ನಿವಾಸಿಗಳಿಂದ ನಗರಸಭೆಗೆ ಮುತ್ತಿಗೆ

7
ಕುಡಿಯುವ ನೀರು ಪೂರೈಕೆಗೆ, ಬೋರ್‌ವೆಲ್ ದುರಸ್ತಿಗೆ ಒತ್ತಾಯ

ನಿವಾಸಿಗಳಿಂದ ನಗರಸಭೆಗೆ ಮುತ್ತಿಗೆ

Published:
Updated:

ಹಾವೇರಿ: ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಹಾಗೂ ಕೆಟ್ಟು ಹೋಗಿರುವ ಬೋರ್‌ವೆಲ್ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ಇಲ್ಲಿನ ಹೊಸನಗರದ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.ಖಾಲಿ ಕೊಡಗಳನ್ನು ಹಿಡಿದು ನಗರಸಭೆ ಆಗಮಿಸಿದ ಪ್ರತಿಭಟನಾಕಾರರು, ನೀರು ಬಿಡುವಂತೆ ಒತ್ತಾಯಿಸಿ ನಗರಸಭೆ ಗೇಟ್‌ಗೆ ಬೀಗ ಹಾಕಿದರಲ್ಲದೇ ನಗರಸಭೆ ಎದುರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಹೊಸನಗರ ಪ್ರದೇಶದಲ್ಲಿ 25 ದಿನಗಳಿಂದ ಕುಡಿಯುವ ನೀರು ಪೂರೈಸಿಲ್ಲ. ಬಳಕೆಗೆ ನೀರು ಒದಗಿಸುವ ಎರಡು ಬೋರವೆಲ್‌ಗಳು ದುರಸ್ತಿಗೆ ಬಂದಿವೆ. ಅವುಗಳನ್ನು ಸಹ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿದರು.ಕಳೆದ ಒಂದು ತಿಂಗಳಿನಿಂದ ನೀರು ಬಾರದ ಕಾರಣ ಅಲ್ಲಿನ ನಿವಾಸಿಗಳು ಕೊಡ ನೀರಿಗಾಗಿ ಪರದಾಟ ನಡೆಸಬೇಕಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಹಾಗೂ ವಾರ್ಡಿನ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗದಿದ್ದರೆ, ಅಧಿಕಾರ ಬಿಟ್ಟು ಹೊರ ನಡೆಯಿರಿ ಎಂದು ಅಧಿಕಾರಿಗಳನ್ನು ಹಾಗೂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೇ ಕುಡಿಯುವ ನೀರು ಪೂರೈಸುವವರೆಗೆ ಹಾಗೂ ಬೋರವೆಲ್‌ಗಳನ್ನು ದುರಸ್ತಿ ಮಾಡುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾ ನಿರತ ನಿವಾಸಿಗಳು ಪಟ್ಟು ಹಿಡಿದರು. ಇದೇ ಸಂದರ್ಭದಲ್ಲಿ ನಗರಸಭೆ ಆಯುಕ್ತ ಎಚ್.ಕೆ. ರುದ್ರಪ್ಪ ಅವರಿಗೆ ಘೇರಾವ್ ಹಾಕಿದರು.ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, ಕುಡಿಯುವ ನೀರಿನ ಪೂರೈಕೆಗೆ ಸ್ವಲ್ಪ ಮಟ್ಟಿನ ಸಮಸ್ಯೆಯಿದೆ. ಆ ಸಮಸ್ಯೆ ಬಗೆ ಹರಿದ ತಕ್ಷಣವೇ ನೀರು ಪೂರೈಸುವುದಾಗಿ ಹೇಳಿದರಲ್ಲದೇ, ಬೋರವೆಲ್‌ಗಳನ್ನು ಇಂದೇ ದುರಸ್ತಿ ಮಾಡುವುದಾಗಿ ಭರವಸೆ ನೀಡಿದರು. ಅದಕ್ಕೆ ತೃಪ್ತರಾಗದ ಪ್ರತಿಭಟನಾಕಾರರು, ಈಗಲೇ ಬೋರವೆಲ್ ದುರಸ್ತಿಗೆ ಕಳುಹಿಸಿದರೆ ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಹೇಳಿದರು. ಆಗ ಜನರ ಒತ್ತಡಕ್ಕೆ ಮಣಿದು ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕಳುಹಿಸಿದ ನಂತರವೇ ಪ್ರತಿಭಟನೆಯಿಂದ ಹಿಂದೆ ಸರಿದರು. ಪ್ರತಿಭಟನೆಯಲ್ಲಿ ಅಮನ್‌ವುಲ್ಲಾ ಇಲಿಪುಟ್ಟಿ, ಶಂಭು ಜಾಬೀನ್ ಕುಶಲ ಪಠಾಣ್, ರಾಜು ಬಿದರಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry