ಗುರುವಾರ , ಆಗಸ್ಟ್ 5, 2021
27 °C

ನಿಲವಂಜಿ ಏತನೀರಾವರಿ ಯೋಜನೆ: ಹರಿಯದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ನಿಲವಂಜಿ ಮತ್ತು ಕರಿಗುಡ್ಡ ಗ್ರಾಮಗಳ ರೈತರ ಪಾಲಿಗೆ ಜೀವನಾಡಿ ಆಗಬೇಕಾಗಿದ್ದ ಏತ ನೀರಾವರಿ ಯೋಜನೆ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಂದಿಗೂ ರೈತರ ಜಮೀನಿಗೆ ನೀರುಣಿಸಲು ಸಾಧ್ಯವಾಗಿಲ್ಲ.

ತಾಲ್ಲೂಕಿನ ಕೃಷ್ಣಾ ನದಿ ತೀರದ ನಿಲವಂಜಿ ಹಾಗೂ ಕರಿಗುಡ್ಡ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 242.40 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 1994-95ರಲ್ಲಿ ಮಹತ್ವದ ಯೋಜನೆ ರೂಪಿಸಿ ಅದಕ್ಕಾಗಿ 57 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 19 ವರ್ಷ ಕಳೆದರೂ ಯೋಜನೆ ಮಾತ್ರ ಫಲಪ್ರದವಾಗಿಲ್ಲ.ಕಾಮಗಾರಿ ನಿರ್ವಹಣೆ ವೇಳೆ ಇಲಾಖೆಯ ಪ್ರಮಾದಗಳು ಹಾಗೂ ಗುಣಮಟ್ಟ ಇಲ್ಲದ ಕಾಮಗಾರಿಯಿಂದಾಗಿ ಜಮೀನುಗಳಿಗೆ ನೀರು ಹರಿಸಿಕೊಳ್ಳುವ ರೈತರ ಕನಸು ಮಾತ್ರ ಸಾಕಾರಗೊಂಡಿಲ್ಲ. ಕಳಪೆ ಪೈಪ್‌ಗಳನ್ನು ಅಳವಡಿಸಿದ್ದರಿಂದ ನೀರೆತ್ತುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ನೀರಿನ ಒತ್ತಡ ತಡೆಯಲಾರದೇ ಪೈಪ್‌ಗಳು ಒಡೆಯುತ್ತವೆ. ಕಳಪೆ ಕಾಮಗಾರಿ ನಡೆದಿರುವುದು ಸಂಬಂಧಿಸಿದ ಇಲಾಖೆಗೆ ಮನದಟ್ಟಾದ ಹಿನ್ನೆಲೆಯಿಂದ ಕೆಲವು ವರ್ಷ ಇತ್ತಕಡೆ ಯಾವ ಅಧಿಕಾರಿಯೂ ಸುಳಿದಿರಲಿಲ್ಲ.

`ಯೋಜನೆಯಲ್ಲಿ ನಡೆದಿದೆ ಎನ್ನಲಾದ ದೊಡ್ಡ ಮಟ್ಟದ ಅವ್ಯವಹಾರವನ್ನು ಮುಚ್ಚಿಹಾಕಲು ಇಲಾಖೆಯ ಅಧಿಕಾರಿಗಳು ಇಂದಿಗೂ ಉದ್ಘಾಟನೆ ಮಾಡಿಸುವ ಗೋಜಿಗೆ ಹೋಗದೆ ಮುಂದೂಡಿರುವುದು ಅನುಮಾನಕ್ಕೆ ಕಾರಣವಾಗಿದೆ' ಎಂದು ಗ್ರಾಮದ ಮುದುಕಪ್ಪ ಎಂಬುವವರು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.