ನಿಲೇಕಣಿ ಸ್ಪರ್ಧೆ ಈಗ ಖಚಿತ

7

ನಿಲೇಕಣಿ ಸ್ಪರ್ಧೆ ಈಗ ಖಚಿತ

Published:
Updated:

ಬೆಂಗಳೂರು: ‘ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿದರೆ ಮುಂಬರುವ ಲೋಕಸಭಾ ಚುನಾವಣೆ­ಯಲ್ಲಿ ಸ್ಪರ್ಧಿಸಲು ಸಿದ್ಧ’ ಎಂದು ಅಧಿ­ಕೃತವಾಗಿ ಪ್ರಕಟಿಸುವ  ಮೂಲಕ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಮುಖ್ಯಸ್ಥ ನಂದನ್‌ ನಿಲೇಕಣಿ ಅವರು ರಾಜಕೀಯ ಪ್ರವೇಶದ ಕುರಿತ ಊಹಾಪೋಹಗಳಿಗೆ ತೆರೆ ಎಳೆದರು.ನಗರದ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸಂವಾದದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ಯಾವ ಕ್ಷೇತ್ರದಿಂದ ಟಿಕೆಟ್‌ ನೀಡಬೇಕು ಎಂಬುದನ್ನು ಪಕ್ಷವೇ ತೀರ್ಮಾನಿಸಬೇಕು’ ಎಂದರು.‘ಭ್ರಷ್ಟಾಚಾರದ ಆರೋಪ ಹೊತ್ತಿ­ರುವ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಮುಜುಗರ ಎನಿಸುವುದಿಲ್ಲವೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆಧಾರ್‌ ಎನ್ನು­ವುದು ಭ್ರಷ್ಟಾಚಾರ­ರಹಿತ ವ್ಯವಸ್ಥೆ. ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ ನಾಲ್ಕೈದು ವರ್ಷಗಳಲ್ಲಿ ಕಾಂಗ್ರೆಸ್‌ ಅತ್ಯುತ್ತಮ ಬೆಂಬಲ ನೀಡಿದೆ. ಇದೇ ರೀತಿಯ ಬೆಂಬಲ ಮುಂದಿನ ದಿನಗಳಲ್ಲೂ ಸಿಗುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದಲ್ಲಿ ಆಮೂಲಾಗ್ರ ಬದ­ಲಾವಣೆ ತರಲು ರಾಜಕೀಯ ವ್ಯವಸ್ಥೆಯೇ ಅಸ್ತ್ರ ಎಂದು ನಂಬಿಕೆ ಹೊಂದಿರುವವನು ನಾನು. ಈ ವ್ಯವಸ್ಥೆಯ ಭಾಗವಾಗಲು ನನಗೆ ಖುಷಿಯಾಗುತ್ತಿದೆ. ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಬೇಕು ಎಂಬ ಹಂಬಲ ಹೊಂದಿರುವವನು ನಾನು’ ಎಂದು ಅವರು ಹೇಳಿದರು.‘ಕಳೆದ 35 ವರ್ಷಗಳಲ್ಲಿ ಬೆಂಗಳೂ­ರಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಭವಿಷ್ಯದಲ್ಲೂ ಉತ್ತಮ ಕೊಡುಗೆ ನೀಡಬೇಕು ಎಂಬ ಆಶಯದಿಂದ ಜನರ ಸಹಭಾಗಿತ್ವದಲ್ಲಿ ‘ಐಡಿಯಾಸ್‌ ಫಾರ್‌ ಬೆಂಗಳೂರು’ ಎಂಬ ಯೋಜನೆಯನ್ನು ಆರಂಭಿಸುತ್ತಿ­ದ್ದೇನೆ’ ಎಂದು ಅವರು ಘೋಷಿಸಿದರು.‘ಬೆಂಗಳೂರು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. ಈ ನಿಟ್ಟಿನಲ್ಲಿ  ಸಾಮಾನ್ಯ ಜನರೆಲ್ಲ ಜೊತೆಗೂಡಿದರೆ ಅಸಾಮಾನ್ಯ ಸಂಗತಿಗಳನ್ನು ಸಾಧಿಸಬಹುದು ಎಂಬ ನಂಬಿಕೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry