ಗುರುವಾರ , ಮೇ 19, 2022
20 °C

ನಿವೃತ್ತಿ ನಿರ್ಧಾರ ಗಟ್ಟಿ: ಸ್ಮಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್ (ಪಿಟಿಐ):  ದಕ್ಷಿಣ ಆಫ್ರಿಕಾ ಒಂದುವೇಳೆ ಹೊಳೆಯುವ ಟ್ರೋಫಿಯನ್ನು ಗೆದ್ದರೂ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಂತರ ಏಕದಿನ ಪಂದ್ಯಗಳಿಂದ ನಿವೃತ್ತಿ ಹೊಂದುವ ತಮ್ಮ ನಿರ್ಧಾರವನ್ನು  ಬದಲಿಸುವುದಿಲ್ಲ ಎಂದು ಆ ತಂಡದ ನಾಯಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.

‘ಬಹಳ ದಿನಗಳ ಹಿಂದೆಯೇ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಿವೃತ್ತಿಯಾಗಲು ಇದೇ ತಕ್ಕ ಸಮಯ’ ಎಂದು ‘ಆಫ್ರಿಕನ್ಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘ನಾಯಕನಾಗಿ ಕಾರ್ಯ ನಿರ್ವಹಿಸಿದ ಅವಧಿ ರೋಮಾಂಚಕಾರಿ ಆಗಿತ್ತು. ಈ ಅವಧಿಯಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇನೆ. ಅಲ್ಪ ಸಮಯದಲ್ಲೇ ಎತ್ತರಕ್ಕೂ ಬೆಳೆದಿದ್ದೇನೆ’ ಎಂದು ಅವರು ವಿವರಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಪರ ಆಡುವಾಗ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳ ಅನುಭವ ನನ್ನದಾಗಿದೆ. ಅವುಗಳನ್ನು ಖಂಡಿತಾ ನಾನು ಮರೆಯಲಾರೆ ಎಂದು ಸ್ಮಿತ್ ಹೇಳಿದ್ದಾರೆ.

ನನ್ನ ಪಾಲಿಗೆ ಈ ವಿಶ್ವ ಕಪ್ ಅತ್ಯಂತ ಮಹತ್ವದ್ದಾಗಿದೆ. ಇದು ಜೀವನದಲ್ಲಿ ಹೆಚ್ಚು ನೆನಪಿನಲ್ಲಿ ಉಳಿಯುವಂತದ್ದು. ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ 2003ರಲ್ಲಿ ಶಾನ್ ಪೊಲಾಕ್ ಅವರಿಂದ ಅಧಿಕಾರ ಸ್ವೀಕಾರ ಮಾಡಿದಾಗ ಸ್ಮಿತ್ ಕೇವಲ 22ರ ಹರೆಯದ ಯುವಕನಾಗಿದ್ದರು. ‘ನಾಯಕತ್ವದ ಆರಂಭದ ದಿನಗಳು ಹೂವಿನ ಹಾದಿ ಆಗಿರಲಿಲ್ಲ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಹುದ್ದೆಗೆ ತಕ್ಕ ಹಿಡಿತ ಸಿಕ್ಕಿತ್ತು’ ಎಂದು ಅವರು ಹೇಳಿದ್ದಾರೆ. ‘ತಂಡ ನನ್ನದು ಎಂಬುವ ಭಾವ ನನಗೀಗ ಬಂದಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.