ನಿವೃತ್ತ ನೌಕರ ಈಗ ಯಶಸ್ವಿ ರೈತ

7

ನಿವೃತ್ತ ನೌಕರ ಈಗ ಯಶಸ್ವಿ ರೈತ

Published:
Updated:
ನಿವೃತ್ತ ನೌಕರ ಈಗ ಯಶಸ್ವಿ ರೈತ

ರೈತರು ಬೇಸಾಯ ಬಿಟ್ಟು ಬೇರೆ ಕೆಲಸ ಹುಡುಕಿಕೊಂಡು ನಗರಗಳತ್ತ ಹೊರಟಿರುವ ಈ ಹೊತ್ತಿನಲ್ಲಿ ಧಾರವಾಡದ ಅಂಚೆ ಇಲಾಖೆಯ ನೌಕರರೊಬ್ಬರು ಸ್ವಯಂ ನಿವೃತ್ತಿ ಪಡೆದು ಹುಟ್ಟಿದೂರಿಗೆ ಹೋಗಿ ಬೇಸಾಯ ಮಾಡುತ್ತ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ.ಈ ರೈತರ ಹೆಸರು ಮಲ್ಲಿಕಾರ್ಜುನ ಗೌಡ ಪಾಟೀಲ. ಕಲಘಟಗಿ ತಾಲ್ಲೂಕಿನ ಗುಡ್ಡದಹುಲಿಕಟ್ಟಿ ಗ್ರಾಮದಲ್ಲಿ ಅವರು ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುತ್ತಾರೆ.ಮಲ್ಲಿಕಾರ್ಜುನ ಗೌಡ ಪಿಯುಸಿವರೆಗೆ ಓದಿ ನಂತರ ಧಾರವಾಡದಲ್ಲಿ ಅಂಚೆ ಇಲಾಖೆ ಸೇರಿದ್ದರು.

2010 ಸೆಪ್ಟೆಂಬರ್‌ನಲ್ಲಿ ಸ್ವಯಂ ನಿವೃತ್ತಿ ಪಡೆದು ಹುಟ್ಟೂರಿಗೆ ಹಿಂದಿರುಗಿ ತಮ್ಮ ಹೊಲದಲ್ಲಿ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡಲು ಮುಂದಾದರು. ಗೌಡರು ರೈತರ ಕುಟುಂಬದಿಂದ ಬಂದವರು. ಅವರು ಮತ್ತೆ ಬೇಸಾಯ ಮಾಡಲು ಅದೇ ಕಾರಣ. ಅವರ ಮೂವರು ಮಕ್ಕಳಲ್ಲಿ ಒಬ್ಬ ಅವರಿಗೆ ನೆರವಾಗುತ್ತಿದ್ದಾರೆ.ಮಲ್ಲಿಕಾರ್ಜುನ ಗೌಡರಿಗೆ ಸಾವಯವ ಬೇಸಾಯದಲ್ಲಿ ಹೆಚ್ಚಿನ ಅನುಭವ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರದ ಕಲಬೆರಕೆಯಿಂದ ಜನರು ರೋಗ ರುಚಿನಗಳಿಗೆ ತುತ್ತಾಗುತ್ತಿದ್ದಾರೆ ಎಂಬುದು ಅವರ ಗಮನಕ್ಕೆ ಬಂದಿದೆ. ಹೀಗಾಗಿ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ ಬೇಸಾಯ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅವರಿಗೆ ಏಳು ಎಕರೆ ಭೂಮಿ ಇದೆ. ಒಂದೂವರೆ ಇಂಚು ನೀರು ಬರುವ ಕೊಳವೆ ಬಾವಿ ಇದೆ. ಅದನ್ನು ನಂಬಿಕೊಂಡು ತೋಟ ಮಾಡಿದ್ದಾರೆ.ಪ್ರಾರಂಭದಲ್ಲಿ ಗೋಡಂಬಿ, ಮಾವು, ನುಗ್ಗೆ, ಚಿಕ್ಕು ಮೊದಲಾದ ಬಹುವಾರ್ಷಿಕ  ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡರು. ನಂತರ ಪಪ್ಪಾಯಿ ಬಾಳೆ, ಪೇರಲ, ಸೀತಾಫಲ, ಅಂಜೂರ, ನಿಂಬೆ, ಮೊಸಂಬಿ, ಹಲಸು, ನೀರಲ ಹುಣಸೆ, ಮುಂತಾದವುಗಳನ್ನು ಸಾವಯವ ಪದ್ಧತಿಯಲ್ಲಿ  ಬೆಳೆಯುವ ಪ್ರಯೋಗಕ್ಕೆ ಮುಂದಾದರು. ಬೆಳೆದ ಬಹುತೇಕ ಉತ್ಪನ್ನಗಳನ್ನು ಮನೆಯಲ್ಲಿ ಬಳಸಿ ಹೆಚ್ಚಾದ್ದನ್ನು ಮಾರಾಟ ಮಾಡುತ್ತಾರೆ.ಕೃಷಿ ತ್ಯಾಜ್ಯಗಳಿಂದ ಎರೆಹುಳು ಗೊಬ್ಬರ, ಕಾಂಪೋಸ್ಟ್ ಗೊಬ್ಬರ ತಯಾರಿಸುತ್ತಾರೆ. ಜೀವಸಾರ ಘಟಕ ನಿರ್ಮಿಸಿಕೊಂಡಿದ್ದಾರೆ. ರಾಸಾಯನಿಕ ಔಷಧ, ಗೊಬ್ಬರ ಬಳಸದೆ ಬದನೆ,  ಟೊಮೆಟೊ, ಬೆಂಡೆ, ಮೆಣಸಿನಕಾಯಿ, ಚವಳಿ, ಮೂಲಂಗಿ, ರಾಜಗಿರಿ ಸೊಪ್ಪು ಮತ್ತಿತರ ತರಕಾರಿಗಳು ಹಾಗೂ  ಸೇಲಂ ಸಣ್ಣ, ಬಾದಷಾ, ಅಸುಡಿ (ಕೆಂಪಕ್ಕಿ), ಜಿಡ್ಡು, ಬಾಸುಮತಿ (ಬೆಳಗಾಂ), ಮುಗಧ ಸುಗಂಧ ಹೆಸರಿನ ದೇಸಿ ಭತ್ತಗಳನ್ನು ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಹಸು, ಕೋಳಿಗಳನ್ನು ಸಾಕಿದ್ದಾರೆ.ಸ್ವಯಂ ನಿವೃತ್ತಿ ಪಡೆದು ಊರಿಗೆ ಬಂದು ಬೇಸಾಯ ಮಾಡುತ್ತೇನೆ ಎಂದಾಗ ಅವರನ್ನು ನೋಡಿ ನಕ್ಕ ಅನೇಕ ರೈತರು ಈಗ ಅಚ್ಚರಿ ವ್ಯಕ್ತಪಡಿಸುತ್ತಾರೆ. ಸಾವಯವ ಬೇಸಾಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದ ಕ್ರಮ ಅನೇಕರಿಗೆ ಅಚ್ಚರಿ ಮೂಡಿಸಿದೆ. ಅವರ ತೋಟಕ್ಕೆ  ಕೃಷಿ ಇಲಾಖೆ,ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಹಾಗೂ ಸಾವಯವ ರೈತರು ಭೇಟಿ ನೀಡಿದ್ದಾರೆ.ತಮ್ಮಂತೆ ತಮ್ಮ ಊರಿನ ಇತರ ರೈತರೂ ಸಾವಯವ ಬೇಸಾಯ ಪದ್ಧತಿ ಅನುಸರಿಸಿ ವಿಷಮುಕ್ತ ಆಹಾರ ಧಾನ್ಯ, ಹಣ್ಣು, ತರಕಾರಿಗಳನ್ನು ಬೆಳೆಯಬೇಕು ಎಂಬುದು ಗೌಡರ ಆಸೆ.ಅದಕ್ಕಾಗಿ ಗ್ರಾಮ ಮಟ್ಟದಲ್ಲಿ ತಿಳುವಳಿಕೆ, ಜಾಗೃತಿ ಸಭೆಗಳನ್ನು ಸಂಘಟಿಸುತ್ತಾರೆ.ಸಾವಯವ ಪದ್ಧತಿಯಲ್ಲಿ ಪ್ರಾರಂಭದಲ್ಲಿ ಹೆಚ್ಚಿನ ಇಳುವರಿ ಪಡೆಯುವುದು ಕಷ್ಟ. ಆದರೆ ನಂತರದ ವರ್ಷಗಳಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಧಾರವಾಡದಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಇದೆ. ಅಲ್ಲಿ ಪ್ರತಿ ಭಾನುವಾರ ಮತ್ತು ಗುರುವಾರ ಸಾವಯವ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಇದೆ. ಅಲ್ಲಿಗೆ ರೈತರು ತಮ್ಮ ಉತ್ಪನ್ನಗಳನ್ನು ಒಯ್ಯಬಹುದು ಎನ್ನುತ್ತಾರೆ ಮಲ್ಲಿಕಾರ್ಜುನ ಗೌಡ. ಈಗ ಅವರು ‘ಸಾವಯವ ಕೃಷಿ ಪರಿವಾರ’ದ ಧಾರವಾಡ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಲ್ಲಿಕಾರ್ಜುನಗೌಡರ ಮೊಬೈಲ್ ನಂಬರ್ -9481284612.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry