆ ತಡೆ ಮಾಡಿದ್ದಾರೆ. ಹಲವು ಬಾರಿ ಈ ರಸ್ತೆಗೆ ಡಾಂಬರು ಹಾಕಿದ್ದರೂ ಕಳಪೆ ಕಾಮಗಾರಿಯ ಪರಿಣಾಮವಾಗಿ ಮತ್ತೆ ಹಳ್ಳಗಳು ಎದ್ದಿವೆ ಎಂದು ಜನ ದೂರುತ್ತಾರೆ.ವಿಪರ್ಯಾಸವೆಂದರೆ ವಾರ್ಡಿನ ವ್ಯಾಪ್ತಿಯ ಪೂರ್ವ ಮತ್ತು ಪಶ್ಚಿಮದ ಗಡಿಯ ಗುರುತಾಗಿರುವ ಬಂಬೂಬಜಾರ್ ಮತ್ತು ಮೆಕ್ಕೆವೃತ್ತದ ರಸ್ತೆಗಳು ಪೂರ್ಣ ನಿರ್ಲಕ್ಷ್ಯಕ್ಕೆ ಈಡಾಗಿವೆ. ಇದೇ ವೇಳೆ, ವಾರ್ಡಿನ ಒಳ ಪ್ರದೇಶಗಳಲ್ಲಿ ಬಹಳಷ್ಟು ರಸ್ತೆಗಳಿಗೆ ಕಾಂಕ್ರಿಟ್ ಹಾಕಲಾಗಿದೆ. ಕಾಮಗಾರಿಗಳು ನಡೆಯುತ್ತಿವೆ.ಹಲವು ವರ್ಷಗಳಿಂದ ಬಂಬೂಬಜಾರ್ ರಸ್ತೆಯು ಎಂಬಿ ರಸ್ತೆಯಿಂದ ಶ್ರೀನಿವಾಸಪುರ ಟೋಲ್‌ಗೇಟ್‌ವರೆಗೆ ಡಾಂಬರು ಕಂಡಿಲ್ಲ. ಇತ್ತೀಚೆಗಷ್ಟೆ ಈ ರಸ್ತೆಯಲ್ಲಿ ಚರಂಡಿ ನಿರ್ಮಾಣದ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ರಾಜಕಾಲುವೆ ಸೇತುವೆ ದುರಸ್ತಿಗೊಂಡರೂ ಸಂಚಾರಕ್ಕೆ ಯೋಗ್ಯವಾಗುವ ರೀತಿಯಲ್ಲಿ ಅದನ್ನು ಅಂತಿಮವಾಗಿ ಸಿದ್ಧಗೊಳಿಸಿಲ್ಲ. ಈ ಸೇತುವೆಯ ದುರಸ್ತಿ ಶುರುಮಾಡಿದ ದಿನವೇ ಜಿಲ್ಲಾಧಿಕಾರಿ ಕಚೇರಿ ಸಮೀಪದ ರಾಜಕಾಲುವೆ ಸೇತುವೆ ದುರಸ್ತಿ ಕಾಮಗಾರಿ ಶುರುವಾಗಿ ಕೆಲವೇ ತಿಂಗಳಲ್ಲಿ ಮುಗಿಯಿತು. ಆದರೆ ಬಂಬೂಬಜಾರ್ ರಸ್ತೆಯ ಸೇತುವೆ ಮಾತ್ರ ವರ್ಷಗಟ್ಟಲೆ ನಡೆಯುತ್ತಲೇ ಇದೆ. ಈ ರಸ್ತೆ ಡಾಂಬರು ಇನ್ನೂ ಯಾವಾಗ ಬರುವುದೋ ಎಂದು ಜನ ನಿರಾಶೆಯಿಂದ ಕೇಳುತ್ತಾರೆ.ವಾರ್ಡ್‌ನ ಪಶ್ಚಿಮ ದಿಕ್ಕಿನ ಗಡಿಯಾಗಿರುವ ಈ ರಸ್ತೆಯುದ್ದಕ್ಕೂ ಮೆಕ್ಯಾನಿಕ್‌ಗಳು, ಮರಗೆಲಸದವರು, ವ್ಯಾಪಾರಿಗಳು ಹೆಚ್ಚಿದ್ದಾರೆ. ಎರಡೂ ಬದಿಯಲ್ಲಿ ಲಾರಿಗಳಾದಿಯಾಗಿ ನಾಲ್ಕು ಚಕ್ರದ ವಾಹನಗಳು ಬೆಳಿಗ್ಗೆಯಿಂದ ರಾತ್ರಿವರೆಗೂ ನಿಂತಿರುತ್ತವೆ. ಕಸದ ರಾಶಿಯ ಪಕ್ಕದಲ್ಲೇ ಅಂಗಡಿಗಳಿವೆ. ಸದಾ ಧೂಳು ಆವರಿಸಿರುತ್ತದೆ. ನಗರಸಭೆಯ ಈ ಭಾಗದ ಪ್ರತಿನಿಧಿ ಜ್ಯೋತಿಯವರು ಬಂಬೂಬಜಾರ್‌ನ ನಿವಾಸಿಯಾಗಿದ್ದರೂ ರಸ್ತೆ ಉತ್ತಮಗೊಂಡಿಲ್ಲ ಎಂಬುದು ಜನರ ದೂರು.ವಾರ್ಡ್‌ನ ಪೂರ್ವಭಾಗದ ಗಡಿಯಾದ ಮೆಕ್ಕೆವೃತ್ತದಿಂದ ಎಸ್‌ಪಿ ಮನೆವರೆಗಿನ ಹೆದ್ದಾರಿ ನಿರ್ಲಕ್ಷ್ಯಕ್ಕೆ ಈಡಾದ ಮನೆಮಗನಂತೆ ಕಾಣುತ್ತಿದೆ. ಕಳೆದ ವರ್ಷ ಹಲವು ಬಾರಿ ಈ ರಸ್ತೆಯ ದುರಸ್ತಿಗಾಗಿ ಜನ ರಸ್ತೆಗಿಳಿದು ಪ್ರತಿಭಟಿಸಿದ್ದರು. ಡಾಂಬರೂ ಹಾಕಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಡಾಂಬರು ಕಿತ್ತು ಬಂದು ಹಳ್ಳಗಳು ಕಾಣಿಸಿಕೊಂಡಿವೆ. ಅತ್ತ ಲೋಕೋಪಯೋಗಿ ಇಲಾಖೆಯವರು ಈ ಸಮಸ್ಯೆ ಬಗ್ಗೆ ಕಾಳಜಿ ವಹಿಸಿಲ್ಲ. ವಾರ್ಡಿನ ಪ್ರತಿನಿಧಿಯೂ ಗಮನ ಹರಿಸಿರಿಲ್ಲ ಎನ್ನುತ್ತಾರೆ ನಿವಾಸಿಗಳು.ನೀರಿನ ಸಮಸ್ಯೆ ಅಷ್ಟೇನಿಲ್ಲ ಎಂಬುದು ಹಲವರ ಅಭಿಪ್ರಾಯ. ಆದರೆ ಸ್ವಚ್ಛತೆ ವಿಷಯಕ್ಕೆ ಬಂದರೆ ಅವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಕಸ ವಿಲೇವಾರಿ ಮತ್ತು ಚರಂಡಿ ಸ್ವಚ್ಛತೆಯದ್ದೇ ಸಮಸ್ಯೆ ಎನ್ನುತ್ತಾರೆ. ಈ ಸಮಸ್ಯೆ ಬಂಬೂಬಜಾರ್ ರಸ್ತೆ, ಕಾಕಿಶಾ ಮೊಹಲ್ಲಾದಲ್ಲಿ ಎದ್ದು ಕಾಣುತ್ತದೆ. ಸ್ವಚ್ಛತೆ ವಿಷಯದಲ್ಲಿ ಗಲ್‌ಪೇಟೆ ಅದೃಷ್ಟಶಾಲಿಯಂತೆ ಕಾಣುತ್ತದೆ. ಇಲ್ಲಿನ ಬಹುತೇಕ ರಸ್ತೆಗಳಿಗೆ ಕಾಂಕ್ರಿಟ್ ಹಾಕಲಾಗಿದೆ. ರಸ್ತೆಗಳು ಸ್ವಚ್ಛವಾಗಿ ಕಾಣುತ್ತವೆ. ಗಲ್‌ಪೇಟೆಯಿಂದ ಬಂಬೂಬಜಾರಿನ ಕಡೆಗೆ ಬರತೊಡಗಿದರೆ ಸ್ವಚ್ಛತೆ ಕಾಣೆಯಾಗುತ್ತಾ ಹೋಗುತ್ತದೆ.ನಗರದ ರಾಜಕಾಲುವೆಯ ಮೇಲೆ ಸೇತುವೆ ನಿರ್ಮಾಣವಾಗಿದ್ದರೂ ಜನ ಸಂಚಾರಕ್ಕೆ ಅನುಕೂಲಕರವಾಗಿ ಅಂತಿಮಗೊಳಿಸಿಲ್ಲ. ಅಲ್ಲದೆ, ಕಾಲುವೆಯ ಉದ್ದಕ್ಕೂ ಚರಂಡಿ ನೀರು ಹರಿದು ದುರ್ವಾಸನೆ ಹರಡುತ್ತಿದೆ. ಕಾಲುವೆ ಅಂಚಿನಲ್ಲೇ ಸರ್ಕಾರಿ ಶಾಲೆಯೊಂದಿದ್ದು, ಮಳೆ ನೀರು ಶಾಲೆಗೆ ನುಗ್ಗುವುದು ಸಾಮಾನ್ಯ ದೃಶ್ಯ. ನಗರಸಭೆ ಸದಸ್ಯೆ ಜ್ಯೋತಿಯವರು ಸಂಪರ್ಕಕಕ್ಕೆ ಸಿಗಲಿಲ್ಲ.ವಿಲೇವಾರಿ ಸರಿಯಿಲ್ಲ

ನೀರಿನ ಸಮಸ್ಯೆ ಏನಿಲ್ಲ. ಆದರೆ ಕಸ ವಿಲೇವಾರಿ ಸಮರ್ಪಕವಾಗಿಲ್ಲ. ಕಸವನ್ನು ಸಾಗಿಸುವವರು ನಿಯಮಿತವಾಗಿ ಕೆಲಸ ಮಾಡುತ್ತಿಲ್ಲ.

-ಮುನಿಶಾಮಪ್ಪ, ಗಲ್‌ಪೇಟೆ

ಸ್ವಚ್ಛತೆ ಬೇಕು

ರಸ್ತೆಗಳು ಉತ್ತಮವಾಗಿವೆ. ಮನೆಯಲ್ಲೇ ಬಾವಿ ಇರುವುದರಿಂದ ನೀರಿನ ಸಮಸ್ಯೆ ಕಂಡುಬಂದಿಲ್ಲ. ಕಸ ವಿಲೇವಾರಿ ಮಾಡುವವರು ಸಮರ್ಪಕವಾಗಿ ಕೆಲಸ ಮಾಡಿದರೆ ವಾತಾವರಣ ಇನ್ನಷ್ಟು ಸ್ವಚ್ಛತೆಯಿಂದ ಕೂಡಿರುತ್ತದೆ.

-ಜಯಲಕ್ಷ್ಮಿ, ಗಲ್‌ಪೇಟೆರಸ್ತೆ ಇಕ್ಕಟ್ಟು


ಎರಡು ದಿನಕ್ಕೊಮ್ಮೆ ನೀರು ಬರುತ್ತದೆ. ಬಂಬೂಬಜಾರ್ ರಸ್ತೆಯಲ್ಲಿ ಚಿಕ್ಕ ಮಕ್ಕಳು, ಮುದುಕರು ಓಡಾಡಲಾಗದ ಸ್ಥಿತಿ ಇದೆ. ರಸ್ತೆಯ ಎರಡೂ ಬದಿ ದೊಡ್ಡ ವಾಹನಗಳನ್ನು ನಿಲ್ಲಿಸುವುದರಿಂದ ರಸ್ತೆ ಇಕ್ಕಟ್ಟಿನಿಂದ ಕೂಡಿರುತ್ತದೆ. ಇದನ್ನು ಸರಿಪಡಿಸಬೇಕು.

-ಸಿರಾಜ್, ಬಂಬೂಬಜಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry