ಶನಿವಾರ, ಮೇ 8, 2021
20 °C

ನಿವೇಶನದಿಂದ ಕಲ್ಲುಗಳ ತೆರವಿಗೆ ಯತ್ನ: ಪಾಲಿಕೆ ಸದಸ್ಯರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ವಿಶ್ವೇಶ್ವರಪುರ ವಾರ್ಡ್‌ನಲ್ಲಿ ಬಿಬಿಎಂಪಿಗೆ ಸೇರಿದ್ದ ನಿವೇಶನದಲ್ಲಿ ಸಂಗ್ರಹಿಸಿ ಇಡಲಾಗಿದ್ದ ಕಲ್ಲುಗಳನ್ನು ಯಾರಿಗೂ ಮಾಹಿತಿ ನೀಡದಂತೆ ಏಕಾಏಕಿ ಎತ್ತಂಗಡಿ ಮಾಡಲು ನಡೆದ ಯತ್ನ ಬಿಬಿಎಂಪಿ ಸದಸ್ಯರನ್ನು ಕೆರಳಿಸಿದೆ.ವಿಶ್ವೇಶ್ವರಪುರದ ರೋಶನ್ ಬಾಗ್ ರಸ್ತೆಯಲ್ಲಿರುವ ಸುಮಾರು 12,000 ಚದರ ಅಡಿ ವಿಸ್ತೀರ್ಣದ ಬಿಬಿಎಂಪಿ ನಿವೇಶನ ವಿವಾದದಲ್ಲಿ ಇತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಬಿಬಿಎಂಪಿ ಪರವಾಗಿ ತೀರ್ಪು ಹೊರಬಿದ್ದಿತ್ತು. ಮಾಜಿ ಮೇಯರ್ ಪಿ.ಆರ್. ರಮೇಶ್ ಸೇರಿದಂತೆ ಹಲವರು ನಿವೇಶನವನ್ನು ಬಿಬಿಎಂಪಿಗೆ ಉಳಿಸಿಕೊಳ್ಳಲು ಹೋರಾಡಿದ್ದರು.ಕೋಟ್ಯಂತರ ಬೆಲೆ ಬಾಳುವ ಆಸ್ತಿ ಮತ್ತೆ ಪರರ ಪಾಲಾಗಲು ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಬಿಬಿಎಂಪಿ ಕಾಮಗಾರಿಗಳಲ್ಲಿ ಉಳಿದ ಕಲ್ಲು ಮತ್ತಿತರ ಸಾಮಗ್ರಿಗಳನ್ನು ಆ ಪ್ರದೇಶದಲ್ಲಿ ಸಂಗ್ರಹಿಸಲಾಗಿತ್ತು. ಬುಧವಾರ ಸಂಜೆ ಏಕಾಏಕಿ ಜೆಸಿಬಿ ಮತ್ತು ಲಾರಿಗಳೊಂದಿಗೆ ಬಂದ ಕೆಲವರು ಕಲ್ಲು ಸಾಗಾಟದ ಪ್ರಕ್ರಿಯೆ ಆರಂಭಿಸಿದ್ದರು. ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಎನ್.ಜಿ. ಕೃಷ್ಣಾರೆಡ್ಡಿ ತಕ್ಷಣ ಅದಕ್ಕೆ ತಡೆಯೊಡ್ಡಿದರು.`ಬಿಬಿಎಂಪಿ ಎಂಜಿನಿಯರ್‌ಗಳನ್ನು ಸಂಪರ್ಕಿಸಲು ಯತ್ನಿಸಿದರೆ ಸಾಧ್ಯವಾಗಲಿಲ್ಲ. ಆದ್ದರಿಂದಲೇ ಸೆಂಟ್ರಲ್ ಠಾಣೆ ಪೊಲೀಸರಿಗೆ ದೂರು ನೀಡಿದೆ. ಜೆಸಿಬಿ ಮತ್ತು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದರು' ಎಂದು ಕೃಷ್ಣಾರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.`ಗುರುವಾರ ಬೆಳಿಗ್ಗೆ ಎಂಜಿನಿಯರ್‌ಗಳು ಪತ್ರವೊಂದನ್ನು ನೀಡಿದ್ದು, ಶಾಸಕರ ಸೂಚನೆಯಂತೆ ಈ ಕ್ರಮ ಕೈಗೊಂಡಿದ್ದೇವೆ' ಎಂಬ ಮಾಹಿತಿ ನೀಡಿದ್ದಾರೆ ಆದರೆ, ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ, ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಕಲ್ಲು ತೆರವುಗೊಳಿಸಲು ಮುಂದಾಗಿದ್ದು ಏಕೆ' ಎಂದು ಅವರು ಪ್ರಶ್ನಿಸಿದರು.`ಬಡಾವಣೆಯಲ್ಲಿ ಒಂದೂ ಕ್ರೀಡಾಂಗಣ ಇಲ್ಲ. ಆ ಪ್ರದೇಶದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಯೋಚನೆ ಇದೆ. ಅದನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡಿಕೊಳ್ಳಲು ಬಿಡುವುದಿಲ್ಲ' ಎಂದು ವಾರ್ಡ್ ನಂ. 147ರ ಸದಸ್ಯ ಅನಿಲಕುಮಾರ್ ಹೇಳಿದರು.`ಒತ್ತುವರಿಯಾದ ಇನ್ನಷ್ಟು ಪ್ರದೇಶ ನಮ್ಮ ವಾರ್ಡ್‌ನಲ್ಲಿದ್ದು, ಅದನ್ನೂ ತೆರವುಗೊಳಿಸಬೇಕಿದೆ' ಎಂದು ತಿಳಿಸಿದರು. `ಕಲ್ಲುಗಳ ಸಂದಿಯಲ್ಲಿ ಹಾವುಗಳು ನೆಲೆ ಕಂಡುಕೊಂಡಿದ್ದು ತೊಂದರೆಯಾಗುತ್ತಿದೆ ಎನ್ನುವ ದೂರು ಸಾರ್ವಜನಿಕರಿಂದ ಬಂದಿತ್ತು. ದುರ್ನಾತ ಹರಡಿದೆ ಎಂಬ ದೂರೂ ಇತ್ತು. ಹೀಗಾಗಿ ಅಲ್ಲಿದ್ದ ಕಲ್ಲುಗಳನ್ನು ಸಾಗಿಸಿ, ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದ್ದೆ' ಎಂದು ಶಾಸಕ ದೇವರಾಜ್ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.