ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ: ಸಚಿನ್ ತೆಂಡೂಲ್ಕರ್

7

ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ: ಸಚಿನ್ ತೆಂಡೂಲ್ಕರ್

Published:
Updated:
ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ: ಸಚಿನ್ ತೆಂಡೂಲ್ಕರ್

ನವದೆಹಲಿ (ಪಿಟಿಐ): ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಯಾವುದೇ ಯೋಚನೆ ಸದ್ಯ ತಮ್ಮ ಮುಂದಿಲ್ಲ ಎಂದು ‘ಬ್ಯಾಟಿಂಗ್ ಮಾಂತ್ರಿಕ’ ಸಚಿನ್ ತೆಂಡೂಲ್ಕರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ‘ಕ್ರಿಕೆಟ್ ಆಟವನ್ನು ನಾನು ಮುಂಚೆಗಿಂತ ಈಗ ಹೆಚ್ಚು ಆಸ್ವಾದಿಸುತ್ತಿದ್ದು, ದೇಶಕ್ಕಾಗಿ ಇನ್ನಷ್ಟು ಕಾಲ ಆಡುವ ತುಡಿತ ಮತ್ತು ಆಕಾಂಕ್ಷೆ ನನ್ನಲ್ಲಿದೆ’ ಎಂದು ಅವರು ಹೇಳಿದ್ದಾರೆ.‘ನಿವೃತ್ತಿ ಯೋಚನೆ ನನ್ನಲ್ಲಿ ಇದುವರೆಗೆ ಸುಳಿದಿಲ್ಲ. ಅಂತಹ ನಿರ್ಧಾರವನ್ನು ನಾನು ಕೈಗೊಂಡಾಗ ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇರುವುಲ್ಲ. ಅದನ್ನು ಬಹಿರಂಗವಾಗಿಯೇ ಘೋಷಿಸುತ್ತೇನೆ’ ಎಂದು ಸಚಿನ್ ತಿಳಿಸಿದ್ದಾರೆ. ನೂರಾರು ಸಾಧನೆಗಳನ್ನು ಮಾಡಿದ್ದಲ್ಲದೆ ಕ್ರಿಕೆಟ್ ಲೋಕದಲ್ಲಿ ಡಾನ್ ಬ್ರಾಡ್ಮನ್ ಅವರಿಗಿಂತಲೂ ಹೆಚ್ಚಿನ ಎತ್ತರಕ್ಕೆ ಬೆಳೆದ ಸಚಿನ್‌ಗೆ ಇದುವರೆಗೆ ವಿಶ್ವಕಪ್ ಟ್ರೋಫಿ ಒಂದೇ ಕೊರತೆಯಾಗಿ ಕಾಡುತ್ತಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮೊನ್ನೆ ಶ್ರೀಲಂಕಾ ತಂಡವನ್ನು ಬಗ್ಗುಬಡಿದಾಗ ತೆಂಡೂಲ್ಕರ್ ಅವರ ದಶಕಗಳ  ಆ ಕೊರತೆ ಮಂಜಿನಂತೆಯೇ ಕರಗಿ ಹೋಗಿತ್ತು.ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಷ್ಟು ದೀರ್ಘ ಕಾಲ ಆಡಲು ತೆಂಡೂಲ್ಕರ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿಗೆ ಅವರ ಹೇಳಿಕೆಯಿಂದ ಈಗ ಸಂಪೂರ್ಣವಾಗಿ ತೆರೆ ಬಿದ್ದಂತಾಗಿದೆ. ‘ಕ್ರಿಕೆಟ್ ಮೇಲಿನ ತುಡಿತ ಇನ್ನೂ ಕಡಿಮೆಯಾಗಿಲ್ಲ. ಆಟದ ಮೇಲಿನ ಪ್ರೀತಿಯಿಂದ ಇಷ್ಟೊಂದು ದೀರ್ಘಕಾಲ ಆಡಲು ಸಾಧ್ಯವಾಗಿದೆ. ಅದೇ ತುಡಿತ ಮತ್ತು ಪ್ರೀತಿಯಿಂದ ಇನ್ನುಮುಂದೆಯೂ ಆಡುತ್ತೇನೆ’ ಎಂದು ಅವರು ಹೇಳಿದ್ದಾರೆ.‘ಇನ್ನೂ ಐದು ವರ್ಷಗಳು ಕಳೆದ ಮೇಲೆ ಸಚಿನ್ ಎಲ್ಲಿರುತ್ತಾರೆ’ ಎಂಬ ಪ್ರಶ್ನೆಗೆ, ‘ನನಗೆ ಗೊತ್ತಿಲ್ಲ, ಆದರೆ, ನಾನು ಆಗಲೂ ಸಚಿನ್ ತೆಂಡೂಲ್ಕರ್ ಆಗಿರುತ್ತೇನೆ ಎಂಬ ಭರವಸೆಯನ್ನು ಮಾತ್ರ ನೀಡಬಲ್ಲೆ. ಮುಂದಿನ ವಿಶ್ವಕಪ್‌ನಲ್ಲೂ ಆಡುತ್ತೇನೆ ಎಂಬ ಯೋಚನೆ ಏನೂ ನನ್ನ ತಲೆಯಲ್ಲಿಲ್ಲ. ಸದ್ಯ ನಾನು ಕ್ರಿಕೆಟ್ ಆಟವನ್ನು ಆಸ್ವಾದಿಸುತ್ತಿದ್ದು, ಸಾಧ್ಯವಾದಷ್ಟು ಕಾಲ ಆಡಲು ಬಯಸುತ್ತೇನೆ’ ಎಂದು ಉತ್ತರಿಸಿದ್ದಾರೆ.‘ಇದೊಂದು ಅವಿಸ್ಮರಣೀಯ ಕ್ಷಣವಾಗಿದ್ದು, ದೇಶಕ್ಕೆ ಏನೋ ಒಳ್ಳೆಯದಾಗಿದೆ ಎಂಬ ಭಾವ ಎಲ್ಲೆಡೆ ಮನೆ ಮಾಡಿದೆ. ನನಗೂ ಆ ಭಾವನೆ ಖುಷಿ ನೀಡುತ್ತಿದೆ. ಈ ತಂಡದಲ್ಲಿ ಬಹಳ ಜನ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಆಟಗಾರರಿದ್ದಾರೆ. ಏಕಾಂಗಿಯಾಗಿ ಹೋರಾಡಿ ಗೆಲುವು ತಂದುಕೊಡಬಲ್ಲ ಶಕ್ತಿ ಅವರಿಗಿದೆ. ತಂಡದ ಸಮತೋಲನವೂ ಅದ್ಭುತವಾಗಿದೆ’ ಎಂದು ಈಗಿನ ತಂಡವನ್ನು ಕೊಂಡಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry