ನಿಲ್ಲದ ಚಟುವಟಿಕೆ... ಇಲ್ಲದ ಏಕಾಗ್ರತೆ!

7

ನಿಲ್ಲದ ಚಟುವಟಿಕೆ... ಇಲ್ಲದ ಏಕಾಗ್ರತೆ!

Published:
Updated:
ನಿಲ್ಲದ ಚಟುವಟಿಕೆ... ಇಲ್ಲದ ಏಕಾಗ್ರತೆ!

ಮಕ್ಕಳು ಹುಟ್ಟುವಾಗಲೇ ತಮ್ಮಂದಿಗೆ ಅಪಾರವಾದ ಅಂತಃಶಕ್ತಿ ಮತ್ತು ತೀಕ್ಷ್ಣ ಬುದ್ಧಿಮತ್ತೆಗಳೊಂದಿಗೇ ಹುಟ್ಟಿರುತ್ತಾರೆ. ಆದರೆ ಎಲ್ಲರೂ, ಆ ಮಟ್ಟದ ಕಾರ್ಯಶೀಲತೆ ಪ್ರದರ್ಶಿಸುವುದಿಲ್ಲ.ಅನೇಕ ಪೋಷಕರು ತಮ್ಮ ಮಕ್ಕಳು ಇನ್ನೂ ಚೆನ್ನಾಗಿ ಓದಿ, ಬರೆದು ಕಲಿಯಬಲ್ಲರು, ಈಗಿರುವುದಕ್ಕಿಂತಲೂ ಅಧಿಕ ಕಾರ್ಯಶೀಲತೆ ತೋರಬಲ್ಲರು, ಆದರೆ ಒಂದು ಗಳಿಗೆಯೂ ಒಂದು ಕಡೆ ಕೂತಿರುವುದಿಲ್ಲ. ಯಾವಾಗ ನೋಡಿದರೂ ಆಟ, ಆಟ... ಎಂದು ಸರ್ವೇಸಾಮಾನ್ಯವಾಗಿ ದೂರುತ್ತಿರುತ್ತಾರೆ. ಇಲ್ಲಿ ಅವರಿಗೆ ಅಡ್ಡಿಯಾಗಿರುವುದಾದರೂ ಏನು? ಮಗುವಿಗೆ ಪೋಷಕರಿಂದ ಅಗತ್ಯವಾಗುವ ನೆರವಾದರೂ ಎಂಥಾದ್ದು?ನಾವಿಲ್ಲಿ ಒಂದು ಪ್ರಕರಣವನ್ನು ಗಮನಿಸೋಣ. ಸಂಗೀತ ಚಿಕಿತ್ಸೆಯ ಸಂದರ್ಭದಲ್ಲಿ ಆ ಹುಡುಗ ಅತ್ತಿಂದಿತ್ತ ನೋಡುತ್ತಾ ನೆಲವನ್ನು ಕೈಗಳಿಂದ ತಟ್ಟುತ್ತಾ, ಕಾಲು ಅಲ್ಲಾಡಿಸುತ್ತಿದ್ದಾನೆ, ಕಣ್ಮುಚ್ಚಿಕೊಂಡು ಸ್ವರವನ್ನು ಅನುಸರಿಸುವಂತೆ ಅವನ ಟೀಚರ್ ಸೂಚಿಸುತ್ತಾರೆ. ದೂರದಲ್ಲಿ ನಿಂತು ಅದನ್ನು ಗಮನಿಸುತ್ತಿರುವ ಆತನ ತಾಯಿಯ ಕಣ್ಣುಗಳಲ್ಲಿ ಆತಂಕ... ಆಕೆಯ ಮಗನಿಗೆ ಕೆಲ ನಿಮಿಷಗಳಿಗಿಂತ ಹೆಚ್ಚು ಏಕಾಗ್ರತೆಯೇ ಸಾಧ್ಯವಾಗುತ್ತಿಲ್ಲ..!ಕೆಲ ಸಮಯದ ನಂತರ... ಆತ ಕೈಗಳಿಂದ ರಾಗಕ್ಕೆ ತಕ್ಕಂತೆ ತಾಳ ಹಾಕುತ್ತಿದ್ದಾನೆ. ಕಣ್ಮುಚ್ಚಿ ರಾಗದ ಹರಿವನ್ನು ಹಿಂಬಾಲಿಸುತ್ತಿದ್ದಾನೆ. ಜೊತೆಗಾರರೊಂದಿಗೆ ಕೈಮುಗಿಯುತ್ತಾ ಪ್ರಾರ್ಥನಾ ಮಂತ್ರ ಹಾಡುತ್ತಿದ್ದಾನೆ. ಆತ ಅರ್ಧಗಂಟೆಯಕಾಲ ಅಲ್ಲಾಡದೇ ಕುಳಿತು ಏಕಾಗ್ರತೆ ಸಾಧಿಸುವ ಹಂತ ತಲುಪಿದ್ದಾನೆ. ಈ ಏಕಾಗ್ರತೆ ಓದಿನಲ್ಲಿಯೂ ಸಾಧ್ಯವಾಗಿದೆ.ಅಮ್ಮನ ಕಣ್ಣುಗಳಲ್ಲಿ ಆನಂದಬಾಷ್ಪ...!

ಎಡಿಹೆಚ್‌ಡಿಯ ಸಮಸ್ಯೆ

ಸಾಮಾನ್ಯ  ಅಟೆನ್‌ಷನ್ ಡಿಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್  (ಎಡಿಹೆಚ್‌ಡಿ) ಎಂಬ ತೊಂದರೆಯಿಂದಾಗಿ ಮಕ್ಕಳು ಸ್ಥಿರಚಿತ್ತರಾಗಿ ಯಾವುದರ ಬಗ್ಗೆಯೂ ಗಮನ ಹರಿಸಲು ಅಸಮರ್ಥರಾಗುತ್ತಾರೆ. ಬಹಳ ಸಮಯ ಅವರು ಪಾಠ-ಪುಸ್ತಕಗಳೊಂದಿಗೆ ಗಮನವಿಟ್ಟು ಕೂಡಲಾರರು. ಇದು ಮಗುವಿನ ಬಗ್ಗೆ ಶಾಲೆಯ ಶಿಕ್ಷಕರು ಪೋಷಕರಿಗೆ ದೂರು ಹೇಳುವುದರಲ್ಲಿ ಪರ್ಯಾವಸಾನವಾಗಿ ಪೋಷಕರ ಆತಂಕ ಹರಳುಗಟ್ಟುತ್ತದೆ.ಮಕ್ಕಳಲ್ಲಿ ತುಂಟತನ ಹೆಚ್ಚಾಗಿ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಪೋಷಕರು ಭಾವಿಸುತ್ತಾರೆ. ಅವರು ಮಗುವನ್ನು ಪುಸಲಾಯಿಸಿ, ಮುದ್ದುಮಾಡಿ ಸರಿದಾರಿಗೆ ತರಲು ಪ್ರಯತ್ನಿಸುತ್ತಾರೆ. ಕೆಲವರು ಮಗುವಿಗೆ ಬೈದು, ಹೊಡೆದು ಹೆದರಿಸಿ ನೋಡುತ್ತಾರೆ. ಶಾಲೆಯಲ್ಲಿ ಶಿಕ್ಷಕರಿಂದಲೂ ದೂರುಗಳು ಬರಲಾರಂಭಿಸಿದಾಗ ಹತಾಶರಾಗುತ್ತಾರೆ.ಆದರೆ ಈ ಬಗೆಯ ಹತಾಶೆ ಹಾಗೂ ಸಿಟ್ಟಿಗೇಳುವುದು ಸಮಸ್ಯೆಗೆ ಖಂಡಿತ ಪರಿಹಾರವಲ್ಲ. ಕಾರಣ ಕಂಡುಹಿಡಿದು ಪರಿಹಾರ ಹುಡುಕುವುದು ಮುಖ್ಯ. ತಮ್ಮ ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಕೊರತೆಗಳನ್ನು ಗಮನಿಸಿ ಅದನ್ನು ಸರಿಪಡಿಸಲು ಮುಂದಾಗಬಹುದು. ನಮ್ಮ ದೇಶದಲ್ಲಿ ಈ ಕುರಿತು ತಿಳುವಳಿಕೆ ಕಡಿಮೆ.ಮಕ್ಕಳ ಮನಶಾಸ್ತ್ರಜ್ಞರು ಎಡಿಹೆಚ್‌ಡಿ ತೊಂದರೆಯು ಉಪೇಕ್ಷಿಸಲ್ಪಟ್ಟಲ್ಲಿ, ಮುಂದೆ ಮಕ್ಕಳು ಬೆಳೆದು ನಿಂತಾಗ ನಡವಳಿಕೆಗಳ ಸುಳಿಯಲ್ಲಿ ಸಿಲುಕುತ್ತಾರೆಂದು ಅಭಿಪ್ರಾಯಪಡುತ್ತಾರೆ. ಹಾಗಾಗಿ ಸಕಾಲಿಕವಾಗಿ ಸಮಸ್ಯೆಯನ್ನು ಗುರುತಿಸುವುದು ಹಾಗೂ ಚಿಕಿತ್ಸೆಗಳು ಅತ್ಯಂತ ಮುಖ್ಯ.ಚಿಕಿತ್ಸಾ ವಿಧಾನಗಳು

ಮಗುವಿನ ಸ್ಥಿತಿಯನ್ನು ಮೌಲ್ಯಮಾಪನ ಮಾಡುವುದು ಮೊದಲ ಹಂತ. ನಂತರ ಪೋಷಕರಿಗೆ ಸಲಹೆ / ಸಮಾಲೋಚನೆ ನಡೆಸಿ ಅವರು ಹೆಚ್ಚು ಸೂಕ್ಷ್ಮ ಸಂವೇದನಾಶೀಲರಾಗಿ ವರ್ತಿಸುವಂತೆ ಮಾಡುವುದು.ಈ ಸಮಸ್ಯೆಗೆ ಚಿಕಿತ್ಸೆ ನೀಡಲು ಸಂಯೋಜಿತ ವಿಧಾನ ಒಳ್ಳೆಯದು. ಹೋಮಿಯೋಪಥಿ ಔಷಧಗಳು ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತವೆ.ಸಂಗೀತ, ವರ್ತನೆ ಮತ್ತು ಯೋಗ ಚಿಕಿತ್ಸೆಗಳಂತಹ ಬೆಂಬಲಿಸುವ ಚಿಕಿತ್ಸೆಗಳು ಮಗುವಿನ ಅಂತಃಶಕ್ತಿಯನ್ನು ಬೇರೊಂದೆಡೆಗೆ ಹರಿಸಿ, ಆಸಕ್ತಿ ಉಂಟುಮಾಡಿ ಸಾಮಾನ್ಯ ಸಮಸ್ಯೆಗಳಾದ ಡಿಸ್‌ಲೆಕ್ಸಿಯಾ (ಓದಲು ಸಮಸ್ಯೆ), ಡಿಸ್‌ಗ್ರಾಫಿಯಾ (ಬರೆಯುವ ಸಮಸ್ಯೆ, ಅಕ್ಷರಗಳನ್ನು ಹಿಂದುಮುಂದಾಗಿ ಬರೆಯುವುದು ಇತ್ಯಾದಿ), ಡಿಸ್‌ಕ್ಯಾಲ್ಕುಲಿಯಾ (ಲೆಕ್ಕ ಮತ್ತು ಸಂಖ್ಯೆಗಳ ಸಮಸ್ಯೆ) ಮುಂತಾದವುಗಳನ್ನು ನಿವಾರಿಸಲು ನೆರವಾಗುತ್ತವೆ.ಇಲ್ಲಿ ಪೋಷಕರಿಗಾಗಲಿ, ಶಿಕ್ಷಕರಿಗಾಗಲಿ, ಮಗುವಿಗೆ ಈ ಬಗೆಯ ಸಮಸ್ಯೆ ಉಂಟೆಂದು ತಿಳಿಯದೇ ಇದ್ದಾಗ, ಅವರು ಮಗು ನಿರಾಸಕ್ತಿಯಿಂದಾಗಿ ಬೇಕೆಂದೇ ಹಾಗೆ ವರ್ತಿಸುತ್ತಿದೆ ಎಂದು ತಿಳಿಯುವ ಸಾಧ್ಯತೆಯುಂಟು. ಹಾಗಾಗಿ ಅದನ್ನು ಪತ್ತೆ ಮಾಡುವುದು ಪ್ರಾಥಮಿಕ ಅಗತ್ಯ.ಸಂಗೀತ ಚಿಕಿತ್ಸೆ ಮಗುವಿನ ಅತಿಭಾವುಕತೆಯ ಭಾವನಾತ್ಮಕ ತೀವ್ರತೆಯನ್ನು ನಿಯಂತ್ರಿಸುತ್ತದೆಯಲ್ಲದೇ ಅರ್ಥೈಸುವ ಮತ್ತು ಸೂಚನೆಗಳನ್ನು ಪಾಲಿಸುವ ನಿಟ್ಟಿನಲ್ಲಿ ನೆರವಾಗುತ್ತದೆ. ಮಗು ಸುಖವಾಗಿ ನಿದ್ರಿಸಿ, ಕಿರಿಕಿರಿಯಿಂದ ದೂರಾಗಿ ಶಾಂತಚಿತ್ತವಾಗುತ್ತದೆ.ಯೋಗ ಚಿಕಿತ್ಸೆಯೂ ಸಹ ಅಶಾಂತ ಮನಸ್ಥಿತಿಯನ್ನು ದೂರಮಾಡಿ ಸಾಂತ್ವನ ನೀಡುತ್ತದೆ. ಅದು ಭಾವತೀವ್ರತೆ ಮತ್ತು ಕ್ರಿಯಾತೀವ್ರತೆಯನ್ನು ತಗ್ಗಿಸಿ ಸೃಜನಶೀಲತೆಗೆ ದಾರಿ ಮಾಡಿಕೊಡುತ್ತದೆ. ಇದರಿಂದಾಗಿ ಗ್ರಹಿಸುವ ಶಕ್ತಿ ವೃದ್ಧಿಸುತ್ತದೆ.ವರ್ತನಾತ್ಮಕ ಚಿಕಿತ್ಸೆಯಿಂದ ಸಂವಹನ ಕೌಶಲ್ಯ ಮತ್ತು ಗ್ರಹಿಕೆಯ ಹೆಚ್ಚಳಕ್ಕೆ ನೆರವಾಗುತ್ತದೆ. ಹೀಗೆ ಇವುಗಳೊಂದಿಗೆ ಪೋಷಕರೂ ಸಹ ಮಕ್ಕಳ ಬಗ್ಗೆ ಹೆಚ್ಚು ಸೂಕ್ಷ್ಮ ಸಂವೇದನೆ ಹೊಂದಿ, ಅವರಿಗೆ ಸೂಕ್ತ ಮಾರ್ಗದರ್ಶನ ಒದಗಿಸಿದಲ್ಲಿ ಮಕ್ಕಳ ಬದುಕು ನಂದನವಾಗುವುದರಲ್ಲಿ ಸಂದೇಹವಿಲ್ಲ.

ಈ ಸ್ಥಿತಿಗೆ ಕಾರಣಗಳು

ಮೂಲತಃ ವಂಶವಾಹಿ ಕಾರಣಗಳಿದ್ದು, ಕೆಲವೊಮ್ಮೆ ಗರ್ಭಿಣಿಯಗಿದ್ದಾಗ ಖಿನ್ನತೆ ಮತ್ತು ಚಟಗಳು, ಮಗು ಹುಟ್ಟುವ ಸಮಯದಲ್ಲಿ ಮೆದುಳಿಗೆ ಹಾನಿ ಮುಂತಾದವುಗಳಿಂದ ಎಡಿಹೆಚ್‌ಡಿ ಉಂಟಾಗಬಹುದು.
ಮಕ್ಕಳ ಬಗ್ಗೆ ಹಿರಿಯರ ಸಾಮಾನ್ಯ ದೂರುಗಳು

* ವಿಪರೀತ ಮಾತನಾಡುತ್ತಾರೆ*ಅಜಾಗರೂಕತೆಯಿಂದ ಬಹಳ ತಪ್ಪು ಮಾಡುತ್ತಾರೆ

*ವೃಥಾ ಅಲೆದಾಟ*ಕಾರಣವಿಲ್ಲದೇ ಸಿಟ್ಟು ಮತ್ತು ಕೂಗಾಡುವಿಕೆ

*ಪುಸ್ತಕ, ಲೇಖನಿ ಮುಂತಾದವುಗಳನ್ನು ಪದೇ ಪದೇ ಕಳೆದುಕೊಳ್ಳುವುದು*ಮುಖ್ಯ ವಿಷಯಗಳನ್ನು ಮರೆಯುವುದು*ಏಕಾಗ್ರತೆ ಇಲ್ಲದಿರುವಿಕೆ

* ಸೂಚನೆ, ನಿರ್ದೇಶನಗಳನ್ನು ಪಾಲಿಸದಿರುವಿಕೆ

*ತಮ್ಮ ಸರದಿ ಬರುವವರೆಗೂ ಕಾಯಲು ಕಷ್ಟ

*ಕೇಳುವ, ಕರೆಯುವ ಮೊದಲೆ ಉತ್ತರಿಸುವುದು

*ಅನ್ಯರು ತಮ್ಮನ್ನು ಗಮನಿಸಲಿ ಎಂಬ ಭಾವ, ಅತ್ಯುತ್ಸಾಹ

*ಒಮ್ಮೆಲೇ ಹಲವಾರು ಕೆಲಸಗಳಲ್ಲಿ ತೊಡಗುವಿಕೆ

ನಾವಿಲ್ಲಿ ಪರಿಹಾರೋಪಾಯಗಳತ್ತ ಗಮನ ಹರಿಸಬೇಕು. ಪರ್ಯಾಯ ಚಿಕಿತ್ಸೆ ಮತ್ತು ಬೆಂಬಲಿಸುವ ವೈದ್ಯೋಪಚಾರಗಳು ತೀವ್ರ ಚಟುವಟಿಕೆಗಳನ್ನು ಶಾಂತಗೊಳಿಸಿ ಏಕಾಗ್ರತೆ ಮತ್ತು ಸ್ಥಿರಚಿತ್ತತೆಯನ್ನು ಹೆಚ್ಚಿಸಬಲ್ಲವು.(ಲೇಖಕರ ದೂರವಾಣಿ 080-23340963)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry