ನಿವೃತ್ತ ಮುಖ್ಯ ಅಧೀಕ್ಷಕ ಲಕ್ಷ್ಮಿನಾರಾಯಣ

7

ನಿವೃತ್ತ ಮುಖ್ಯ ಅಧೀಕ್ಷಕ ಲಕ್ಷ್ಮಿನಾರಾಯಣ

Published:
Updated:

ಬೆಂಗಳೂರು: `ಜೈಲು ಎಂದರೆ ಜೂಜು ಅಡ್ಡೆಯಂತಾಗಿದೆ. ಕೈದಿಗಳಿಗೆ ಜೈಲಿನಲ್ಲಿ ನಿಯಂತ್ರಣವೇ ಇಲ್ಲದಂತಾಗಿದೆ. ಕಾರಾಗೃಹ ವ್ಯವಸ್ಥೆಯಲ್ಲಿ ಬದಲಾವಣೆ ತರದೇ ಇದ್ದರೆ ಸೈಕೊ ಶಂಕರ್ ಪರಾರಿಯಾದಂಥ ಘಟನೆಗಳು ಮರುಕಳಿಸುತ್ತವೆ...'ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನಿವೃತ್ತ ಮುಖ್ಯ ಅಧೀಕ್ಷಕ ಟಿ.ಎಚ್.ಲಕ್ಷ್ಮಿನಾರಾಯಣ ಅವರ ಅಭಿಪ್ರಾಯವಿದು. `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, ಜೈಲಿನ ಭದ್ರತಾ ವ್ಯವಸ್ಥೆಯ ವಾಸ್ತವ ಚಿತ್ರಣವನ್ನು ಬಿಚ್ಚಿಟ್ಟರು.`ಜೈಲು ಎಂದರೆ ಜೂಜು ಅಡ್ಡೆಯಾಗಿ ಮಾರ್ಪಾಡಾಗಿದೆ. ಅಲ್ಲಿನ ಜೀವನಾನುಭವಗಳನ್ನು ಕೇವಲ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. 40 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಕಾರಾಗೃಹದಲ್ಲಿ ಒಟ್ಟು ಮೂರು ವಿಶೇಷ ಭದ್ರತಾ ಕೊಠಡಿಗಳಿವೆ. ಮೊದಲ ಕೊಠಡಿಯಲ್ಲಿ ಕುಖ್ಯಾತ ರೌಡಿಗಳನ್ನು, ಎರಡನೇ ಕೊಠಡಿಯಲ್ಲಿ ಉಗ್ರಗಾಮಿಗಳು ಮತ್ತು ನಕ್ಸಲರನ್ನು ಹಾಗೂ 3ನೇ ಕೊಠಡಿಯಲ್ಲಿ ಕೈದಿ ರಾಜಕಾರಣಿಗಳನ್ನು ಬಂಧಿಸಿಡಲಾಗುತ್ತದೆ. ಇವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿರುತ್ತದೆ. ಆದರೆ, ಶಂಕರ ಮನೋರೋಗಿಯಾಗಿದ್ದರಿಂದ ಬಂಧಿಸಿದಾಗಿನಿಂದಲೂ ಆತನನ್ನು ಆಸ್ಪತ್ರೆ ವಿಭಾಗದಲ್ಲೇ ಇಡಲಾಗಿತ್ತು' ಎಂದರು.`ಸೈಕೊ ಶಂಕರ್‌ನ ಕಾವಲಿಗಾಗಿಯೇ ಈ ಹಿಂದೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜತೆಗೆ ಮೇಲಾಧಿಕಾರಿಗಳು ಆಗಾಗ್ಗೆ ಆತನ ಕೊಠಡಿಯನ್ನು ಪರಿಶೀಲಿಸುತ್ತಿದ್ದರು. ಆದರೆ, ಈಚೆಗೆ ಸಿಬ್ಬಂದಿ ಗಸ್ತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಧಿಕಾರಿಗಳು ಹಲವು ದಿನಗಳಿಂದ ಶಂಕರನ ಕೊಠಡಿಗೆ ಭೇಟಿ ನೀಡಿಯೇ ಇಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆತನ ಕೊಠಡಿಯಲ್ಲಿ ಇಡಲಾಗಿದ್ದ ನೋಂದಣಿ ಪುಸ್ತಕವನ್ನು ಪರಿಶೀಲಿಸಿದರೆ ಅಧಿಕಾರಿಗಳ ಗಸ್ತಿನ ವಿವರಗಳು ಬಯಲಾಗುತ್ತವೆ' ಎಂದು ಹೇಳಿದರು.ಸಿಬ್ಬಂದಿ ಕೊರತೆ: ವಿಚಾರಣಾಧೀನ ಹಾಗೂ ಸಜಾಬಂಧಿಗಳು ಸೇರಿದಂತೆ ಈ ಜೈಲಿನಲ್ಲಿ 2,000 ಮಂದಿಯನ್ನು ಬಂಧಿಸಿಡಬಹುದು. ಆದರೆ, ಈಗ 4,000ಕ್ಕೂ ಹೆಚ್ಚು ಮಂದಿ ಜೈಲಿನಲ್ಲಿದ್ದಾರೆ. ಇಷ್ಟು ಪ್ರಮಾಣದ ಕೈದಿಗಳಿಗೆ ಜೈಲಿನಲ್ಲಿ ಕೊಠಡಿ ಕೊರತೆ ಎದುರಾಗಿದ್ದು, ಪ್ರತಿ ಸೆಲ್‌ನಲ್ಲಿ ಸುಮಾರು ಹತ್ತು ಜನರನ್ನು ಇಡಲಾಗಿದೆ.ಮುಖ್ಯ ಅಧೀಕ್ಷಕ, ಸಹಾಯಕ ಅಧೀಕ್ಷಕ, ಜೈಲರ್, ವಾರ್ಡನ್‌ಗಳು ಸೇರಿದಂತೆ ಸುಮಾರು 300 ಸಿಬ್ಬಂದಿ ಕಾರಾಗೃಹದಲ್ಲಿದ್ದಾರೆ. ಈ ಪೈಕಿ ಹಿರಿಯ ಅಧಿಕಾರಿಗಳ ಮನೆಗೆಲಸಕ್ಕೆ, ವಾಹನ ಚಾಲನೆಗೆ, ಇಲಾಖೆಯ ಕೇಂದ್ರ ಕಚೇರಿಗೆ ಸುಮಾರು 60 ಮಂದಿ ನಿಯೋಜನೆಯಾಗಿರುತ್ತಾರೆ. ಇನ್ನುಳಿದ ಸಿಬ್ಬಂದಿ ವಿವಿಧ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಹತ್ತು ಕೈದಿಗಳಿಗೆ ಒಬ್ಬ ಸಿಬ್ಬಂದಿ ಭದ್ರತೆ ಒದಗಿಸಬೇಕೆಂಬ ನಿಯಮವಿದೆಯಾದರೂ, ಪ್ರಸ್ತುತ ನೂರು ಮಂದಿ ಕೈದಿಗಳ ಕಾವಲಿಗೆ ಒಬ್ಬ ಸಿಬ್ಬಂದಿ ಇದ್ದಾರೆ. ಸರ್ಕಾರ ಮೊದಲು ಈ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ ಎಂದು ಸಲಹೆ ನೀಡಿದರು.ಯರವಡಾ ಜೈಲು ಮಾದರಿ: ಪುಣೆಯ ಯರವಡಾ ಜೈಲಿನ ಮಾದರಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭದ್ರತೆ ಕಲ್ಪಿಸಬೇಕು. ಅಲ್ಲಿ ಕಾರಾಗೃಹ ಪ್ರವೇಶ ದ್ವಾರದ ಬಳಿ ಇರುವ ಗೋಡೆಯಿಂದ ನೂರು ಅಡಿ ಅಂತರದಲ್ಲಿ ಮತ್ತೊಂದು ಗೋಡೆ ನಿರ್ಮಿಸಲಾಗಿದೆ. ಕಾರಾಗೃಹದ ಸಿಬ್ಬಂದಿ ಮೊದಲ ಗೋಡೆ ಬಳಿ ಭದ್ರತೆಯ ಉಸ್ತುವಾರಿ ಹೊತ್ತಿದ್ದರೆ, ಕೇಂದ್ರ ಸಶಸ್ತ್ರ ಪೊಲೀಸ್ ಮೀಸಲು ಪಡೆಯು (ಸಿಆರ್‌ಪಿಎಫ್) ಮುಖ್ಯ ಗೋಡೆ ಬಳಿ ಭದ್ರತಾ ಕಾರ್ಯದಲ್ಲಿರುತ್ತಾರೆ. ಜತೆಗೆ, ಎರಡು ಗೋಡೆಗಳ ಅಂತರದ ಖಾಲಿ ಪ್ರದೇಶದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಜೀಪ್‌ನಲ್ಲಿ ದಿನವಿಡೀ ಗಸ್ತು ತಿರುಗುತ್ತಾರೆ. ಅಲ್ಲದೇ, ಈ ಜೈಲಿನಲ್ಲಿರುವ ನಾಲ್ಕು ವೀಕ್ಷಣಾ ಗೋಪುರಗಳಿಂದ ಸಿಬ್ಬಂದಿ ಹಗಲಿರುಳು ಆವರಣ ಪರಿಶೀಲಿಸುತ್ತಿರುತ್ತಾರೆ ಎಂದು ಲಕ್ಷ್ಮಿನಾರಾಯಣ ಮಾಹಿತಿ ನೀಡಿದರು.ಸಿಸಿಟಿವಿ ಕ್ಯಾಮೆರಾ ಸರಿ ಇಲ್ಲ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಪ್ರವೇಶ ದ್ವಾರದಲ್ಲಿ ಮೂರು, ಪಿಡಿಪಿ ನಾಯಕ ಅಬ್ದುಲ್ ನಾಸರ್ ಮದನಿಯ ಸೆಲ್ ಹಾಗೂ ತೆಲಗಿ ಸೆಲ್‌ನ ದೃಶ್ಯಗಳು ದಾಖಲಾಗುವಂತೆ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಂದರ್ಶಕರ ಕೊಠಡಿಯಲ್ಲಿ ಮೂರು ಕ್ಯಾಮೆರಾಗಳಿವೆ. ಕೇವಲ ಒಂಬತ್ತು ಕ್ಯಾಮೆರಾಗಳು ಇಡೀ ಆವರಣವನ್ನು ಪರಿಶೀಲಿಸಬೇಕಿದೆ. ಆದರೆ, ಕಾರಾಗೃಹಕ್ಕೆ ಅಗತ್ಯ ಸಿಬ್ಬಂದಿಯನ್ನು ಒದಗಿಸಿದರೆ ಸಿಸಿಟಿವಿ ಅಳವಡಿಸುವ ಪ್ರಮೇಯವೇ ಇರುವುದಿಲ್ಲ.ತಮಗೆ ವಹಿಸಿರುವ ಕೆಲಸವನ್ನು ಸಿಬ್ಬಂದಿ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಯಾವೊಬ್ಬ ಕೈದಿಯೂ ಪರಾರಿಯಾಗುವಂತಹ ಪ್ರಸಂಗ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry