ಶುಕ್ರವಾರ, ಜನವರಿ 24, 2020
28 °C

ನಿಲ್ಲದ ಅಪಘಾತ: ಇಲ್ಲಿ ಇನ್ನೆಷ್ಟು ಬಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ:  ಪಟ್ಣದ ಹೊರವಲಯದ ಮಲಿಯಮ್ಮದೇವಿ ದೇವಸ್ಥಾನದ ರಸ್ತೆಯ ಸ್ಥಳ ಈಗ ಅಕ್ಷರಶಃ ಸಾವಿನ ಮನೆಗೆ ಆಮಂತ್ರಣ ನೀಡುವ ಅಪಘಾತ ವಲಯ!. ಇಲ್ಲಿ ಆಗಾಗ್ಗೆ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಿಲೇ ಇವೆ. ಆದರೂ, ಸಂಬಂಧಿಸಿದ ಇಲಾಖೆಗಳು ಮಾತ್ರ ಅಪಘಾತದಲ್ಲಿ ಸಂಭವಿಸುವ ಸಾವುಗಳಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಕಣ್ಣುಮುಚ್ಚಿಕೊಂಡು ಕುಳಿತಿವೆ. ಹೀಗಾಗಿ ಇಲ್ಲಿ ಇನ್ನೆಷ್ಟು ಬಲಿ ಎಂಬ ಭೀತಿ ಸಾರ್ವಜನಿಕರಲ್ಲಿ ಆವರಿಸಿಕೊಂಡಿದೆ!ಈ ಮಾರ್ಗ ಹೊಸಪೇಟೆ– ಶಿವಮೊಗ್ಗ ಸಂಪರ್ಕಿಸುವ ರಾಜ್ಯಹೆದ್ದಾರಿ ಸಂಖ್ಯೆ 25. ಏಳೆಂಟು ವರ್ಷಗಳ ಹಿಂದೆ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಅಭಿವೃದ್ಧಿ ಪಡಿಸಿದ ಹಿನ್ನೆಲೆಯಲ್ಲಿ ರಸ್ತೆ ಸುಸಜ್ಜಿತವಾಗಿದೆ. ಹೀಗಾಗಿ ಪಟ್ಟಣದಿಂದ ನಿರ್ಗಮಿಸುವ ವಾಹನಗಳು ಹೊರವಲಯದ ಈ ಇಳಿಜಾರು ಪ್ರದೇಶ ಇಳಿದು ರಭಸದಿಂದ ನುಗ್ಗುತ್ತವೆ. ಜತೆಗೆ, ಎದುರಿಗೆ ಬರುವ ವಾಹನಗಳಿಗೂ ಸಮತಟ್ಟು ಇರುವ  ಪರಿಣಾಮ ವಾಹನ ಸವಾರರು ಮಿತಿಮೀರಿದ ವೇಗದಲ್ಲಿಯೇ ಸಂಚರಿಸುತ್ತಾರೆ. ಈ ಎರಡರ ಮಧ್ಯೆ ಮಲಿಯಮ್ಮದೇವಿ ದೇಗುಲ ಇರುವ ಪರಿಣಾಮ ಎದುರಿಗೆ ಬರುವ ವಾಹನಗಳ ಸುಳಿವು ಸಿಗುವುದಿಲ್ಲ. ವೇಗದ ನಿಯಂತ್ರಣ ಕಳೆದುಕೊಳ್ಳುವ ವಾಹನಗಳು ಭೀಕರ ಅಪಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವುದು ಇಲ್ಲಿ ಸಾಮಾನ್ಯ ಎಂಬಂತಾಗಿದೆ.9ಮಂದಿ ಸಾವು: 1992 ನವೆಂಬರ್‌ನಲ್ಲಿ ಹೊಸಪೇಟೆ ಕಡೆಯಿಂದ ಸಿಮೆಂಟ್‌ ಚೀಲಗಳನ್ನು ತುಂಬಿಕೊಂಡು, ಅದರ ಮೇಲೆ ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹೊತ್ತುಕೊಂಡು ಚಲಿಸುತ್ತಿದ್ದ ಲಾರಿಯೊಂದು, ಎತ್ತರದ ಪ್ರದೇಶ ಹತ್ತಲು ಸಾಧ್ಯವಾಗದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು,ಹಿಂಬದಿಗೆ ಸಂಚರಿಸಿ ರಸ್ತೆಯ ಬದಿಯ ಚರಂಡಿಯ ನೀರಿಗೆ ಜಾರಿತು. ಲಾರಿಯಲ್ಲಿದ್ದ ಪ್ರಯಾಣಿಕರ ಪೈಕಿ, 9ಮಂದಿ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದರು. ಲಾರಿಯ ಪರವಾನಗೆ ಸಂಬಂಧಿತ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಲಾರಿ ಪಟ್ಟಣದ ಠಾಣೆಯ ಮುಂದಿನ ಸಬ್‌ಜೈಲ್‌ ಆವರಣದಲ್ಲಿ ತುಕ್ಕು ಹಿಡಿಯುವ ಮೂಲಕ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳನ್ನು ಅಣಕಿಸುವಂತೆ ನಿಂತಿದೆ. ಮತ್ತೊಂದೆಡೆ ಆಸರೆಯಾಗಿದ್ದವರನ್ನು ಕಳೆದುಕೊಂಡ ಕುಟುಂಬಗಳು ಇಂದಿಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ.  ಹೊದ ವರ್ಷವೂ ಸಹ ಸಿಂಧನೂರು ಮೂಲದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ದೇವಸ್ಥಾನದ ಬಳಿಯ ಮರಕ್ಕೆ ಡಿಕ್ಕಿ ಹೊಡೆಯಿತು. ಲಾರಿಯ ಚಾಲಕ ಸಾವನ್ನಪ್ಪಿದ. ಆ ಘಟನೆ ಇನ್ನೂ ಹಸಿಹಸಿಯಾಗಿರುವಾಗಲೇ ಮತ್ತೊಬ್ಬ ಬೈಕ್‌ ಸವಾರ ಸಾವನ್ನಪ್ಪಿದ. ಟೆಂಪೋ ಟ್ರ್ಯಾಕ್ಸ್‌– ಆಟೋರಿಕ್ಷಾ ಮಧ್ಯೆ ಸೋಮವಾರ ಸಂಭವಿಸಿದ ಅಪಘಾತ ಅನಾಮತ್‌ ಮೂವರನ್ನು ಬಲಿ ತೆಗೆದುಕೊಂಡಿದೆ.ಆಗಾಗ್ಗೆ ಲಾರಿ, ಬಸ್‌, ದ್ವಿಚಕ್ರ ವಾಹನ ಸೇರಿದಂತೆ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಲೇ ಇವೆ. ಅಪಘಾತರಹಿತ ವಲಯವನ್ನಾಗಿ ಮಾರ್ಪಡಿಸಲು ಸಂಬಂಧಿಸಿದ ಇಲಾಖೆಗಳು ಈ ಸ್ಥಳದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ದೇಗುಲ, ತಿರುವು ಪ್ರದೇಶದಲ್ಲಿ ಏಕಮುಖ ರಸ್ತೆ, ಮುನ್ಸೂಚನಾ ಫಲಕ ಸೇರಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಪ್ರತಿಕ್ರಿಯಿಸಿ (+)