ಗುರುವಾರ , ಜೂನ್ 24, 2021
24 °C

ನಿರ್ಲಕ್ಷ್ಯ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯದ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಐವರು ಕಾರ್ಮಿಕರು ತೈಲ ಸಂಸ್ಕರಣಾ ಘಟಕದ ಕುಲುಮೆ­ಯಲ್ಲಿ ಇಳಿದು ಉಸಿರುಕಟ್ಟಿ ಸತ್ತ ಘಟನೆ ಅಪಾಯಕಾರಿ ಕೈಗಾರಿಕೆಗಳಲ್ಲಿನ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಮತ್ತೆ ಆಲೋಚಿಸುವಂತೆ ಮಾಡಿದೆ. ವಿಷಯುಕ್ತ ಅನಿಲ ಸೇವನೆಯಿಂದ ಸಾವನ್ನಪ್ಪುವ ಪ್ರಸಂಗಗಳು ಪದೇ ಪದೇ ನಡೆಯು­ತ್ತಿವೆ.ಒಳಚರಂಡಿ ಮ್ಯಾನ್‌ಹೋಲ್‌ಗಳಲ್ಲಿ ದುರಸ್ತಿಗಾಗಿ ಇಳಿಯುವವರು, ಶೌಚಾಲಯ ಅಥವಾ ತ್ಯಾಜ್ಯ ನೀರಿನ ಗುಂಡಿಗಳನ್ನು ಖಾಲಿ ಮಾಡಲು ಮುಂದಾಗುವ ಪೌರಕಾರ್ಮಿಕರು, ಕಾರ್ಖಾನೆಗಳ ಬಾಯ್ಲರ್ ಮತ್ತು ಕುಲುಮೆ ಸ್ವಚ್ಛಗೊಳಿಸುವವರೇ ಹೆಚ್ಚಾಗಿ ಪ್ರಾಣಾಪಾಯಕ್ಕೆ ಒಳಗಾಗು­ತ್ತಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ನಗರಗಳಲ್ಲಿ ಒಳಚ­ರಂಡಿ ಗುಂಡಿಗೆ ಇಳಿದು ವಿಷಗಾಳಿಯಿಂದ ಉಸಿರುಕಟ್ಟಿ ಸತ್ತ ಅನೇಕ ಘಟನೆ­ಗಳು ವರದಿಯಾಗಿವೆ.ತಂತ್ರಜ್ಞಾನ ಇಷ್ಟೊಂದು ಮುಂದುವರಿ­ದಿರುವ ಕಾಲ­ದಲ್ಲಿಯೇ ಈ ರೀತಿಯ ದುರ್ಘಟನೆಗಳು ನಡೆಯುವುದು ನಿಜವಾಗಿಯೂ ಆಘಾತಕಾರಿ. ಇದರಲ್ಲಿ ನಿರ್ಲಕ್ಷ್ಯ, ಸಾಮಾನ್ಯ ತಿಳಿವಳಿಕೆಯ ಕೊರತೆ ಎದ್ದು ಕಾಣು­ತ್ತದೆ. ಇಂಥ ವಿಷಯಗಳಲ್ಲಿ ನಮ್ಮ ಹಿರಿಯರು ನಮ­ಗಿಂತ ಹೆಚ್ಚು ಬುದ್ಧಿ­ವಂತರಾಗಿದ್ದರು. ಅದಕ್ಕೆ ಉದಾಹರಣೆ ಎಂದರೆ, ಆಗೆಲ್ಲ ಹಳೆಯ ಬಾವಿಗಳಲ್ಲಿ, ಬೆಳೆದ ಆಹಾರ ಧಾನ್ಯ ಸಂಗ್ರಹಿಸಿಟ್ಟ ಹಗೇವು ಅಥವಾ ಕಣಜದಲ್ಲಿ ಇಳಿಯುವ ಮುನ್ನ ದೀಪ ಬಿಟ್ಟು ನೋಡುವ ಪರಿಪಾಠ ಇತ್ತು. ದೀಪ ಆರಿದರೆ ಒಳಗೆ ಇಳಿಯುತ್ತಲೇ ಇರಲಿಲ್ಲ. ದೀಪ ನಂದದೇ ಇರುವ ತನಕವೂ ಕಾಯುತ್ತಿದ್ದರು. ಏಕೆಂದರೆ ಒಳಗೆ ಆಮ್ಲಜನಕದ ಕೊರತೆಯಿದ್ದು, ಇಳಿಯುವುದು ಪ್ರಾಣಕ್ಕೇ ಕುತ್ತು ತರಬಲ್ಲದು ಎಂಬ ಜ್ಞಾನ ಅವರಿಗಿತ್ತು. ಆದರೆ ಈಗ ಕಾರಣಗಳು ಗೊತ್ತಿದ್ದೂ ಸಾವನ್ನು ನಾವಾಗಿಯೇ ಬರಮಾಡಿಕೊಳ್ಳುತ್ತಿದ್ದೇವೆ.ಇಂಥ ದುರ್ಘಟನೆಗಳಲ್ಲಿ ಹಣದ ಆಮಿಷ ತೋರಿಸಿ ಅಪಾಯಕಾರಿ ಕೆಲಸಕ್ಕೆ ತಳ್ಳುವ ಮನೋಭಾವದ ಜತೆಗೆ ಸುರಕ್ಷತೆ ಬಗ್ಗೆ ತಾತ್ಸಾರವೂ ಎದ್ದು ಕಾಣುತ್ತದೆ. ಕೈಗಾರಿಕೆಗಳಲ್ಲಿ ಅವಘಡಗಳನ್ನು ತಡೆಯಲು ಸುರಕ್ಷತೆ ಬಗ್ಗೆ ತರಬೇತಿ ನೀಡುವ ವ್ಯವಸ್ಥೆಯಿದೆ, ಇದರ ಮೇಲೆ ನಿಗಾ ವಹಿಸಲು ಪ್ರತ್ಯೇಕ ಇಲಾಖೆಯೇ ಇದೆ. ಇಷ್ಟೆಲ್ಲ ಇದ್ದರೂ ಸಾವುನೋವು ತಪ್ಪುತ್ತಿಲ್ಲ. ಅಂದರೆ ತರಬೇತಿ, ನಿಗಾ ಎರಡೂ ಸರಿಯಾಗಿ ಆಗುತ್ತಿಲ್ಲ ಎಂದೇ ಅರ್ಥ. ಮಂಡ್ಯ ಘಟನೆಯಲ್ಲಿ ಕೂಡ, ಕುಲುಮೆಯಲ್ಲಿ ಮೊದಲಿಗೆ ಇಳಿದ ಇಬ್ಬರು ಮೇಲೆ ಬರದೇ ಇದ್ದಾಗ ಮತ್ತೆ ಮೂವರನ್ನು ಇಳಿಸುವುದು ಅಪಾಯಕಾರಿ ಎಂಬ ತಿಳಿವಳಿಕೆ ಕಾರ್ಖಾನೆಯ ಮೇಲ್ವಿಚಾರಕರಿಗೆ ಇರಬೇಕಾಗಿತ್ತು.ಮೃತಪಟ್ಟ ಐವರಲ್ಲಿ ನಾಲ್ವರು ೨೫ರ ಆಸುಪಾಸಿನ ಯುವಕರು, ದೂರದ ಮಧ್ಯಪ್ರದೇಶ ಮತ್ತು ಬಿಹಾರದವರು. ಬದುಕಿನ ಕನಸು ಹೊತ್ತು ಬಂದು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈಗೇನೋ ಕಾರ್ಖಾನೆಯ ಮಾಲೀಕರು ಮತ್ತು ಸಂಬಂಧಪಟ್ಟವರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಇದು ಕಾನೂನು ಪ್ರಕಾರ ನಡೆಯಲೇಬೇಕಾದ ಕ್ರಮ ಮಾತ್ರ. ಇದರ ಜತೆಗೆ ಅಪಾಯಕಾರಿ ಘಟಕಗಳ ಕಾರ್ಮಿಕರಲ್ಲಿ, ಮೇಲ್ವಿಚಾರಣಾ ಸಿಬ್ಬಂದಿಯಲ್ಲಿ ಸುರಕ್ಷತೆ ಬಗ್ಗೆ ಜಾಗೃತಿ ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ. ಈ ವಿಷಯದಲ್ಲಿನ ಲೋಪವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.