ಭಾನುವಾರ, ಜೂನ್ 13, 2021
24 °C
ಪಕ್ಷದ ಸದಸ್ಯತ್ವ ಸ್ವೀಕಾರ

ನಿಲೇಕಣಿಗೆ ಈಗ ಕಾಂಗ್ರೆಸ್ ‘ಆಧಾರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿ­ಕಾರದ (ಆಧಾರ್‌) ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಭಾನುವಾರ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರಿದರು.ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌ ಅವರು ಕಾಂಗ್ರೆಸ್‌ ಬಾವುಟ ನೀಡುವ ಮೂಲಕ ನಿಲೇಕಣಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ನಿಲೇಕಣಿ ನಿಗದಿತ ಶುಲ್ಕ ಪಾವತಿಸಿ ಕಾಂಗ್ರೆಸ್‌ ಪಕ್ಷದ ಸದಸ್ಯರಾಗಿ ನೋಂದಣಿ ಮಾಡಿಸಿಕೊಂಡರು.ರಾಜ್ಯದ 14 ಕ್ಷೇತ್ರಗಳಿಗೆ ಶನಿವಾರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದ ಕಾಂಗ್ರೆಸ್‌, ನಿಲೇಕಣಿ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣ­ಕ್ಕಿಳಿ­ಸುವ ನಿರ್ಧಾರವನ್ನು ಪ್ರಕಟಿಸಿದ ಮರುದಿನವೇ ಅವರು ಸದಸ್ಯತ್ವ ಸ್ವೀಕರಿಸಿದರು.ಪಕ್ಷ ಸೇರ್ಪಡೆ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಕಳೆದ ಐದು ವರ್ಷಗಳಿಂದ ಆಧಾರ್‌ ಯೋಜನೆಯ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಈ ಹುದ್ದೆಯ ಮೂಲಕ ಕಾಂಗ್ರೆಸ್‌ ನನಗೆ ರಾಜಕೀಯ ಶಕ್ತಿ ನೀಡಿದೆ. ಅದಕ್ಕಾಗಿಯೇ ಕಾಂಗ್ರೆಸ್‌ ಪಕ್ಷದ ಮೂಲಕವೇ ರಾಜಕೀಯ ಪ್ರವೇಶಿಸಲು ನಿರ್ಧರಿಸಿದೆ’ ಎಂದರು.‘ನಾನು ಅನುಭವಿ’: ‘ಇನ್ಫೊಸಿಸ್‌ ಕಂಪೆನಿಯ ಸ್ಥಾಪಕರಲ್ಲಿ ಒಬ್ಬನಾದ ನನಗೆ, ಶೂನ್ಯದಿಂದ ಆರಂಭಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಒಂದು ಉದ್ದಿಮೆಯನ್ನು ಕೊಂಡೊಯ್ದ ಅನುಭವ ಇದೆ. ಲಕ್ಷಾಂತರ ಉದ್ಯೋಗ ಸೃಷ್ಟಿಸಿದ ಅನುಭವವೂ ಇದೆ.1999–2004ರ ಅವಧಿಯಲ್ಲಿ ಬೆಂಗಳೂರು ಅಜೆಂಡಾ ಕಾರ್ಯಪಡೆಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಇದರಿಂದ ನಗರ ಆಡಳಿತದ ಅನುಭವವೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಆಧಾರ್‌ ಮುಖ್ಯಸ್ಥನಾಗಿ 60 ಕೋಟಿ ಜನರಿಗೆ ಗುರುತಿನ ಸಂಖ್ಯೆ ನೀಡಿದ ಅನುಭವವಿದೆ. ಇದನ್ನು ಜನತೆ ಮಾನ್ಯ ಮಾಡಲಿದ್ದಾರೆ’ ಎಂದು ನಿಲೇಕಣಿ ಪ್ರತಿಕ್ರಿಯಿಸಿದರು.‘ನಾನು ಸ್ಥಳೀಯ ಅಭ್ಯರ್ಥಿ. ಬೆಂಗಳೂರಿನ ಸಮಸ್ಯೆ ಮತ್ತು ಅವುಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಗೊತ್ತಿದೆ. ಸಂಸತ್ತಿನಲ್ಲಿ ಬೆಂಗಳೂರಿನ ರಾಯಭಾರಿಯಾಗಿ ಕೆಲಸ ಮಾಡುವ ಶಕ್ತಿ ಇದೆ. ರಾಜಧಾನಿಗೆ ಬೇಕಾದುದನ್ನು ತರಲು ದನಿ ಎತ್ತುವ ಛಾತಿಯೂ ಇದೆ. ಇದೆಲ್ಲವನ್ನೂ ಪರಿಗಣಿಸಿ ಜನರು ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ’ ಎಂದರು.ಯುಪಿಎ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಗೆಲುವಿಗೆ ಅಡ್ಡಿಯಾಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಎದುರಾಳಿ ಪಕ್ಷ ಮತ್ತು ಅಭ್ಯರ್ಥಿಗಳು ಶುದ್ಧ ಚಾರಿತ್ರ್ಯ ಹೊಂದಿದವರೇನೂ ಅಲ್ಲ. ಹಿಂದಿನ ಐದು ವರ್ಷಗಳಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಲ್ಲಿ ಮತ ಕೇಳುವವನು ನಾನು. ನನ್ನ ವಿರುದ್ಧ ಯಾವುದೇ ಆಪಾದನೆಗಳಿಲ್ಲ’ ಎಂದು ಉತ್ತರಿಸಿದರು.

‘ನಿಯಮ ಉಲ್ಲಂಘಿಸಿಲ್ಲ’

ಆಧಾರ್‌ ನೋಂದಣಿ ಸಂಖ್ಯೆ ವಿತರಣೆಗೆ ಸಂಬಂಧಿಸಿದಂತೆ ನೀಡಿ­ರುವ ಜಾಹೀರಾತುಗಳ ವಿರುದ್ಧ ಬಿಜೆಪಿ ಮುಖಂಡರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದ ನಿಲೇಕಣಿ, ‘ನಾನು ಕಾನೂನಿನ ಪ್ರಕಾರವೇ ಪ್ರಚಾರ ಮಾಡುತ್ತಿ­ದ್ದೇನೆ. ನಿಯಮಗಳನ್ನು ಉಲ್ಲಂಘಿಸಿ­ದರೆ ಕೇಂದ್ರ ಚುನಾವಣಾ ಆಯೋಗ ಪರಿಶೀಲನೆ ನಡೆಸಿ ಕ್ರಮ ಜರುಗಿ­ಸು­ತ್ತಿದೆ. ನಾನು ಆಧಾರ್‌ ಯೋಜ­ನೆಯ ಮುಖ್ಯಸ್ಥನಾಗಿದ್ದೇನೆ. ಅದರ ಬಗ್ಗೆ ಜಾಹೀರಾತು ನೀಡಿದ್ದೇನೆ. ಇದರಲ್ಲಿ ಯಾವುದೇ ತಪ್ಪಿಲ್ಲ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.