ನಿಲ್ಲದ ಲಾರಿ ಮುಷ್ಕರ
ಬೆಂಗಳೂರು: ಮರಳು ನೀತಿ ರೂಪಿಸಲು ಆಗ್ರಹಿಸಿ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರುಗಳ ಒಕ್ಕೂಟದ ಸದಸ್ಯರು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು ಮರಳಿಲ್ಲದೆ ಕಟ್ಟಡ ನಿರ್ಮಾಣಕಾರರು ಪರದಾಡುತ್ತಿದ್ದಾರೆ.
ಸರ್ಕಾರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳದಿರುವುದರಿಂದ ಮುಷ್ಕರ ಮುಂದುವರೆಸಲು ಸಂಘ ನಿರ್ಧರಿಸಿದ್ದು, ನಿರ್ಮಾಣ ಕಾಮಗಾರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೆಲವೆಡೆ ಮರಳು ಸಾಗಣೆ ನಡೆಯುತ್ತಿದ್ದರೂ ಬೆಲೆ ದುಬಾರಿಯಾಗಿದೆ. ಲೋಡ್ವೊಂದಕ್ಕೆ 30ರಿಂದ 35 ಸಾವಿರ ರೂಪಾಯಿ ಪಡೆಯಲಾಗುತ್ತಿದೆ. ಇದರಿಂದಾಗಿ ದುಬಾರಿ ಮೊತ್ತ ನೀಡಿ ಮರಳು ಖರೀದಿಸಲು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ.
`ಮುಷ್ಕರಕ್ಕೂ ಮೊದಲೇ ಒಂದು ಲೋಡ್ ಮರಳನ್ನು ತರಿಸಲಾಗಿತ್ತು. ನಾಲ್ಕು ದಿನ ಅದೇ ಮರಳನ್ನು ಉಪಯೋಗಿಸಿ ಕಟ್ಟಡ ನಿರ್ಮಾಣ ಮಾಡಲಾಯಿತು. ಆದರೆ ಈಗ ಮರಳು ಖಾಲಿಯಾಗಿದ್ದು ಕಾಮಗಾರಿ ನಿಲ್ಲಿಸಬೇಕಾಗಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ತೊಂದರೆ ತಪ್ಪಿಸಬೇಕು~ ಎಂದು ನಂದಿನಿ ಲೇಔಟ್ ವಾಸಿ ರಾಜಣ್ಣ ಆಗ್ರಹಿಸಿದರು.
`ಲಾರಿ ಮಾಲೀಕರ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದಾಗಿ ಲಾರಿ ಮಾಲೀಕರು ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಸರ್ಕಾರ ಮರಳು ಸಾಗಣೆಗೆ ಪರವಾನಗಿ ನೀಡುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ~ ಎಂದು ಒಕ್ಕೂಟದ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ `ಪ್ರಜಾವಾಣಿ~ಗೆ ತಿಳಿಸಿದರು.
ಸಮಗ್ರ ಮರಳು ನೀತಿ ರೂಪಿಸಬೇಕು. ಮರಳು ತುಂಬುವ ಸ್ಥಳವನ್ನು ಹರಾಜು ಮಾಡಬೇಕು. ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಿಬ್ಬಂದಿ ಹಾಗೂ ತಹಶೀಲ್ದಾರ್ಗಳು ಮರಳು ಲಾರಿ ಮಾಲೀಕರಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು ಎಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲಾಗುತ್ತಿದೆ.
ರಾಜ್ಯದಾದ್ಯಂತ 45 ಸಾವಿರ ಲಾರಿಗಳು ಸೇವೆ ಸ್ಥಗಿತಗೊಳಿಸಿವೆ. ಬೆಂಗಳೂರು ನಗರಕ್ಕೆ ಪ್ರತಿ ನಿತ್ಯ 3000 ಲೋಡ್ ಮರಳು ಬೇಕಾಗುತ್ತದೆ. ಆದರೆ ಮುಷ್ಕರದ ಹಿನ್ನೆಲೆಯಲ್ಲಿ ಮರಳು ಪೂರೈಕೆ ಸ್ಥಗಿತಗೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.