ನಿರ್ವಿಘ್ನವಾಗಿ ನೆರವೇರಿದ ಮೆರವಣಿಗೆ

7

ನಿರ್ವಿಘ್ನವಾಗಿ ನೆರವೇರಿದ ಮೆರವಣಿಗೆ

Published:
Updated:
ನಿರ್ವಿಘ್ನವಾಗಿ ನೆರವೇರಿದ ಮೆರವಣಿಗೆ

ಬೆಳಗಾವಿ: ನಗರದಲ್ಲಿ ಶನಿವಾರ ಸಂಜೆ ಆರಂಭವಾದ ಸಾರ್ವಜನಿಕ ಗಣೇಶ ಮೂರ್ತಿಗಳ ಭವ್ಯ ಮೆರವಣಿಗೆಯು ಸಾವಿರಾರು ಜನರ ಸಂಭ್ರಮದ ನಡುವೆ ನಿರಂತರವಾಗಿ 19 ಗಂಟೆಗಳ ಕಾಲ `ನಿರ್ವಿಘ್ನ~ವಾಗಿ ನಡೆಯಿತು.ನಗರದಲ್ಲಿ ಕಳೆದ ತಿಂಗಳಿನಲ್ಲಿ ನಡೆದ ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಗಣೇಶ ಮೆರವಣಿಗೆಯಲ್ಲಿ `ಗದ್ದಲ~ ಸಂಭವಿಸಬಹುದು ಎಂಬ ಭೀತಿಯನ್ನು `ವಿಘ್ನನಿವಾರಕ~ ಹುಸಿಗೊಳಿಸಿದ್ದಾನೆ. ಯಾವುದೇ `ಗಲಾಟೆ~ಗೆ ಅವಕಾಶ ನೀಡದ ಗಣೇಶ, ಭಕ್ತರನ್ನು ಕರುಣಿಸಿ ಸಂಭ್ರಮದಿಂದ ವಿದಾಯ ಹೇಳಿದ್ದಾನೆ.ಕಳೆದ ಹನ್ನೊಂದು ದಿನಗಳಿಂದ ಗಣೇಶನ ಹಬ್ಬದ ಸಂಭ್ರಮದಿಂದ ಹಗಲು- ರಾತ್ರಿ ಎನ್ನದೇ ಕಂಗೊಳಿಸುತ್ತಿದ್ದ ನಗರವು ಭಾನುವಾರ ಮಧ್ಯಾಹ್ನದಿಂದ ನಿದ್ದೆಗೆ ಜಾರಿತು. ನಗರದ ಬಡಾವಣೆಗಳಲ್ಲಿನ ಸಾರ್ವಜನಿಕ ಗಣೇಶ ಮಂಡಳಗಳ ನಿರ್ಮಿಸಿದ್ದ ಮಂಟಪಗಳಿಂದ ತೇಲಿ ಬರುತ್ತಿದ್ದ `ಏಕದಂತ~ನ ಹಾಡುಗಳು ಸ್ತಬ್ಧಗೊಂಡಿದ್ದು, ಇದೀಗ ನೀರವ ಮೌನ ನೆಲೆಸಿದೆ.ಶನಿವಾರ ಸಂಜೆ ನಾಲ್ಕು ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ ಆರಂಭವಾದ ಸಾರ್ವಜನಿಕ ಗಣೇಶ ಮೂರ್ತಿಗಳ ಅದ್ದೂರಿ ಮೆರವಣಿಗೆಯು ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಯವರೆಗೂ ನಡೆಯಿತು.ಕಪಿಲೇಶ್ವರ ಹೊಂಡದಲ್ಲಿ ಬೆಳಿಗ್ಗೆ 11 ಗಂಟೆ ಸಮೀಪ ಚವಾಟ ಗಲ್ಲಿ ಹಾಗೂ ಖಡಕ್ ಗಲ್ಲಿಯ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಆಗುವ ಮೂಲಕ ಸುಮಾರು 19 ಗಂಟೆಗಳ ಕಾಲ ನಡೆದ ಭವ್ಯ ಮೆರವಣಿಗೆಗೆ ತೆರೆ ಎಳೆಯಲಾಯಿತು. ಸಾರ್ವಜನಿಕ ಗಣೇಶ ವಿಸರ್ಜನೆಗಾಗಿ ಈ ಬಾರಿ ಕಪಿಲೇಶ್ವರ ಮಂದಿರದ ಬಳಿ ನೂತನ ಹೊಂಡವನ್ನು ನಿರ್ಮಿಸಲಾಗಿದ್ದರೂ, ಈ ಹಿಂದಿನಂತೆ ಮರುದಿನದವರೆಗೂ ವಿಸರ್ಜನಾ ಮೆರವಣಿಗೆ ನಡೆಯಿತು.ಶನಿವಾರ ರಾತ್ರಿ ನಡೆದ ಮುಖ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಹಾಕುತ್ತಿದ್ದ `ಗಣಪತಿ ಬಪ್ಪ ಮೋರಯ, ಮಂಗಲ ಮೂರುತಿ ಮೋರಯ~ ಜಯಘೋಷ ಮುಗಿಲು ಮುಟ್ಟಿತ್ತು. ಡಾಲ್ಬಿ ಸ್ಪೀಕರ್‌ನಿಂದ ತೇಲಿ ಬರುತ್ತಿದ್ದ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದ ಭಕ್ತರ ಕುಣಿತವನ್ನು ಕಣ್ತುಂಬಿಕೊಳ್ಳಲು ನಡುರಾತ್ರಿಯವರೆಗೂ ನಗರದ ಮೂಲೆ ಮೂಲೆಗಳಿಂದ ಜನರ ದಂಡು ಬಂದಿತ್ತು.ಮಹಿಳೆಯರು ಸಹ ಮುಜುಗರವನ್ನು ಬಿಟ್ಟು ಜಾಂಜ್ ಮೇಳದೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮಕ್ಕಳು ನೀಡಿದ ಲೇಜಿಮ್ ಪ್ರದರ್ಶನ ಕಳೆಗಟ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜನಸ್ತೋಮ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರ ಉತ್ಸಾಹ ಮಾತ್ರ ತಗ್ಗಿರಲಿಲ್ಲ.ಮುಖ್ಯ ಮೆರವಣಿಗೆ ನಡೆದ ಹುತಾತ್ಮ ಚೌಕ್, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜು ರಸ್ತೆ, ಸಂಭಾಜಿ ವೃತ್ತ, ರಾಮಲಿಂಗಖಿಂಡ ಗಲ್ಲಿ, ಟಿಳಕ ಚೌಕ, ತಹಶೀಲದಾರ ಗಲ್ಲಿ, ಕಪಿಲೇಶ್ವರ ರಸ್ತೆಯಲ್ಲಿ ಭಾನುವಾರ ಬೆಳಗಿನ ಜಾವದವರೆಗೂ ಜನಜಾತ್ರೆ ನೆರೆದಿತ್ತು.ಭಾನುವಾರ ಬೆಳಿಗ್ಗೆಯೂ ಹಲವು ಗಣಪತಿಗಳ ಮೆರವಣಿಗೆ ಈ ಮಾರ್ಗದಲ್ಲಿ ನಡೆದಿತ್ತು. ಕಪಿಲೇಶ್ವರ ಹೊಂಡದಲ್ಲಿ ಬೆಳಿಗ್ಗೆ ಗಣೇಶನ ವಿಸರ್ಜನೆ ಮಾಡಿದ ಭಕ್ತರು, ನಲಿದಾಡುತ್ತ ತಮ್ಮ ಮನೆಗಳಿಗೆ ವಾಪಸ್ಸಾಗುತ್ತಿದ್ದ ದೃಶ್ಯ ಕಂಡು ಬಂತು. ಬೆಳಿಗ್ಗೆ 11 ಗಂಟೆಯ ವೇಳೆಗೆ ಚವಾಟ ಗಲ್ಲಿ ಹಾಗೂ ಖಡಕ್ ಗಲ್ಲಿಯ ಗಣೇಶನನ್ನು ವಿಸರ್ಜಿಸುವುದರೊಂದಿಗೆ ಈ ವರ್ಷದ ಗಣೇಶ ಹಬ್ಬಕ್ಕೆ ಸಂಭ್ರಮದಿಂದ ವಿದಾಯ ಹೇಳಲಾಯಿತು.ಗಣೇಶನ ಮೆರವಣಿಗೆಯನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ಜನರು ವೀಕ್ಷಿಸಿದ್ದರಿಂದ ಹಾಗೂ ಭಾನುವಾರ ರಜಾ ದಿನವಾಗಿದ್ದರಿಂದ ನಗರದ ಹಲವು ರಸ್ತೆಗಳಲ್ಲಿ ಸಂಜೆಯವರೆಗೂ ಜನ ಸಂಚಾರ ಕಡಿಮೆಯಿದ್ದು, ಬಿಕೋ ಎನ್ನುತ್ತಿದ್ದವು. ಕಳೆದ 11 ದಿನಗಳಿಂದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಗಣೇಶ ಮಂಟಪಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry