ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಸೌಲಭ್ಯ

7

ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಸೌಲಭ್ಯ

Published:
Updated:
ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಸೌಲಭ್ಯ

ಬೆಂಗಳೂರು: ‘ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ಭಾಗ್ಯ ಯೋಜನೆ ಹಾಗೂ ವೈದ್ಯಕೀಯ ಮರು ಪಾವತಿ ಸೌಲಭ್ಯವನ್ನು ನಿವೃತ್ತ ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಲು ಚಿಂತನೆ ನಡೆದಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಹೇಳಿದರು.ನಗರದ ಕೋರಮಂಗಲದಲ್ಲಿರುವ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯ ಪೊಲೀಸ್ ಇಲಾಖೆಯ 99 ಮಂದಿ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ವಿತರಿಸಿ ಅವರು ಮಾತನಾಡಿದರು.‘ಸೇವೆಯಲ್ಲಿರುವ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲಾಗಿದ್ದು, ನಿವೃತ್ತ ಸಿಬ್ಬಂದಿಗೂ ಈ ಯೋಜನೆಯ ಲಾಭ ನೀಡಲು ನಿರ್ಧರಿಸಲಾಗಿದೆ. ವೈದ್ಯಕೀಯ ಮರು ಪಾವತಿ ಸೌಲಭ್ಯವನ್ನೂ ನಿವೃತ್ತ ಸಿಬ್ಬಂದಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ತವ್ಯ ನಿರ್ವಹಿಸುವ ವೇಳೆ ಸಾವನ್ನಪ್ಪುವ ಸಿಬ್ಬಂದಿಗೆ ಮೂರು ಲಕ್ಷ ರೂಪಾಯಿ ವಿಶೇಷ ವಿಮೆ ನೀಡಲಾಗುತ್ತಿದೆ. ಈ ಮೊತ್ತವನ್ನು ಹತ್ತು ಲಕ್ಷ ರೂಪಾಯಿಗೆ ಹೆಚ್ಚಿಸಲಾಗುತ್ತದೆ’ ಎಂದು ಅವರು ಭರವಸೆ ನೀಡಿದರು.‘ರಾಜ್ಯದಲ್ಲಿ ಕೈಗಾರಿಕಾ ಭದ್ರತಾ ಪಡೆ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಮೂರೂವರೆ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಪಡೆಯಲ್ಲಿ ವಿವಿಧ ದರ್ಜೆಯ ಒಟ್ಟು 1,060 ಸಿಬ್ಬಂದಿ ಇರಲಿದ್ದಾರೆ’ ಎಂದು ಅವರು ಹೇಳಿದರು.‘ನೂತನವಾಗಿ 25 ಪೊಲೀಸ್ ಠಾಣೆಗಳನ್ನು ಆರಂಭಿಸಲಾಗುತ್ತದೆ. 1965ರಿಂದ ಜಾರಿಯಲ್ಲಿರುವ ಪೊಲೀಸ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಹೊಸ ಕಾಯ್ದೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ. ಪೊಲೀಸ್ ವಸತಿ ಗೃಹಗಳ ದುರಸ್ತಿಗೆ 40 ಕೋಟಿ ರೂಪಾಯಿ ಒದಗಿಸಲಾಗುತ್ತದೆ. ಧಾರವಾಡದಲ್ಲಿರುವ ಪೊಲೀಸ್ ಮಕ್ಕಳ ವಸತಿ ಶಾಲೆಗೆ ನೀಡುವ ಅನುದಾನವನ್ನು ಒಂದು ಕೋಟಿ ರೂಪಾಯಿಯಿಂದ ಎರಡು ಕೋಟಿಗೆ ಹೆಚ್ಚಿಸಲಾಗಿದೆ’ ಎಂದರು.‘ಹದಿನೆಂಟು ವರ್ಷಗಳ ಸೇವೆ ಪೂರೈಸಿರುವ 969 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು 2,369 ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಮುಖ್ಯ ಕಾನ್‌ಸ್ಟೆಬಲ್ ಹುದ್ದೆಗೆ ಬಡ್ತಿ ನೀಡಲು ಮಂಜೂರಾತಿ ನೀಡಲಾಗಿದೆ’ ಎಂದು ಯಡಿಯೂರಪ್ಪ ತಿಳಿಸಿದರು.ಗೃಹ ಸಚಿವ ಆರ್.ಅಶೋಕ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಸ್.ಟಿ.ರಮೇಶ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿ, ಡಿಜಿಪಿಗಳಾದ ಎಂ.ಕೆ.ಶ್ರೀವಾಸ್ತವ್, ಎನ್.ಅಚ್ಯುತರಾವ್ ಮತ್ತಿತರರು ಸಮಾರಂಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry