ನಿವೃತ್ತ ಜನರಲ್‌ ಸಿಡಿಸಿದ ಮತ್ತೊಂದು ಬಾಂಬ್‌

7

ನಿವೃತ್ತ ಜನರಲ್‌ ಸಿಡಿಸಿದ ಮತ್ತೊಂದು ಬಾಂಬ್‌

Published:
Updated:

ನವದೆಹಲಿ (ಪಿಟಿಐ): ಕೇವಲ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವಲ್ಲ, ದೇಶದ ಇತರ ಕೆಲವು ಕಡೆಗಳಲ್ಲೂ ಸೇನೆಯು ಸ್ಥಳೀಯ ಸಚಿವರು ಮತ್ತು ರಾಜಕಾರಣಿಗಳಿಗೆ ಹಣ ಸಂದಾಯ ಮಾಡುತ್ತಿದೆ ಎಂದು ಹೇಳುವ ಮೂಲಕ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್‌ ವಿ.ಕೆ. ಸಿಂಗ್‌ ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.ಗುಂಡಗಾಂವ್‌ದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ರಾಜ್ಯಗಳಲ್ಲಿ ಸೇನೆ ಹಣ ನೀಡುತ್ತಿದೆ ಎಂಬ ಬಗ್ಗೆ ವಿವರ ನೀಡಲು ಹಿಂದೇಟು ಹಾಕಿದರು.ಸ್ವಾತಂತ್ರ್ಯ ಬಂದಾಗಿನಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರತೆ ಕಾಪಾಡಲು ಸೇನೆ ಅಲ್ಲಿಯ ಕೆಲವು ಸಚಿವರು ಮತ್ತು ರಾಜಕಾರಣಿಗಳಿಗೆ  ನಿರಂತರವಾಗಿ ಹಣ ಸಂದಾಯ ಮಾಡುತ್ತ ಬಂದಿದೆ ಎಂದು ಸೋಮವಾರ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಅವರು ನೀಡಿದ್ದ  ಸಂದರ್ಶನ ಭಾರಿ ವಿವಾದ ಹುಟ್ಟು ಹಾಕಿತ್ತು. ಈ ನಡುವೆ  ಸೇನೆಯಿಂದ ಹಣ ಪಡೆದವರ ಹೆಸರು ಬಹಿರಂಗಪಡಿಸುವಂತೆ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ  ಫಾರೂಕ್‌ ಅಬ್ದುಲ್ಲಾ ಅವರು ವಿ.ಕೆ ಸಿಂಗ್‌ಗೆ ಸವಾಲು ಹಾಕಿದ್ದಾರೆ.  ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಜನರಲ್‌ ಸಿಂಗ್‌ ಅವರು ಹಣ ಪಡೆದ ಫಲಾನುಭವಿಗಳ ಹೆಸರು ಬಹಿರಂಗ ಪಡಿಸಿದರೆ ತನಿಖೆ ನಡೆಸಲು ಸಿದ್ಧ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಹೇಳಿದ್ದಾರೆ.ಸಿಂಗ್‌ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಮತ್ತು  ನ್ಯಾಷನಲ್‌ ಕಾನ್ಫರೆನ್ಸ್‌ ಇದೊಂದು ‘ಬೇಜವಾಬ್ದಾರಿ ಹೇಳಿಕೆ’ ಎಂದು ತರಾಟೆಗೆ ತೆಗೆದುಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry