ಮಂಗಳವಾರ, ಮೇ 11, 2021
25 °C

ನಿರ್ವಹಣೆಯ ವೈಫಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ ಪರಿಸ್ಥಿತಿಯನ್ನು ನಿರ್ವಹಿಸುವುದರಲ್ಲಿ ಮಾತ್ರವಲ್ಲದೆ, ಇರುವ ನೀರನ್ನು ಬಳಸುವುದರಲ್ಲಿಯೂ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸುತ್ತಿಲ್ಲ ಎಂಬುದಕ್ಕೆ ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್) ಸ್ಥಗಿತಗೊಳ್ಳುವಂಥ ಪರಿಸ್ಥಿತಿ ಈಗ ನಿರ್ಮಾಣವಾಗಿರುವುದು ನಿದರ್ಶನವಾಗಿದೆ.ರಾಜ್ಯದಲ್ಲಿ ಮುಂಗಾರು ಮಾತ್ರವಲ್ಲದೆ, ಹಿಂಗಾರು ಮಳೆ ಕೂಡ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿನ ನೀರಿನ ವ್ಯವಸ್ಥಿತ ಬಳಕೆ ಅತ್ಯವಶ್ಯಕವಾಗಿತ್ತು. ಅದರಲ್ಲಿಯೂ ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಶೇ 40ರಷ್ಟನ್ನು ಪೂರೈಸುತ್ತಿರುವ ಆರ್‌ಟಿಪಿಎಸ್‌ಗೆ ಬೇಸಿಗೆಯಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುವ ಎಚ್ಚರಿಕೆ ವಹಿಸಬೇಕಿತ್ತು.ಆಲಮಟ್ಟಿಯಲ್ಲಿನ ನೀರಿನ ಸಂಗ್ರಹ ಮುಂದಿನ ಮುಂಗಾರು ಋತುವಿನವರೆಗೆ ಅಬಾಧಿತವಾಗಿ ಆರ್‌ಟಿಪಿಎಸ್‌ಗೆ ಲಭ್ಯವಾಗುವಂತೆ ನೋಡಿಕೊಳ್ಳದ ಪರಿಣಾಮ ಈಗ ರಾಜ್ಯದ ವಿದ್ಯುತ್ ಉತ್ಪಾದನೆಯ ಮೇಲೆ ಆಗಿದೆ.ಇದು ನೀರಿನ ಸಮರ್ಪಕ ನಿರ್ವಹಣೆಯಲ್ಲಿನ ಲೋಪ. ನಾರಾಯಣಪುರದಿಂದ ಬಿಟ್ಟ ನೀರನ್ನು ನದಿ ಪಾತ್ರದ ಜನ ಪಂಪ್‌ಸೆಟ್ ಮೂಲಕ ಬಳಸಿಕೊಳ್ಳದಂತೆ ಈ ಮೊದಲೇ ಕಟ್ಟುನಿಟ್ಟು ಕ್ರಮ ಕೈಗೊಳ್ಳಬೇಕಿತ್ತು. ಈಗ ಪಂಪ್‌ಸೆಟ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಅದು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ.ಇದೇ ಈಗಿನ ಗಂಭೀರ ಪರಿಸ್ಥಿತಿಗೆ ಕಾರಣ. ತೀವ್ರ ಕೊರತೆಯ ಸಂದರ್ಭದಲ್ಲಿ ಜನರ ಅವಶ್ಯಕತೆ ಮತ್ತು ವಿದ್ಯುತ್ ಉತ್ಪಾದನೆಗೆ ಕೊರತೆ ಬಾರದಂತೆ ನೋಡಿಕೊಳ್ಳುವ ಮುಂಜಾಗ್ರತೆಯನ್ನು ಸರ್ಕಾರ ವಹಿಸಬೇಕಿತ್ತು.ಕೃಷ್ಣಾ ಕಣಿವೆಯಲ್ಲಿ ಉಂಟಾಗಿರುವ ನೀರಿನ ಕೊರತೆ ನಿವಾರಣೆಗೆ ಮಹಾರಾಷ್ಟ್ರದಿಂದ ನೀರನ್ನು ಹಣ ಕೊಟ್ಟು ಕೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ. ಇದು ಮಹಾರಾಷ್ಟ್ರದ ಸ್ಥಳೀಯ ರಾಜಕೀಯ ಲೆಕ್ಕಾಚಾರದ ಕಾರಣದಿಂದ ವಿಳಂಬವಾಗುತ್ತಿರುವುದು ವಿಷಾದಕರ.ಕುಡಿಯುವ ನೀರಿಗೆ ಕಲ್ಲು ಹಾಕುವಂಥ ಅಮಾನವೀಯ ನಡವಳಿಕೆಯನ್ನು ಶಿವಸೇನೆಯ ನಾಯಕ ಬಾಳಾ ಠಾಕ್ರೆ ಪ್ರದರ್ಶಿಸಿದ್ದರೂ ಮಹಾರಾಷ್ಟ್ರ ಸರ್ಕಾರ ಅದಕ್ಕೆ ಗಮನ ಕೊಡದೆ ನೀರು ಪೂರೈಸಲು ಮುಂದಾಗಿರುವುದು ಶ್ಲಾಘನೀಯ. ರಾಜ್ಯವು ಐದು ಟಿಎಂಸಿ ನೀರಿಗೆ ಬೇಡಿಕೆ ಸಲ್ಲಿಸಿದ್ದರೂ ಮಹಾರಾಷ್ಟ್ರ ಕೇವಲ ಎರಡು ಟಿಎಂಸಿ ನೀರು ಪೂರೈಸಲು ಒಪ್ಪಿಗೆ ಸೂಚಿಸಿದೆ.ಇದು ಆದಷ್ಟು ಬೇಗ ಪೂರೈಕೆಯಾಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳುವುದು ಅಗತ್ಯ. ಜಲಾಶಯಗಳ ನೀರಿನ ಸಮರ್ಪಕ ಬಳಕೆಯಲ್ಲಿ ನೀರಾವರಿ ಇಲಾಖೆಗೆ ಒಳ್ಳೆಯ ಹೆಸರಿಲ್ಲ. ನೀರಿಗೆ ಕೊರತೆ ಇದ್ದಾಗ ಹೆಚ್ಚು ನೀರು ಅಗತ್ಯವಿರುವ ವಾಣಿಜ್ಯ ಬೆಳೆಗಳನ್ನು ಹಾಕಬಾರದೆಂದು ರೈತರ ಮನವೊಲಿಸುವ ಪ್ರಯತ್ನಗಳು ಜಿಲ್ಲಾಡಳಿತಗಳಿಂದ ಆಗುತ್ತಿಲ್ಲ.ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿದ ಪ್ರದೇಶಗಳಲ್ಲಿ ವಾರಾಬಂದಿ ಪದ್ಧತಿಯನ್ನು ಜಾರಿಗೊಳಿಸುವ ಪರಿಪಾಠ ಅನುಷ್ಠಾನದಲ್ಲಿಲ್ಲ. ನೀರಿನ ಬಳಕೆಯನ್ನು ನಿಯಂತ್ರಿಸುವುದಕ್ಕೆ ಪ್ರದೇಶವಾರು ಅಚ್ಚುಕಟ್ಟು ಸಮಿತಿಗಳನ್ನು ಅಸ್ತಿತ್ವಕ್ಕೆ ತಂದಿದ್ದರೂ ಅವೆಲ್ಲ ಆಡಳಿತ ಪಕ್ಷಗಳ ಕಾರ್ಯಕರ್ತರ ಗಂಜಿಕೇಂದ್ರಗಳಾಗಿ ಪರಿವರ್ತನೆಯಾಗಿರುವುದು ಹೊಸದೇನೂ ಅಲ್ಲ.ಕಾಲುವೆ ನೀರಿನ ಬಳಕೆ ಶ್ರೀಮಂತ ರೈತರ ಮರ್ಜಿಗೆ ಅನುಗುಣವಾಗಿ ನಿರ್ಧಾರವಾಗುವ ಪರಿಪಾಠ ಬದಲಾಗಿಲ್ಲ. ನೀರಿನ ಸಂಗ್ರಹವನ್ನು ಆಧರಿಸಿ ಬೆಳೆ ಪದ್ಧತಿಯನ್ನು ನಿರ್ಧರಿಸುವುದು ಮತ್ತು ಅದನ್ನು ಸಮರ್ಪಕವಾಗಿ, ಪಕ್ಷಪಾತಕ್ಕೆ ಆಸ್ಪದ ಇಲ್ಲದಂತೆ ಜಾರಿಗೊಳಿಸುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.