ಶನಿವಾರ, ಮೇ 21, 2022
27 °C

ನಿವೃತ್ತ ಜನರಲ್ ವಿ.ಕೆ.ಸಿಂಗ್‌ಗೆ ಬಿಇಎಂಎಲ್ ನೋಟಿಸ್:ವಿವರಣೆ ಕೋರಿದ ಸಚಿವಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಟಟ್ರಾ ಟ್ರಕ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಜನರಲ್ ವಿ.ಕೆ. ಸಿಂಗ್ ಅವರಿಗೆ ನೋಟಿಸ್ ನೀಡಿರುವ ಕುರಿತು ವಿವರಣೆ ನೀಡುವಂತೆ ಬಿಇಎಂಎಲ್‌ಗೆ ರಕ್ಷಣಾ ಸಚಿವಾಲಯ ಸೂಚಿಸಿದೆ.`ಭೂ ಸೇನೆಯ ನಿವೃತ್ತ ಮುಖ್ಯಸ್ಥ ವಿ.ಕೆ. ಸಿಂಗ್ ಅವರಿಗೆ ನೋಟಿಸ್ ನೀಡಲು ಬಿಇಎಂಎಲ್‌ಗೆ ಸಚಿವಾಲಯ ಅನುಮತಿ ನೀಡಿರಲಿಲ್ಲ~ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ. `ಸಿಂಗ್ ಅವರಿಗೆ ನೋಟಿಸ್ ನೀಡಿರುವ ಮತ್ತು ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿರುವ ಬಗ್ಗೆ ವಿವರಣೆ ನೀಡುವಂತೆ ಬಿಇಎಂಎಲ್ ಮುಖಸ್ಥ ವಿ.ಆರ್.ಎಸ್. ನಟರಾಜನ್ ಅವರಿಗೆ ಸೂಚಿಸಲಾಗಿದೆ~ ಎಂದೂ ಅವರು ತಿಳಿಸಿದ್ದಾರೆ.ಟಟ್ರಾ ಟ್ರಕ್ ಖರೀದಿಗೆ ಸಂಬಂಧಿಸಿದಂತೆ ರೂ.14 ಕೋಟಿ ಲಂಚದ ಆಮಿಷವನ್ನು ತಮಗೆ ಒಡ್ಡಲಾಗಿತ್ತು ಎಂದು ಜನರಲ್ ವಿ.ಕೆ. ಸಿಂಗ್ ಮಾರ್ಚ್‌ನಲ್ಲಿ ಹೇಳಿದ್ದರು.ಈ ಹಗರಣಕ್ಕೆ ಸಂಬಂಧಿಸಿದಂತೆ ಜನರಲ್ ವಿ.ಕೆ. ಸಿಂಗ್ ಅವರು ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಸಂಸ್ಥೆ ವಿರುದ್ಧ ಅವಹೇಳನಕಾರಿ ಆಪಾದನೆಗಳನ್ನು ಮಾಡಿದ್ದಾರೆ.

 

ಆದ್ದರಿಂದ ಅವರು ಕ್ಷಮೆ ಕೋರಬೇಕು ಎಂದು ಬಿಇಎಂಎಲ್ ಮುಖ್ಯಸ್ಥ ನಟರಾಜನ್ ಅವರು ಸಿಂಗ್ ಅವರಿಗೆ ಜೂನ್ 1ರಂದು ವಕೀಲರ ಮೂಲಕ ನೋಟಿಸ್ ನೀಡಿದ್ದರು. ಸಿಂಗ್ ಮೇ 31ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಬಿಇಎಂಎಲ್ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ್ದ ವಿ.ಕೆ. ಸಿಂಗ್, ತಾವು ಸತ್ಯವನ್ನು ಹೇಳಿದ್ದು; ಕ್ಷಮೆಯಾಚಿಸುವುದಿಲ್ಲ ಎಂದಿದ್ದರು.ನಾಳೆ ಆದೇಶ ಪ್ರಕಟ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಜನರಲ್ ವಿ.ಕೆ. ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡುವ ಬಗ್ಗೆ ಆದೇಶ ಕಾಯ್ದಿರಿಸಿರುವ ಇಲ್ಲಿನ ಮೆಟ್ರೊಪಾಲಿಟನ್ ನ್ಯಾಯಾಲಯವು ಅದನ್ನು ಶುಕ್ರವಾರ (ಜೂನ್ 8) ಪ್ರಕಟಿಸುವುದಾಗಿ ಹೇಳಿದೆ.ಟಟ್ರಾ ಟ್ರಕ್ ಖರೀದಿಗೆ ಸಂಬಂಧಿಸಿದಂತೆ ತಮಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ತೇಜಿಂದರ್ ಸಿಂಗ್ ಲಂಚದ ಆಮಿಷ ಒಡ್ಡಿದ್ದರು ಎಂದು ವಿ.ಕೆ. ಸಿಂಗ್ ಆಪಾದಿಸಿದ್ದರು. ವಿ.ಕೆ.ಸಿಂಗ್ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ತೇಜಿಂದರ್ ಸಿಂಗ್ ಈ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.