ಮಂಗಳವಾರ, ಮೇ 17, 2022
26 °C

ನಿಲ್ಲದ ದಲಿತರ ಶೋಷಣೆ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಭಾರತದ ಅನೇಕ ಹಳ್ಳಿಗಳಲ್ಲಿ ಈಗಲೂ ಸಂವಿಧಾನ ವಿರೋಧಿ ಕಾನೂನುಗಳು ಜಾರಿಯಲ್ಲಿದ್ದು, ದಲಿತರನ್ನು ಶೋಷಣೆ ಮಾಡುವ ಸಂಸ್ಕೃತಿ ಮುಂದುವರಿದಿದೆ ಎಂದು ‘ಭೂಶಕ್ತಿ ವೇದಿಕೆ ಕರ್ನಾಟಕ’ದ ಸಂಸ್ಥಾಪಕಿ ಅಮ್ಮಾಜೀ ವಿಷಾದಿಸಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಭೂಶಕ್ತಿ ವೇದಿಕೆ ಕರ್ನಾಟಕ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ದಲಿತ ಪಾರ್ಲಿಮೆಂಟ್ ಸಮಾವೇಶದಲ್ಲಿ ಅವರು ಮಾತನಾಡಿದರು.ದೇಶದ ಏಳು ಲಕ್ಷ ಹಳ್ಳಿಗಳಲ್ಲಿ ವಾಸಿಸುವ ದಲಿತರ ಕೇರಿಗಳಿಗೆ ಕಾಲೊನಿ ಎಂದು ಹೆಸರಿಟ್ಟು ಗುಲಾಮರನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ‘ಕಾಲೊನಿ’ ಎಂಬುದೇ ಗುಲಾಮಗಿರಿಯ ಸಂಕೇತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬ್ರಿಟೀಷರು ಇಡೀ ದೇಶವನ್ನು ಒಂದು ಕಾಲೊನಿಯನ್ನಾಗಿಸಿಕೊಂಡು ಎಲ್ಲರನ್ನೂ ಗುಲಾಮರನ್ನಾಗಿ ಮಾಡಿಕೊಂಡಿದ್ದರು. ಆದರೆ, ಇಂದು ಕೆಲವರು ಜಾತಿ ಮೂಲಕ ಕಾಲೊನಿ ಸೃಷ್ಟಿಸಿಕೊಂಡು ದಲಿತರನ್ನು ಶೋಷಣೆ ಮಾಡುತ್ತಿದ್ದಾರೆ. ಈ ಅಮಾನವೀಯ ವ್ಯವಸ್ಥೆಯ ಬದಲಾವಣೆ ಅಗತ್ಯವಿದೆ. ಈ ನಿಟ್ಟಿನಲ್ಲಿದಲಿತರು ಜಾಗೃತರಾಗಬೇಕಿದೆ ಎಂದು ಕರೆ ನೀಡಿದರು.ಮೂರು ಸಾವಿರ ವರ್ಷಗಳಿಂದ ದಲಿತರ ಶೋಷಣೆ ನಡೆದಿದೆ. ಇದು ಮುಂದುವರಿದಲ್ಲಿ ಯುವ ಪೀಳಿಗೆಗೆ ಇದನ್ನೇ ಕೊಡುಗೆಯಾಗಿ ನೀಡಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಇತಿಶ್ರೀ ಹಾಡಬೇಕು ಎಂದು ತಿಳಿಸಿದರು.ಈ ಹಿನ್ನೆಲೆಯಲ್ಲಿ ದಲಿತ ಸಮೂಹವನ್ನು ಒಗ್ಗೂಡಿಸಿ, ಆಂತರಿಕ ಆಡಳಿತ ವ್ಯವಸ್ಥೆ ನಿರ್ಮಿಸಿಕೊಂಡು ನಮ್ಮಲ್ಲಿರುವ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೇರವಾಗಿ ಪಡೆದುಕೊಂಡು ಅರ್ಹ ಫಲಾನುಭವಿಗಳಿಗೆ ಕಲ್ಪಿಸಬೇಕು.ಸಮಾನತೆ ಬೆಳೆಸಬೇಕು. ಜನಾಂಗೀಯ ಕೀಳರಿಮೆ ಹೋಗಲಾಡಿಸಬೇಕು. ದಲಿತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ದಲಿತರ ಸಂಸ್ಕೃತಿ, ಪರಂಪರೆಯನ್ನು ಕಟ್ಟಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು. ವೇದಿಕೆ ರಾಜ್ಯ ಸಂಚಾಲಕಿ ಪುಷ್ಪಲತಾ, ಪದಾಧಿಕಾರಿಗಳಾದ ಹಾಲಪ್ಪ, ರಂಗೇಶ್, ರಘು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.