ಮಂಗಳವಾರ, ಏಪ್ರಿಲ್ 20, 2021
32 °C

ನಿರ್ಲಕ್ಷ್ಯ: ಅಕ್ರಮ ಭೂ ಬಾಡಿಗೆ ವಸೂಲಿ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ(ಮುದಗಲ್ಲ): ತಾಲ್ಲೂಕಿನ ಐತಿಹಾಸಿಕ ಮುದಗಲ್ಲ ಮೊಹರಂ ಹಬ್ಬದ ಆಚರಣೆಗೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ನೂರಾರು ಅಂಗಡಿಗಳ ಮಾಲೀಕರು ವ್ಯಾಪಾರಕ್ಕೆಂದು ಬರುತ್ತಾರೆ. ಪಟ್ಟಣ ಪಂಚಾಯಿತಿ ಭೂ ಬಾಡಿಗೆ ವಸೂಲಿ ಮಾಡುವುದು ವಾಡಿಕೆ. ಆದರೆ, ಪ್ರಸಕ್ತ ವರ್ಷ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯದಿಂದ ಗುತ್ತಿಗೆದಾರರು ಅಕ್ರಮ ಭೂ ಬಾಡಿಗೆ ವಸೂಲಿ ಮಾಡುವ ಜೊತೆಗೆ ಹಬ್ಬದ ಅಂದ ಚೆಂದಕ್ಕೆ ಕಪ್ಪುಚುಕ್ಕೆ ಇಟ್ಟಿರುವುದು ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.ಮೊಹರಂ ಕಡೆಯ ದಿನದ ದಫನ್ ಆಚರಣೆಯಂದು ಮುದಗಲ್ಲ ಕೋಟೆ ಹೊರಭಾಗದ ಕಂದಕದ ಬಳಿ ನಡೆಯುವ ಹಸೇನ-ಹುಸೇನ ದೇವರ ಪರಸ್ಪರ ಭೇಟಿ ವೀಕ್ಷಣೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಭಾರಿ ವ್ಯಾಪಾರ ವಹಿವಾಟು ನಡೆಯುತ್ತದೆ. ಮೊಹರಂ ಒಂಭತ್ತನೆ ದಿನದಿಂದ ಕನಿಷ್ಠ 15 ದಿನಗಳ ಕಾಲ ಕವಡಿಪೀರ ದೇವರ ದಫನ್ ವರೆಗೆ ಅಂಗಡಿ ಮುಗ್ಗಟ್ಟುಗಳು ಇರುತ್ತವೆ. ಈ ಬಾರಿ ಮನಸೋ ಇಚ್ಛೆ ಅಂಗಡಿ ಹಾಕಿಕೊಂಡಿದ್ದರಿಂದ ಅಸ್ತವ್ಯಸ್ತತೆ ಹೆಚ್ಚಾಗಿ ಭಕ್ತರು ಹಿಡಿಶಾಪ ಹಾಕುತ್ತ ತೆರಳಿದರು.ಯಾವುದೇ ಕಟ್ಟಡ ಅಥವಾ ಎತ್ತರದ ಪ್ರದೇಶಗಳಲ್ಲಿ ದೇವರ ದರ್ಶನ ಮಾಡಲು ಮುಂದಾದ ಭಕ್ತರಿಗೆ ಎಲ್ಲೆಂದರೆಲ್ಲಿ ಹಾಕಿರುವ ಅಂಗಡಿಗಳು ಅಡ್ಡಿಯಾಗಿದ್ದವು. ಅಳತೆ ಮೀರಿ, ಕಟ್ಟಡಗಳಷ್ಟು ಎತ್ತರ ಟೆಂಟ್ ಹಾಕಿರುವ ಬಗ್ಗೆ ಸಾಕಷ್ಟು ಭಕ್ತರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಗಮನ ಸೆಳೆದರು ಕೂಡ ಕ್ಯಾರೆ ಎನ್ನದೆ ಹೋಗಿರುವುದು ಇಂತಹ ಅವ್ಯವಸ್ಥೆಗೆ ಕಾರಣವಾಗಿದೆ. ಅಲ್ಲದೆ, ನಿಗದಿತ ಭೂ ಬಾಡಿಗೆಗಿಂತ 15 ರಿಂದ 20ಪಟ್ಟು ಹೆಚ್ಚು ವಸೂಲಿ ಮಾಡಿರುವುದು ಬಹಿರಂಗವಾಗಿದೆ.ಟೆಂಡರ್‌ದಾರರು ಸಣ್ಣ ಪುಟ್ಟ ಅಂಗಡಿಗಳಿಗೆ 200 ರಿಂದ ದೊಡ್ಡ ಅಂಗಡಿಗಳೆಂದು ರೂ. 12000 ವರೆಗೆ ವಸೂಲಿ ಮಾಡಿದ ರಸೀದಿ ಹಿಡಿದು ಗುರುವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿದ ಮಾಲೀಕರು ಟೆಂಡರ್ ಮಾಡಿದ ದರದ ಪಟ್ಟಿ ನೀಡುವಂತೆ ಆಗ್ರಹಪಡಿಸಿದರು. ಟೆಂಡರ್ ಪ್ರಕಾರ ರೂ. 50 ರಿಂದ 400 ವರೆಗೆ ಭೂ ಬಾಡಿಗೆ ವಸೂಲಿ ಮಾಡಲು ಆದೇಶ ನೀಡಲಾಗಿದೆ. ಆದರೆ, ಗುತ್ತಿಗೆದಾರರು 400 ರಿಂದ 12000ವರೆಗೆ ವಸೂಲಿ ಮಾಡಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ ಪ್ರಸಂಗ ಜರುಗಿತು.ಪಟ್ಟಣ ಪಂಚಾಯಿತಿಗೆ ರಸೀದಿ ಹಿಡಿದು ಬಂದಿರುವ ಮಾಲೀಕರನ್ನು ವಿಚಾರಣೆ ನಡೆಸಿದ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಗುತ್ತಿಗೆದಾರರ ಜೊತೆ ವಿಚಾರಣೆ ಮಾಡಿ ಇಷ್ಟೊಂದು ಹಣ ಸ್ವೀಕರಿಸಿದ್ದರೆ ವಾಪಸ್ಸು ಕೊಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವ್ಯಾಪಾರಿಗಳಾದ ಮುಸ್ತಫಾ, ಅಬೀಬ, ಮಹ್ಮದ ಜುಬೇರ, ಅಲ್ಫದಾ, ದಾವಲಸಾಬ, ಮಾರುತಿ ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.