ಬುಧವಾರ, ಮೇ 18, 2022
27 °C
ತೀರ್ಥಹಳ್ಳಿ: ಅರಣ್ಯ ಇಲಾಖೆಯಿಂದ ದಾರಿ ಬಂದ್

ನಿಲ್ಲದ ಕಾಡುಕೋಣಗಳ ಹಾವಳಿ: ಸಂಕಷ್ಟದಲ್ಲಿ ರೈತ

ಪ್ರಜಾವಾಣಿ ವಾರ್ತೆ / -ಶಿವಾನಂದ ಕರ್ಕಿ . Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ತಾಲ್ಲೂಕಿನ ಆಗುಂಬೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಕಾಡು ಕೋಣಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆ ನಾಶವಾಗುತ್ತಿದೆ. `ಆಗುಂಬೆ ಹೋಬಳಿಯ ಮೇಗರವಳ್ಳಿ, ಹೊಸಳ್ಳಿ ಗ್ರಾಮ ಪಂಚಾಯ್ತಿ ಹಳ್ಳಿಗಳಲ್ಲಿ ಕಾಡು ಕೋಣಗಳು ಪ್ರತಿ ದಿನ ದಾಳಿ ನಡೆಸುತ್ತಿರುವುದರಿಂದ ರೈತರ ಅಡಿಕೆ ತೋಟ, ಭತ್ತದ ಸಸಿಮಡಿಗಳು ಕಾಡು ಕೋಣಗಳಿಗೆ ಆಹಾರವಾಗುತ್ತಿವೆ.ಈ ಭಾಗದ ಕೊಳಿಗೆ ಬೈಲು, ದಿಂಡ, ಕೈನಲ್ಲಿ, ಹಲಗೇರಿ, ಗೋವಿಹಳ್ಳಿ, ಮುಂತಾದ ಕಡೆಗಳಲ್ಲಿ ಜಮೀನಿಗೆ ನುಗ್ಗುವ ಕಾಡು ಕೋಣಗಳ ಹಿಂಡು ಅಡಿಕೆ ಗಿಡ, ಬಾಳೆ ಗಿಡ ಹಾಗೂ ಸಸಿನಾಟಿಗೆ ಸಿದ್ದಪಡಿಸಿಕೊಂಡಿರುವ ಭತ್ತದ ಸಸಿಮಡಿಗಳನ್ನು ತಿಂದು, ತುಳಿದು ಹಾಳು ಮಾಡಿವೆ.ಈ ನಡುವೆ ಅರಣ್ಯ ಇಲಾಖೆ ಕಾಡುಕೋಣಗಳು ಒಂದು ಪ್ರದೇಶದ ಕಾಡಿನಿಂದ ಇನ್ನೊಂದು ಪ್ರದೇಶದ ಕಾಡಿಗೆ ಹೋಗುವ ದಾರಿಯನ್ನು ಬಂದ್ ಮಾಡಿ ಬೇಲಿ ನಿರ್ಮಿಸಿರುವುದರಿಂದ ಕಾಡುಕೋಣಗಳು ದಿಕ್ಕು ತಪ್ಪಿದಂತಾಗಿ ಎಲ್ಲಿ ಬೇಕೆಂದರಲ್ಲಿ ಓಡಾಟ ನಡೆಸುವಂತಾಗಿದೆ' ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಕಾಡು ಕೋಣಗಳ ಓಡಾಟಕ್ಕೆ ಅವುಗಳು ಸಾಮಾನ್ಯವಾಗಿ ಬಳಸುವ ದಾರಿಯನ್ನು ಅಡ್ಡಿಪಡಿಸದೇ ಇದ್ದರೆ ಅವುಗಳು ಊರಿನ ಕಡೆಗೆ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎನ್ನುವ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ.ಕಾಡು ಕೋಣಗಳ ಹಾವಳಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರ ನೀಡುವ ಪರಿಹಾರ ಧನ ತೀರಾ ಕಡಿಮೆ ಇದೆ. ಕಾಡುಕೋಣಗಳು ರೈತರ ಜಮೀನಿಗೆ ದಾಳಿ ಮಾಡುವುದನ್ನು ತಡೆಯಲು ಕಾಡಿಗೆ ಹೊಂದಿಕೆಯಾಗುವ ಪ್ರದೇಶದಲ್ಲಿ ಆಳವಾದ ತೋಡು (ಟ್ರೆಂಚ್) ಮಾಡುವುದರಿಂದ ತಡೆಗಟ್ಟ ಬಹುದು ಅಥವಾ ವಿದ್ಯುತ್ ಚಾಲಿತ ತಂತಿ ಬೇಲಿ ನಿರ್ಮಿಸುವುದರಿಂದ ತಡೆಗಟ್ಟಬಹುದಾಗಿದೆ. ಆದರೆ, ಅರಣ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ದೂರುಗಳಿವೆ.ಕಾಡುಕೋಣಗಳ ಹಾವಳಿ ಇರುವ ಆಗುಂಬೆ ಹೋಬಳಿಯ ರೈತರ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಕಾಡು ಕೋಣಗಳ ನಿಯಂತ್ರಣಕ್ಕೆ ಈ ಭಾಗದ ರೈತರಿಗೇ ಅವಕಾಶ ಕಲ್ಪಿಸಬೇಕು. ಕಾಡುಕೋಣಗಳು ಮನೆಬಾಗಿಲಿಗೆ ಬಂದು ನಿಲ್ಲುತ್ತಿವೆ. ಇವುಗಳ ಹಾವಳಿಯಿಂದ ರೈತರಿಗೆ ಉಳಿಗಾಲವಿಲ್ಲದಂತಾಗಿದೆ.

ನಷ್ಟಕ್ಕೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ಅರಣ್ಯ ಇಲಾಖೆ ಈ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳಲು ಮುಂದಾಗದೇ ಇದ್ದರೆ ಈ ಭಾಗದ ರೈತರು ಒಗ್ಗೂಡಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಬೆಕಾಗುತ್ತದೆ ಎಂದು ಮೇಗರವಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ಪ್ರಮೋದ್ ಹೆಗ್ಡೆ ಎಚ್ಚರಿಸಿದ್ದಾರೆ.ಕಾಡುಕೋಣಗಳ ಹಾವಳಿಯಿಂದ ಬೆಳೆ ಹಾನಿಯಾದ ರೈತರ ಅರ್ಜಿಗಳಿಗೆ ಮೂರು ಹಂತದಲ್ಲಿ ಪರಿಹಾರವನ್ನು ನೀಡಲಾಗಿದೆ. 2007ರಲ್ಲಿ 55 ಸಾವಿರ ಪರಿಹಾರ ನೀಡಲಾಗಿತ್ತು. 2012-13ರಲ್ಲಿ ರೂ 3.5 ಲಕ್ಷ ನೀಡಲಾಗಿದೆ. ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಅವಕಾಶ ಕೋರಲಾಗಿದೆ.`ಆಗುಂಬೆ ವಲಯಕ್ಕೆ 200ಕಿ.ಮೀ. ಬೇಲಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ' ಎಂದು ಆಗುಂಬೆ ವಲಯ ಅರಣ್ಯಾಧಿಕಾರಿ ಸುರೇಶ್ ಹೇಳುತ್ತಾರೆ.

-ಶಿವಾನಂದ ಕರ್ಕಿ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.